×
Ad

ರೈತನಿಗೆ ಪರಿಹಾರಕ್ಕಿಂತ ಕೃಷಿಗೆ ಆದ್ಯತೆ ಅಗತ್ಯ: ದಿನೇಶ್ ಅಮೀನ್ ಮಟ್ಟು

Update: 2016-11-01 22:18 IST

ಕಡೂರು, ನ.1: ದೇಶದಲ್ಲಿ ಎರಡು ಲಕ್ಷ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರೈತ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ರೈತರ ಸಮಸ್ಯೆ ಬಗ್ಗೆ ಯಾವುದೇ ಮಾಧ್ಯಮಗಳು ಸುದ್ದಿ ಮಾಡುವುದಿಲ್ಲ. ಪರಿಹಾರ ನೀಡುವುದಕ್ಕಿಂತ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿದಾಗ ಮಾತ್ರ ರೈತರಿಗೆ ಪರಿಹಾರ ದೊರಕಲಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಿಸಿದ್ದಾರೆ.

ಮಂಗಳವಾರ ಪಟ್ಟಣದ ಕಸಾಪ ಭವನದ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಆಚರಣೆ, ಕನ್ನಡ ದಿನಪತ್ರಿಕೆಗಳ ಖರೀದಿಸುವ ಮತ್ತು ಓದುವ ಸಂಸ್ಕೃತಿಯ ಶುಭಾರಂಭ’ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾಧ್ಯಮಗಳಿಗೆ ಓದುಗರಿಗಿಂತ ಗ್ರಾಹಕರು ಬೇಕಾಗಿದ್ದಾರೆ. ಈ ಸಂಸ್ಕೃತಿ ಇಂಗ್ಲಿಷ್ ಪತ್ರಿಕೆಗಳಿಂದಾಗಿ ಬಂದಿದೆ. ಯಾವುದೇ ಪ್ರಧಾನ ಮಂತ್ರಿಗಳು ದಿನಪತ್ರಿಕೆಗಳಿಗೆ ಸಂದರ್ಶನ ನೀಡುವುದಿಲ್ಲ. ದೃಶ್ಯ ಮಾಧ್ಯಮಗಳಿಗೆ ಮಾತ್ರ ಹೆಚ್ಚು ಆದ್ಯತೆ ನೀಡುತ್ತಾರೆ. ಅನ್ನಭಾಗ್ಯ ಯೋಜನೆ ಎಲ್ಲರೂ ಒಪ್ಪುವಂತಹ ಯೋಜನೆ. ಆದರೆ, ದೃಶ್ಯಮಾಧ್ಯಮಗಳು ಇದರ ಬಗ್ಗೆ ವಿರೋಧ ವ್ಯಕ್ತಪಡಿಸಿ ಇಲ್ಲಸಲ್ಲದ ಅಪಪ್ರಚಾರ ನಡೆಸಿದವು. ಇಂದು ಈ ಯೋಜನೆಗೆ ಬಜೆಟ್‌ನಲ್ಲಿ 3,000 ಕೋಟಿ ರೂ. ಬಳಕೆಯಾಗುತ್ತಿದೆ. ಜನಾಭಿಪ್ರಾಯ ಮೂಡಿಸುವ ಕೆಲಸವನ್ನು ಮಾಧ್ಯಮಗಳು ಮಾಡಬೇಕಿದೆ ಎಂದು ಹೇಳಿದರು.

 ಜನರ ಸಮಸ್ಯೆಗಳಿಗೆ ದೃಶ್ಯ ಮಾಧ್ಯಮಗಳು ಸ್ಪಂದಿಸಬೇಕಿದೆ. ಖಾಸಗಿ ಬದುಕಿನ ಬಗ್ಗೆ ಟಿ.ವಿ. ಗಳಲ್ಲಿ ದಾಳಿಗಳು ನಡೆಯುತ್ತಿವೆ. ದೃಶ್ಯ ಮಾಧ್ಯಮಗಳಲ್ಲಿ ಜ್ಯೋತಿಷಿಗಳ ಹಾವಳಿ ಹೆಚ್ಚಾಗಿವೆ. ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ. ಜಾತಿ ದುಡ್ಡು ಇಲ್ಲದೇ ರಾಜಕಾರಣ ಸಾಧ್ಯವಿಲ್ಲ ಎಂಬಂತಾಗಿದೆ ಎಂದು ನುಡಿದರು.

  ಗ್ರಾಮೀಣ ಪ್ರದೇಶದ ಜನರ ಅಭಿಮಾನದಿಂದ ಕನ್ನಡ ಉಳಿದಿದೆ. ಅಲ್ಲದೆ, ಪಟ್ಟಣದವರಿಂದಲ್ಲ ಎಂದ ಮಟ್ಟು, ದೇಶ ಹಾಳಾಗಲು ಬುದ್ಧಿವಂತರೆಂದು ಕೊಂಡವರು ಕಾರಣ ಎಂದ ಅವರು, ಮಕ್ಕಳಲ್ಲಿ ಓದುವ ಚಟವನ್ನು ಬೆಳೆಸಬೇಕೆಂದು ಕಿವಿಮಾತು ಹೇಳಿದರು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಮಾಧ್ಯಮ ಅಕಾಡಮಿ ಅಧ್ಯಕ್ಷ ಸಿದ್ಧರಾಜು, ಕೇರಳ, ತಮಿಳುನಾಡಿನಲ್ಲಿ ಗಾಡಿ ಎಳೆಯುವ ಕೂಲಿಯವರೂ ಪತ್ರಿಕೆ ಕೊಂಡು ಓದುತ್ತಾರೆ. ಇದು ನಮ್ಮ ರಾಜ್ಯದಲ್ಲೂ ಆಗಬೇಕಿದೆ ಎಂದು ಹೇಳಿದರು.

ಅಧ್ಯಕ್ಷತೆಯನ್ನು ಶಾಸಕ ವೈ.ಎಸ್.ವಿ. ದತ್ತ ವಹಿಸಿದ್ದರು. ತಹಶೀಲ್ದಾರ್ ಭಾಗ್ಯಾ, ತಾಪಂ. ಅಧ್ಯಕ್ಷ ರೇಣುಕಾ ಉಮೇಶ್, ಜಿ.ಪಂ. ಸದಸ್ಯರಾದ ಕಾವೇರಿ ಲಕ್ಕಪ್ಪ, ಬೀರೂರು ಪುರಸಭಾ ಅಧ್ಯಕ್ಷೆ ಸುನೀತಾ ರಮೇಶ್, ಕ.ರ.ವೇ. ಜಿಲ್ಲಾಧ್ಯಕ್ಷ ರುದ್ರೇಗೌಡ, ಕಸಾಪ ತಾಲೂಕು ಅಧ್ಯಕ್ಷ ವೈ.ಎಸ್. ರವಿಪ್ರಕಾಶ್, ನಗರಘಟಕ ಅಧ್ಯಕ್ಷ ಮಣಿ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News