ಟಿಪ್ಪುಜಯಂತಿ ಆಚರಣೆಗೆ ಜಿಲ್ಲಾಡಳಿತದಿಂದ ಅಗತ್ಯ ಕ್ರಮ
ಮಡಿಕೇರಿ, ನ.3: ಇದೇ ನ.10 ರಂದು ಟಿಪ್ಪು ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಲು ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲು ಬುಧವಾರ ಜಿಲ್ಲಾಧಿಕಾರಿ ಡಾ.ರಿಚರ್ಡ್‌ವಿನ್ಸೆಂಟ್ ಡಿಸೋಜ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು. ಜಯಂತಿ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಹೋಂ ಸ್ಟೇಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿರಬೇಕು. ಜೊತೆಗೆ ಆಯಕಟ್ಟಿನ ಜಾಗಗಳಲ್ಲಿ ಸಿಸಿಟಿವಿಯನ್ನು ಕಡ್ಡಾಯವಾಗಿ ಅಳವಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದರು. ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೀತಿಯ ಪೋಸ್ಟರ್, ಬ್ಯಾನರ್ ಅಳವಡಿಸುವಂತಿಲ್ಲ, ಹಾಗೆಯೇ ಸಾರ್ವಜನಿಕವಾಗಿ ಬಳಸುವ ಅಥವಾ ಬಳಕೆಯಾಗುವ ವಾಹನಗಳಲ್ಲಿ(ಆಟೊ, ಜೀಪು ಇತರ) ಪೋಸ್ಟರ್, ಬ್ಯಾನರ್, ಧ್ವಜ ಅಳವಡಿಸುವಂತಿಲ್ಲ. ಅಳವಡಿಸುವಂತಾದರೆ ಪೊಲೀಸ್ ಇಲಾಖೆಯ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ದಸರಾ ಸಂದರ್ಭದಲ್ಲಿ ಅಳವಡಿಸಲಾಗಿರುವ ಪೋಸ್ಟರ್, ಬ್ಯಾನರ್‌ಗಳನ್ನು ಇನ್ನೂ ತೆರವುಗೊಳಿಸಿಲ್ಲ ಎಂದು ಜಿಲ್ಲಾಧಿಕಾರಿ ಅತೃಪ್ತಿ ವ್ಯಕ್ತಪಡಿಸಿದರು. ವಾಹನ, ಹೋಂಸ್ಟೇ, ಲಾಡ್ಜ್‌ತಪಾಸಣೆಯನ್ನು ಮಾಡಬೇಕು. ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಹೊರತು ಪಡಿಸಿದಂತೆ ಸಾರ್ವಜನಿಕವಾಗಿ ಬೇರೆ ಕಡೆ ಕಾರ್ಯಕ್ರಮ ಆಯೋಜಿಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಇದೇ ಸಂದರ್ಭ ತಿಳಿಸಿದರು. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವುದು ಕಂಡು ಬಂದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಹಾಗೂ ನಿಷ್ಠುರವಾಗಿ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ಪಷ್ಟ ನಿರ್ದೇಶನ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಮಾತನಾಡಿ, ಮಡಿಕೇರಿ ದಸರಾ, ತುಲಾ ಸಂಕ್ರಮಣ ಜಾತ್ರೆ, ರಮಝಾನ್, ಬಕ್ರೀದ್ ಹಬ್ಬಗಳನ್ನು ಶಾಂತಿಯುತ ಹಾಗೂ ಅತ್ಯಂತ ಯಶಸ್ವಿಯಾಗಿ ನಿರ್ವಹಿಸಲಾಗಿದೆ. ಹಾಗೆಯೇ ಟಿಪ್ಪುಜಯಂತಿಯನ್ನು ಶಾಂತಿಯುತವಾಗಿ ಆಚರಿಸಬೇಕಿದೆ. ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಇದೊಂದು ಸವಾಲು ಆಗಿದ್ದು, ಜಯಂತಿಯನ್ನು ಯಶಸ್ವಿಯಾಗಿ ನಿಭಾಯಿಸಬೇಕಿದೆ ಎಂದು ಅವರು ಹೇಳಿದರು. ಟಿಪ್ಪುಜಯಂತಿ ಸಂಬಂಧ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತದೊಂದಿಗೆ ಪೊಲೀಸ್ ಇಲಾಖೆ ಅಗತ್ಯ ಬಂದೋಬಸ್ತ್ ಮಾಡಿಕೊಂಡಿದೆ. ಜಿಲ್ಲೆಯ ಗಡಿ ಭಾಗಗಳಾದ ಮಾಲ್ದಾರೆ, ಕುಟ್ಟ, ಆನೆಚೌಕೂರು, ಸಿದ್ದಾಪುರ, ಕೊಪ್ಪ, ಶಿರಂಗಾಲ, ಕೊಡ್ಲಿಪೇಟೆ, ಶನಿವಾರಸಂತೆ, ಸಂಪಾಜೆ, ಕರಿಕೆ ಹೀಗೆ ಒಟ್ಟು 10 ಕಡೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದ್ದು, ಒಂದು ಚೆಕ್ ಪೋಸ್ಟ್‌ನಲ್ಲಿ ತಲಾ ನಾಲ್ಕು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ವಿವರಿಸಿದರು. ಚೆಕ್‌ಪೋಸ್ಟ್‌ಗಳಲ್ಲಿ ಹಾಗೂ ಇತರ ಕಡೆಗಳಲ್ಲಿ ನಾಕಾಬಂದಿ ಮಾದರಿಯಲ್ಲಿ ವಾಹನಗಳು, ಹೋಂಸ್ಟೇಗಳು ಹಾಗೂ ಲಾಡ್ಜ್‌ಗಳಲ್ಲಿ ತಪಾಸಣೆ ಮಾಡಿ ಮಾಹಿತಿ ಕಲೆ ಹಾಕುವ ಕಾರ್ಯವನ್ನು ಈಗಾಗಲೇ ಆರಂಭಿಸಲಾಗಿದೆ. ಆದ್ದರಿಂದ ಸಾರ್ವಜನಿಕರು ಕಿರಿಕಿರಿ ಎಂದು ಭಾವಿಸದೆ ತಪಾಸಣೆಗೆ ಸಹಕರಿಸುವಂತೆ ಪಿ.ರಾಜೇಂದ್ರ ಪ್ರಸಾದ್ ಕೋರಿದರು.
ಶಾಂತಿ ಸುವ್ಯವಸ್ಥೆ ಕಾಪಾಡುವುದು ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಜವಾಬ್ದಾರಿಯಾಗಿದೆ. ಆ ದಿಸೆಯಲ್ಲಿ ಪೊಲೀಸರು ತಮ್ಮ ವೃತ್ತಿ ಧರ್ಮವನ್ನು ಅರಿತು ಕರ್ತವ್ಯ ನಿರ್ವಹಿಸಬೇಕಿದೆ. ಪೊಲೀಸ್ ಇಲಾಖೆಯ ಎಲ್ಲ ಹಂತದ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನುಡಿದರು. ಉಪ ವಿಭಾಗಾಧಿಕಾರಿ ಡಾ.ನಂಜುಂಡೇಗೌಡ, ತಹಶೀಲ್ದಾರರಾದ ಕುಸುಮಾ, ಮಹದೇವಸ್ವಾಮಿ, ಕೃಷ್ಣ, ತಾಪಂ ಇಒಗಳಾದ ಪಡ್ನೇಸರ್, ಸತ್ಯನಾರಾಯಣ, ಜೀವನ್ ಕುಮಾರ್, ಉಪ ಪೊಲೀಸ್ ವರಿಷ್ಠಾಧಿಕಾರಿಗಳಾದ ಛಬ್ಬಿ, ನಾಗಪ್ಪ, ಸಂಪತ್‌ಕುಮಾರ್, ನಗರಸಭೆ ಪೌರಾಯುಕ್ತೆ ಬಿ.ಬಿ. ಪುಷ್ಪಾವತಿ, ಪಪಂ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ನಾಚಪ್ಪ, ಶ್ರೀಧರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಳ್ಳಯ್ಯ, ಪೊಲೀಸ್ ಅಧಿಕಾರಿಗಳಾದ ಮೇದಪ್ಪ, ಭರತ್, ಪ್ರದೀಪ್, ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೇದಾರ ಪ್ರವೀಣ್ ಕುಮಾರ್ ಇತರರು ಹಾಜರಿದ್ದರು.