×
Ad

ಕರ್ನಾಟಕ ಭಾವ ಬಂಧನದ ಪ್ರತೀಕ: ಸಚಿವ ಕಾಗೋಡು

Update: 2016-11-01 22:16 IST

ಶಿವಮೊಗ್ಗ, ನ. 1: ಕನ್ನಡ ನಾಡು, ನುಡಿ, ಸಂಸ್ಕೃತಿ, ಪರಂಪರೆ, ಇಲ್ಲಿನ ಆಚರಣೆ ಎಲ್ಲವೂ ವಿಶ್ವಮಾನ್ಯ ಗೌರವಗಳಿಗೆ ಪಾತ್ರವಾಗಿದೆ. ಕರ್ನಾಟಕ ಕೇವಲ ರಾಜ್ಯವಲ್ಲ, ಕನ್ನಡಿಗರ ಭಾವ ಬಂಧನದ ಪ್ರತೀಕವಾಗಿದೆ. ಕನ್ನಡ ಭಾಷೆಯನ್ನು ಸದೃಢವಾಗಿ ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ರಾಜ್ಯ ಕಂದಾಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪತಿಳಿಸಿದ್ದಾರೆ.

ಮಂಗಳವಾರ ನಗರದ ಡಿ.ಎ.ಆರ್. ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿದ ಬಳಿಕ ನಾಗರಿಕರನ್ನುದ್ದೇಶಿಸಿ ಅವರು ಮಾತನಾಡಿದರು. ನವೆಂಬರ್ 1 ಕನ್ನಡಿಗರಿಗೆ ಹೆಮ್ಮೆಯ ದಿನವಾಗಿದೆ. ಈ ದಿನದಂದು ಸದೃಢ ಹಾಗೂ ಸಮೃದ್ಧ ನಾಡನ್ನು ಕಟ್ಟಲು ಶ್ರಮಿಸಿದ ನಾಡಿನ ಕವಿಗಳು, ಕಲಾವಿದರು, ಸಾಹಿತಿಗಳು, ಸಂತರು ಹಾಗೂ ಕರ್ನಾಟಕದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿದ ಎಲ್ಲಾ ಗಣ್ಯಮಾನ್ಯರನ್ನು ಗೌರವಪೂರ್ವಕವಾಗಿ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.

ಮೈಸೂರು ವೌರ್ಯರು, ಕದಂಬರು, ತಲಕಾ ಡಿನ ಗಂಗರು, ಹೊಯ್ಸಳರು, ವಿಜಯನಗರದ ಅರಸರು, ಚಾಲುಕ್ಯರು, ರಾಷ್ಟ್ರಕೂಟರು, ಮೈಸೂರಿನ ಒಡೆಯರು ಮುಂತಾದ ಅನೇಕ ರಾಜ ಮನೆತನಗಳು ಈ ನಾಡಿಗೆ ನೀಡಿದ ಕೊಡುಗೆ ಅಪಾರವಾಗಿದೆ. ದಾಸಶ್ರೇಷ್ಠ ಕನಕದಾಸರು, ಪುರಂದರದಾಸರು, ಸರ್ವಜ್ಞ, ಶಿಶುನಾಳ ಶರೀಫರಂತಹ ಸಂತಕವಿಗಳು, ಸಾಮಾಜಿಕ ಕ್ರಾಂತಿಯ ಹರಿಕಾರ ಜಗಜ್ಯೋತಿ ಬಸವಣ್ಣನವರಂಥ ವಚನಕಾರರು ದಾರ್ಶನಿಕರು ಬಾಳಿ ಬದುಕಿದ ನೆಲ ಇದು ಎಂದು ಅವರು, ಸ್ಮರಿಸಿದರು.

ಹಿಂದೂ, ಮುಸ್ಲಿಮ್, ಕ್ರೈಸ್ತರು, ಬೌದ್ಧರು, ಜೈನರು, ಸಿಖ್ಖರು, ಮುಂತಾದ ಎಲ್ಲಾ ಧರ್ಮೀಯರು, ಧರ್ಮ ಸಹಿಷ್ಣುತೆ, ಸಮನ್ವಯತೆ, ಸೌಹಾರ್ದತೆಯಿಂದ ಬದುಕುತ್ತಿರುವ ನಾಡು ನಮ್ಮದು. ಕನ್ನಡ ಭಾಷೆ ಜಗತ್ತಿನಲ್ಲಿಯೇ ಅತ್ಯಂತ ಶ್ರೀಮಂತ ಸಾಹಿತ್ಯ ಹೊಂದಿದ್ದು, ಕನ್ನಡದ 8 ಜನ ಸಾಹಿತ್ಯ ಪರಿಚಾರಕರು ಸಾಹಿತ್ಯದ ಅತ್ಯುನ್ನತ ಪ್ರಶಸ್ತಿಯಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಸಚಿವ ಕಾಗೋಡು ಪ್ರಶಂಸಿಸಿದರು.

