×
Ad

ಮೂಲ ಸೌಕರ್ಯ ಅಭಿವೃದ್ಧಿ ಮೂಲಕ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿ: ಉಸ್ತುವಾರಿ ಸಚಿವ ಆರ್. ವಿ. ದೇಶಪಾಂಡೆ

Update: 2016-11-01 22:20 IST

 ಕಾರವಾರ, ನ.1: ಜಿಲ್ಲೆಯಲ್ಲಿ ರೈಲು ಮಾರ್ಗ, ಬಂದರು ಅಭಿವೃದ್ಧಿ, ಏರ್‌ಸ್ಟ್ರಿಪ್ ನಿರ್ಮಾಣ ಇತ್ಯಾದಿ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದ್ದು, ಈ ಮೂಲಕ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಯಾಗುವ ಭರವಸೆಯಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್. ವಿ. ದೇಶಪಾಂಡೆ ಹೇಳಿದ್ದಾರೆ.

ಅವರು ಮಂಗಳವಾರ ಪೊಲೀಸ್ ಪರೇಡ್ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಬಳಿಕ ಮಾತನಾಡುತ್ತಿದ್ದರು. ಜಿಲ್ಲೆಯ ಬಹುವರ್ಷಗಳ ಕನಸಾಗಿದ್ದ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ನಿರ್ಮಾಣಕ್ಕೆ ಈಗಾಗಲೇ ಹಸಿರು ನಿಶಾನೆ ದೊರೆತಿದ್ದು, ಸದರಿ ರೈಲು ಮಾರ್ಗ ನಿರ್ಮಾಣದಿಂದ ಹೆಚ್ಚಿನ ಪ್ರಗತಿ ನಿರೀಕ್ಷಿಸಲಾಗಿದೆ ಎಂದರು.

ತದಡಿಯಲ್ಲಿ ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ ಬಂದರು ನಿರ್ಮಾಣಕ್ಕೆ ಕೇಂದ್ರದ ಅನುಮತಿ ದೊರೆತಿದ್ದು, ಪ್ರಕ್ರಿಯೆ ಚಾಲನೆಯಲ್ಲಿದೆ. ಕುಮಟಾದ ಮಣಕಿಯಲ್ಲಿ ಏರ್‌ಸ್ಟ್ರಿಪ್ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. ಕಾರವಾರ, ಹೊನ್ನಾವರ ಮತ್ತು ಮಾವಿನ ಕುರ್ವೆ ಬಂದರುಗಳ ಅಭಿವೃದ್ಧಿ ಕಾರ್ಯಗಳನ್ನು ಸದ್ಯದಲ್ಲೇ ಆರಂಭಿಸಲಾಗುವುದು. ಜಿಲ್ಲೆಯ ಭೌಗೋಳಿಕ ಪರಿಸ್ಥಿತಿಗೆ ಅನುಗುಣವಾದ ಕೈಗಾರಿಕೆಗಳನ್ನು ಸ್ಥಾಪಿಸಲು ಎಲ್ಲಾ ರೀತಿಯ ನೆರವು ಒದಗಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಆಕರ್ಷಕ ಮೆರವಣಿಗೆ: ಸಮಾರಂಭಕ್ಕೂ ಮೊದಲು ಜಿಲ್ಲಾಧಿಕಾರಿ ಕಚೇರಿ ಆವರಣಯಿಂದ ಕನ್ನಡಾಂಭೆಯ ಭಾವಚಿತ್ರವನ್ನು ಹೊತ್ತ ಕನ್ನಡ ರಥದ ಮೆರವಣಿಗೆಗೆ ಸಚಿವರು ಚಾಲನೆ ನೀಡಿದರು. ವಿವಿಧ ಇಲಾಖೆಗಳ ಕುರಿತು ಮಾಹಿತಿ ನೀಡುವ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಗಮನ ಸೆಳೆದವು. ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ಸ್ತಬ್ಧಚಿತ್ರಗಳು ಜನಮೆಚ್ಚುಗೆ ಪಡೆದವು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ಹಳಿಯಾಳದ ಕಾಳಿಕಾ ಜಾಝ್ ತಂಡದ ಪ್ರದರ್ಶನ, ಬೇಡರ ವೇಷದ ಪ್ರದರ್ಶನ ಗಮನ ಸೆಳೆಯಿತು. ವಿವಿಧ ಶಾಲಾ ವಿದ್ಯಾರ್ಥಿಗಳು ಕನ್ನಡ ನಾಡು ನುಡಿ ಹಿರಿಮೆ ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭ ಲ್ಯಾಪ್‌ಟಾಪ್ ನೀಡಿ ಗೌರವಿಸಲಾಯಿತು.

ಜಿಲ್ಲಾಧಿಕಾರಿ ಎಸ್.ಎಸ್. ನಕುಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್. ಚಂದ್ರಶೇಖರ ನಾಯಕ, ಜಿ.ಪಂ. ಉಪಾಧ್ಯಕ್ಷ ಸಂತೋಷ ರೇಣಕೆ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಖ್ಯಾತ ಜಾನಪದ ಕಲಾವಿದೆ ಸುಕ್ರಿ ಬೊಮ್ಮಗೌಡ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನ.12, 13ರಂದು ಉದ್ಯೋಗ ಮೇಳ

ಜಿಲ್ಲೆಯ ಯುವಜನತೆಗೆ ಹೆಚ್ಚಿನ ಉದ್ಯೋಗ ಅವಕಾಶಗಳನ್ನು ತೆರೆಯಲು ನವೆಂಬರ್ 12ಮತ್ತು 13ರಂದು ಕಾರವಾರದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಈಗಾಗಲೇ 13ಸಾವಿರ ಅಭ್ಯರ್ಥಿಗಳು ತಮ್ಮ ಹೆಸರು ನೋಂದಾಯಿಸಿದ್ದು, ಸುಮಾರು 170ಕಂಪೆನಿಗಳು ಮೇಳದಲ್ಲಿ ಭಾಗವಹಿಸಲಿ ಎಂದು ಸಚಿವರು ನುಡಿದರು.

ತಾಲೂಕು ಮಟ್ಟದ ಕರಾವಳಿ ಉತ್ಸವ ಆಯೋಜನೆ

ಕಲೆ, ಕ್ರೀಡೆ, ಸಾಹಿತ್ಯ ಕ್ಷೇತ್ರದ ಅಭಿವೃದ್ಧಿಗೆ ಸರಕಾರ ಹೆಚ್ಚಿನ ಉತ್ತೇಜನ ನೀಡುತ್ತಿದ್ದು, ಡಿಸೆಂಬರ್ ತಿಂಗಳಲ್ಲಿ ಕಾರವಾರದಲ್ಲಿ ಕರಾವಳಿ ಉತ್ಸವ ಹಾಗೂ ಜೊಯಿಡಾ ಮತ್ತು ಮುಂಡಗೋಡಿನಲ್ಲಿ ತಾಲೂಕು ಮಟ್ಟದ ಕರಾವಳಿ ಉತ್ಸವ ಆಯೋಜಿಸಲಾಗುವುದು ಎಂದು ದೇಶಪಾಂಡೆ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News