ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಯಲ್ಲಿ ಸ್ವಚ್ಛ ಭಾರತ ಅಭಿಯಾನ

Update: 2016-11-02 16:34 GMT

ಮಡಿಕೇರಿ, ನ.2: ಪ್ರಧಾನಮಂತ್ರಿ ಅವರ ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಯ ಅಪ್ಪಂಗಳದ ಪ್ರಾದೇಶಿಕ ಕೇಂದ್ರದಲ್ಲಿ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಸಂಸ್ಥೆಯ ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ಎಸ್.ಜೆ. ಅಂಕೇಗೌಡ ಎಲ್ಲ ವಿಜ್ಞಾನಿಗಳು ಹಾಗೂ ಸಹಾಯಕ ವೃಂದದೊಂದಿಗೆ ಸ್ವಚ್ಛತಾ ಶಪಥವನ್ನು ಸ್ವೀಕರಿಸಿ, ಸ್ವಚ್ಛತೆಯ ಪ್ರಾಮುಖ್ಯತೆಯನ್ನು ತಿಳಿಸಿದರು. ಇದರ ಸಂದೇಶವನ್ನು ಎಲ್ಲರಿಗೂ ಸಾರುವಂತೆ ಹೇಳಿದರು. ಬಳಿಕ ಎಲ್ಲರೂ ಸೇರಿ ಸಂಸ್ಥೆಯ ಸುತ್ತಲಿನ ಆವರಣವನ್ನು ಸ್ವಚ್ಛಗೊಳಿಸಿದರು. ಸಂಸ್ಥೆಯ ಎಲ್ಲ ವಿಜ್ಞಾನಿಗಳು, ಅಧಿಕಾರಿಗಳು ಹಾಗೂ ನೌಕರರು ಪ್ರತಿದಿನ ಒಂದು ಗಂಟೆ ಕಾಲ ಶುಚಿತ್ವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಈ ದಿನಗಳಲ್ಲಿ ಕಚೇರಿಯ ಕಟ್ಟಡಗಳು, ಪ್ರಯೋಗಾಲಯಗಳು, ಸಂಗ್ರಹ ಕೊಠಡಿಗಳು ಹಾಗೂ ಸಂಸ್ಥೆಯ ವಸತಿಗೃಹದ ಆವರಣವನ್ನು ಸ್ವಚ್ಛ ಮಾಡಲಾಯಿತು. ಎಲ್ಲ ನೌಕರರು ಒಟ್ಟಾಗಿ ಸಂಸ್ಥೆಯ ಪ್ರಾಯೋಗಿಕ ಕ್ಷೇತ್ರಗಳನ್ನು ಸ್ವಚ್ಛಗೊಳಿಸಿ, ಅಲ್ಲಿನ ತರಗೆಲೆಗಳು ಹಾಗೂ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ, ಎರೆಹುಳು ಗೊಬ್ಬರದ ಘಟಕಕ್ಕೆ ಹಾಕಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯದ್ವಾರದಿಂದ ಹೆದ್ದಾರಿ ಮಾರ್ಗದ ರಸ್ತೆಯನ್ನು ಸ್ವಚ್ಛಗೊಳಿಸಿದರು. ಎರಡು ವಾರಗಳ ಕಾಲ ನಡೆದ ಈ ಸ್ವಚ್ಛ ಭಾರತ ಕಾರ್ಯಕ್ರಮದಲ್ಲಿ ಸಂಸ್ಥೆಯ ಎಲ್ಲಾ ವಿಜ್ಞಾನಿಗಳು ಹಾಗೂ ಇತರ ನೌಕರ ವರ್ಗದವರು ಹುಮ್ಮಸ್ಸಿನಿಂದ ಭಾಗವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News