ಶಿವಮೊಗ್ಗದ ಜನತೆ ಅತ್ಯಂತ ಪ್ರಜ್ಞಾವಂತರು, ಈ ನೆಲದ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಎಂದೂ ಆರಾಧಿಸುವವರು. ಇಂತಹ ಸಹೃದಯಿ ಬಂಧುಗಳ ಅಭೀಷ್ಟೆಯಂತೆ ಜಿಲ್ಲೆಯಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ವಿಕಾಸಕ್ಕೆ ಸರಕಾರ ವಿಶೇಷ ಗಮನಹರಿಸಿ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತದೆ ಎಂದರು. ಶಾಸಕ ಕೆ. ಬಿ. ಪ್ರಸನ್ನಕುಮಾರ್, ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಮೇಯರ್ ಎಸ್. ಕೆ. ಮರಿಯಪ್ಪ, ಜಿಲ್ಲಾಧಿಕಾರಿ ವಿ. ಪಿ. ಇಕ್ಕೇರಿ, ಸಿಇಒ ರಾಕೇಶ್‌ಕುಮಾರ್, ಎಸ್ಪಿ ಅಭಿನವ್ ಖರೆ ಮತ್ತಿತರರು ಉಪಸ್ಥಿತರಿದ್ದರು.

ಮನಸೂರೆಗೊಂಡ ಆಕರ್ಷಕ ನೃತ್ಯಗಳು

ರಾಜ್ಯೋತ್ಸವದ ನಿಮಿತ್ತ ಏರ್ಪಡಿಸಲಾಗಿದ್ದ ಜಾನಪದ ನೃತ್ಯ, ಕಲಾ ತಂಡಗಳ ಪ್ರದರ್ಶನ ನೋಡುಗರನ್ನು ಆಕರ್ಷಿಸುವಲ್ಲಿ ಯಶಸ್ವಿಯಾದವು. ತೀಥಹಳ್ಳಿ ತಾಲೂಕು ನೆಲ್ಲಿಸರದ ಪುರುಷರ ಡೊಳ್ಳು ಕುಣಿತ, ಸಾಗರದ ಶಾರದಾ ಮಹಿಳಾ ಡೊಳ್ಳಿನ ತಂಡ, ಮೈಸೂರು ಮಹದೇವಯ್ಯ ನೇತೃತ್ವದ ಕಂಸಾಳೆ ತಂಡ, ಬಂಟ್ವಾಳದ ದಿವಾಕರದಾಸ್ ನೇತೃತ್ವದ ಗೊಂಬೆ ಕುಣಿತ, ಉತ್ತರ ಕನ್ನಡ ಜಿಲ್ಲೆಯ ಚಂದ್ರಕಾಂತ ಆಗೇರ ನೇತೃತ್ವದ ಸಿಂಹ ನೃತ್ಯ, ಕುಮಟಾದ ಹಾಲಕ್ಕಿ ಕುಣಿತ, ಮಂಡ್ಯದ ದುರ್ಗಾ ಕುಣಿತ, ವೀರಭದ್ರ ಕುಣಿತ ಮತ್ತು ನಗಾರಿ ಬಡಿತ ಆಕರ್ಷಕವಾಗಿತ್ತು.

ಜನಮೆಚ್ಚುಗೆ ಗಳಿಸಿದ ಸ್ಥಬ್ದಚಿತ್ರ ಪ್ರದರ್ಶನ

ಸ್ಥಬ್ದ ಚಿತ್ರ ವಿಭಾಗದಲ್ಲಿ ಆರೋಗ್ಯ ಇಲಾಖೆಯ ಧೂಮಪಾನದ ದುಷ್ಪರಿಣಾಮ, ಅರಣ್ಯ ಇಲಾಖೆಯ ವನ್ಯಮೃಗಗಳ ರಕ್ಷಣೆ, ಕೆಎಸ್ಸಾರ್ಟಿಸಿ ಕನ್ನಡ ಕ್ರಿಯಾ ಸಮಿತಿಯವರ ಕನ್ನಡ ಡಿಂಡಿಮ, ಡಾ. ರಾಜಕುಮಾರ್ ಮತ್ತು ಶಂಕರನಾಗ್ ಪಾತ್ರಧಾರಿಗಳ ವೈಭವ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಬಾಲ್ಯವಿವಾಹ ನಿಷೇಧ, ಕೃಷಿ ಇಲಾಖೆಯ ವಿವಿಧ ಯೋಜನಗೆಳ ಮತ್ತು ಜಿಪಂನ ಸ್ವಚ್ಛ ಭಾರತ್ ಜಾಗೃತಿ ಸ್ಥಬ್ದ ಚಿತ್ರಗಳು ಜನರ ಮನ ಸೆಳೆದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News