×
Ad

ನ.3,4ರಂದು ರಾಜ್ಯಾದ್ಯಂತ ಪೆಟ್ರೋಲಿಯಂ ಡೀಲರ್‌ಗಳ ಮುಷ್ಕರ

Update: 2016-11-02 20:40 IST

ಬೆಂಗಳೂರು, ನ.2: ಅಪೂರ್ವಚಂದ್ರ ಸಮಿತಿ ವರದಿ ಜಾರಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಕರ್ನಾಟಕ ಪೆಟ್ರೋಲಿಯಂ ಡೀಲರ್ಸ್ ಫೆಡರೇಷನ್ ನ.3 ಮತ್ತು ನ.4 ರಂದು ಸರಕಾರಿ ಸ್ವಾಮ್ಯದ 3 ತೈಲ ಕಂಪೆನಿಗಳಿಂದ ಇಂಧನವನ್ನು ಖರೀದಿಸದೆ ಮುಷ್ಕರ ನಡೆಸಲು ನಿರ್ಧರಿಸಿದೆ.

ದೇಶದಲ್ಲೇ ಮೊದಲ ಬಾರಿಗೆ ಡೀಲರ್ಸ್‌ಗಳೆಲ್ಲ ಒಟ್ಟಾಗಿ ಮುಷ್ಕರಕ್ಕೆ ಮುಂದಾಗಿದ್ದಾರೆ. ಕಮಿಷನ್ ಹೆಚ್ಚಳ, ಅಧಿಕಾರಿಗಳ ಕಿರುಕುಳ ತಡೆ, ಪೆಟ್ರೋಲಿಯಂ ಉತ್ಪನ್ನಗಳ ಸಾಗಣೆ ವೆಚ್ಚ ಹೆಚ್ಚಳ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಸಂಘ ಆಗ್ರಹಿಸಿದೆ. ಬೇಡಿಕೆ ಈಡೇರುವವರೆಗೂ ರಾಜ್ಯಾದ್ಯಂತ ಪೆಟ್ರೋಲ್ ಬಂಕ್‌ಗಳು ಕೇವಲ ಒಂದು ಪಾಳಿಯಲ್ಲಿ ತೆರೆದಿರಲಿವೆ.

ಗ್ರಾಹಕರಿಗೆ ತೊಂದರೆ 

ನ.3 ಮತ್ತು ನ.4 ರಂದು ತೈಲ ಖರೀದಿಯನ್ನಷ್ಟೇ ಬಂಕ್‌ಗಳು ಸ್ಥಗಿತಗೊಳಿಸುತ್ತಿವೆ. ಹೀಗಾಗಿ ಈ ಎರಡೂ ದಿನಗಳು ಬಂಕ್‌ಗಳಲ್ಲಿ ಸಂಗ್ರಹವಾಗಿರುವ ಪೆಟ್ರೋಲ್ ಹಾಗೂ ಡೀಸೆಲ್ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಅಖಿಲ ಕರ್ನಾಟಕ ಪೆಟ್ರೋಲಿಯಂ ಡೀಲರ್ಸ್ ಫೆಡರೇಷನ್ ಅಧ್ಯಕ್ಷ ರವೀಂದ್ರನಾಥ್ ತಿಳಿಸಿದ್ದಾರೆ.

ನ.4ರ ಸಂಜೆ ವೇಳೆಗೆ ವೇಳೆಗೆ ಬೇಡಿಕೆಗಳನ್ನು ಈಡೇರಿಸದಿದ್ದರೆ ನ.5ರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲು ಸಂಘಟನೆ ತೀರ್ಮಾನಿಸಿದೆ. ಒಂದು ವೇಳೆ ಅನಿರ್ದಿಷ್ಟಾವಧಿ ಮುಷ್ಕರ ಆರಂಭವಾದಲ್ಲಿ ಗ್ರಾಹಕರಿಗೆ ತೊಂದರೆ ತಪ್ಪಿದ್ದಲ್ಲ. ಬಂಕ್‌ಗಳು ಕೇವಲ ಒಂದು ಪಾಳಿಯಲ್ಲಿ ಅಂದರೆ ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ಮಾತ್ರ ಬಂಕ್‌ಗಳು ತೆರೆದಿರುವುದರಿಂದ ದಟ್ಟಣೆ ಹೆಚ್ಚಾಗುವ ಸಾಧ್ಯತೆಯಿದೆ. ಆದರೆ ಕೇಂದ್ರ ಸರಕಾರ ಡೀಲರ್‌ಗಳ ಮುಖಂಡರ ಸಭೆ ಕರೆದು ಬೇಡಿಕೆ ಈಡೇರಿಕೆ ಭರವಸೆ ನೀಡಿದರೆ ಮುಷ್ಕರ ಕೈಬಿಡಲಾಗುವುದು ಎಂದು ರವೀಂದ್ರನಾಥ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News