×
Ad

‘ಕರಾವಳಿ ಜಿಲ್ಲೆಗಳ ಸಮಸ್ಯೆ ಬಗೆಹರಿಸಿ’ಆಸ್ಕರ್ ನೇತೃತ್ವದ ನಿಯೋಗದಿಂದ ಮುಖ್ಯಮಂತ್ರಿ ಭೇಟಿ

Update: 2016-11-03 19:34 IST

ಬೆಂಗಳೂರು, ನ.3: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮರಳು ಗಣಿಗಾರಿಕೆ, ಸೀಮೆ ಎಣ್ಣೆ ಹಾಗೂ ಕಂದಾಯ ಇಲಾಖೆಯ ನಿಯಮಗಳಿಂದ ಆಗುತ್ತಿರುವ ತೊಂದರೆಗಳನ್ನು ನಿವಾರಿಸುವಂತೆ ಕೋರಿ ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದೆ.
ಗುರುವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಮರಳು ಸಮಸ್ಯೆ(ಗಣಿ ಇಲಾಖೆ), ಬಿಳಿ ಸೀಮೆ ಎಣ್ಣೆ(ಆಹಾರ) ಹಾಗೂ ಫಾರಂ 9 ಮತ್ತು 11ರ ಸಮಸ್ಯೆ(ಕಂದಾಯ) ಕುರಿತು ಚರ್ಚಿಸಲು ಮುಖ್ಯಮಂತ್ರಿ ಕರೆದಿದ್ದ ಸಭೆಯಲ್ಲಿ ಅವರು ಮನವಿ ಸಲ್ಲಿಸಿದರು.

ಮರಳು ಗಣಿಗಾರಿಕೆ ವಿಚಾರದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಂಟಾಗಿರುವ ಸಮಸ್ಯೆ ನಿವಾರಿಸುವ ಜವಾಬ್ದಾರಿಯನ್ನು ಮುಖ್ಯಮಂತ್ರಿಗಳು ಕಾನೂನು ಸಚಿವ ಟಿ.ಬಿ.ಜಯಚಂದ್ರ ನೇತೃತ್ವದ ಸಂಪುಟ ಉಪ ಸಮಿತಿಗೆ ವಹಿಸಿದ್ದಾರೆ. ಅಲ್ಲದೆ, ಉಭಯ ಜಿಲ್ಲೆಗಳ ಶಾಸಕರನ್ನು ಸಂಪುಟ ಉಪ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡುವಂತೆ ಆದೇಶಿಸಿದ್ದಾರೆ. ಉಭಯ ಜಿಲ್ಲೆಗಳಲ್ಲಿ ಇರುವಂತಹ ಸಮಸ್ಯೆ ಕುರಿತು ಸಚಿವ ಸಂಪುಟ ಉಪ ಸಮಿತಿ ಚರ್ಚಿಸಬೇಕು. ಎರಡು ವಾರದೊಳಗೆ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸೂಚಿಸಿದ್ದಾರೆ.
ಮರಳು ನೀತಿ ಜಾರಿಗೆ ಬಂದ ಬಳಿಕ ಮರಳು ತೆಗೆಯುವುದು ಕಷ್ಟವಾಗಿದೆ. ಇದರಿಂದಾಗಿ, ಇದೆ ಉದ್ಯಮ ನಂಬಿದವರಿಗೆ ತೊಂದರೆಯಾಗಿದೆ. ಕಟ್ಟಡ ನಿರ್ಮಾಣಕ್ಕೂ ಮರಳು ಸಿಗುತ್ತಿಲ್ಲ ಎಂದು ಸಭೆಯಲ್ಲಿ ಶಾಸಕರು ದೂರು ನೀಡಿದರು.
ಹೊಸ ಮರಳು ನೀತಿ ಮತ್ತು ನಿಯಮಗಳ ಬಗ್ಗೆಯೂ ಸಂಪುಟ ಉಪ ಸಮಿತಿ ಸಭೆಯಲ್ಲಿ ಚರ್ಚಿಸಿಸುವಂತೆ ಮುಖ್ಯಮಂತ್ರಿ ಆದೇಶಿಸಿದರು. ಮರಳು ನೀತಿಯಿಂದ ಎರಡೂ ಜಿಲ್ಲೆಗಳಿಗೆ ವಿನಾಯಿತಿ ನೀಡಬೇಕು ಎಂದು ಶಾಸಕರು ಪ್ರಮುಖವಾದ ಬೇಡಿಕೆಯನ್ನಿಟ್ಟರು.
ಎತ್ತಿನಹೊಳೆ: ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಶೀಘ್ರದಲ್ಲೆ ಕರಾವಳಿ ಜಿಲ್ಲೆಗಳ ಜನಪ್ರತಿನಿಧಿಗಳ ಸಭೆ ಕರೆದು ಗೊಂದಲ ಪರಿಹರಿಸಲು ಮನವಿ ಆಸ್ಕರ್ ಫರ್ನಾಂಡಿಸ್ ನೇತೃತ್ವದ ನಿಯೋಗ ಮನವಿ ಸಲ್ಲಿಸಿತು.
ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಎಚ್.ಕೆ.ಪಾಟೀಲ್, ಮಾಜಿ ಸಚಿವ ವಿನಯಕುಲಕರ್ಣಿ ಸೇರಿದಂತೆ ವಿವಿಧ ಇಲಾಖೆಯಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News