×
Ad

ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ದಾಂಧಲೆ ಪ್ರಕರಣ

Update: 2016-11-02 21:59 IST

 ಶಿವಮೊಗ್ಗ, ನ.2: ವ್ಯಕ್ತಿಯೋರ್ವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೆ ವಿಫಲ ಯತ್ನ ಹಾಗೂ ಮನೆಯಲ್ಲಿ ದಾಂಧಲೆ ನಡೆಸಿ ತಲೆಮರೆಸಿಕೊಂಡಿದ್ದ ಐವರು ಆರೋಪಿಗಳನ್ನು ಶಿವಮೊಗ್ಗ ನಗರದ ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿಸಿದ್ದಾರೆ. ರೌಡಿ ಕೀಲಿ ಇಮ್ರಾನ್, ಆತನ ಸಹಚರರಾದ ಜಬೀವುಲ್ಲಾ ಯಾನೆ ಕೊಯಿತಾ ಜಬೀ, ಸೈಯದ್ ಆಸೀಂ ಫಯಾಝ್, ಮನ್ನಾನ್ ಖುರೇಶಿ ಯಾನೆ ಮನ್ನಾನ್ ಹಾಗೂ ಅಬ್ದುರ್ರಹ್ಮಾನ್ ಶೇಟ್ ಬಂಧಿತ ಆರೋಪಿಗೆಳೆಂದು ಗುರುತಿಸಲಾಗಿದೆ.

ಕೀಲಿ ಇಮ್ರಾನ್‌ನನ್ನು ಟಿಪ್ಪುನಗರದ ಟಿಪ್ಪುಶಾದಿ ಮಹಲ್ ಬಳಿ ಹಾಗೂ ಉಳಿದ ಆರೋಪಿಗಳನ್ನು ಆರ್.ಎಂ.ಎಲ್. ನಗರದ ಯುನಿಟಿ ಹಾಲ್ ಬಳಿ ಬಂಧಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಘಟನೆ ಹಿನ್ನೆಲೆ: 
ಸೆಪ್ಟಂಬರ್ 17/2016ರಂದು ಮಧ್ಯಾಹ್ನ ರೌಡಿ ಕೀಲಿ ಇಮ್ರಾನ್ ಸಹಚರರು ಮತ್ತು ಆರೋಪಿಗಳಾದ ಸುಹೇಲ್, ಶಾರು, ಮೋಟು ಕುರ್ರಂ, ಇರ್ಫಾನ್ ಹಾಗೂ ಅನ್ವರ್ ಎಂಬವರು ವೈಯಕ್ತಿಕ ವೈಷಮ್ಯದ ಹಿನ್ನೆಲೆಯಲ್ಲಿ ಅಣ್ಣಾ ನಗರ ಚಾನಲ್ ಬಳಿಯ ಟಿಪ್ಪುಆಟೊ ನಿಲ್ದಾಣದ ಬಳಿ ಮುಹಮ್ಮದ್ ರಫೀಕ್ ಯಾನೆ ಜೈಟ್ಲಿ ಎಂಬವರ ಮೇಲೆ ಮಚ್ಚು, ಲಾಂಗ್‌ಗಳಿಂದ ಹಲ್ಲೆ ನಡೆಸಿದ್ದರು. ಈ ಕುರಿತಂತೆ ಆರೋಪಿಗಳ ವಿರುದ್ದ ಮಹಮ್ಮದ್ ರಫೀಕ್‌ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರಿಗೆ ದೂರು ನೀಡಿದ್ದರಿಂದ ಆಕ್ರೋಶಗೊಂಡ ಆರೋಪಿಗಳು ಇತರೆ ಆಪಾದಿತರಾದ ಕೀಲಿ ಇಮ್ರಾನ್, ಟ್ವಿಸ್ಟ್ ಇರ್ಫಾನ್, ಅಯ್ಯೂಬ್, ಆದಿಲ್, ಕೇತ ಜಬಿ, ಸೈಯದ್ ಆಸೀಂ ಫಯಾಜ್, ಮನ್ನಾನ್ ಖುರೇಶಿ, ಅಬ್ದುರ್ರಹ್ಮಾನ್ ಶೇಟ್ ಹಾಗೂ ಇತರೆ 10-12 ಜನರೊಂದಿಗೆ ಗುಂಪು ಕಟ್ಟಿಕೊಂಡು ಅದೇ ದಿನ ರಾತ್ರಿ ಮಿಳಘಟ್ಟ ಬಡಾವಣೆಯಲ್ಲಿರುವ ದೂರುದಾರ ಮುಹಮ್ಮದ್ ಫಾರೂಕ್‌ರವರ ಮನೆ ಮೇಲೆ ದಾಳಿ ನಡೆಸಿದ್ದರು. ಆಟೊ ಜಖಂಗೊಳಿಸಿ ದೂರುದಾರರ ತಲೆ, ಕೈಗೆ ಮಚ್ಚಿನಿಂದ ಹೊಡೆದು ಕೊಲೆಗೆ ಯತ್ನಿಸಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News