×
Ad

ವಿಧಾನ ಪರಿಷತ್‌ಗೆ ಮೂವರ ನಾಮ ನಿರ್ದೇಶನ ?

Update: 2016-11-04 10:52 IST

ಬೆಂಗಳೂರು, ನ.4: ಕಾಂಗ್ರೆಸ್ ಹಿರಿಯ ಮುಖಂಡ ಸಿ.ಎಂ.ಲಿಂಗಪ್ಪ, ಮೋಹನ್ ಕೊಂಡಜ್ಜಿ ಹಾಗೂ ವಿಶ್ವಕರ್ಮ ಸಮುದಾಯದ ಮುಖಂಡ ಕೆ.ಪಿ.ನಂಜುಂಡಿ ಅವರನ್ನು ಮೇಲ್ಮನೆ ಗೆ ನಾಮನಿರ್ದೇಶನ ಮಾಡುವ ಪ್ರಸ್ತಾಪಕ್ಕೆ ಹೈಕಮಾಂಡ್ ಸಮ್ಮತಿಸಿದೆ.

ರಾಜ್ಯ ನಾಯಕತ್ವವು ವಿಧಾನ ಪರಿಷತ್ ನಾಮನಿರ್ದೇಶನಕ್ಕೆ ಸೂಚಿಸಿದ್ದ ಕೆ.ಪಿ.ನಂಜುಂಡಿ, ಸಿ.ಎಂ.ಲಿಂಗಪ್ಪ ಹಾಗೂ ಮೋಹನ್ ಕೊಂಡಜ್ಜಿ ಅವರ ಹೆಸರನ್ನು ಹೈಕಮಾಂಡ್ ಒಪ್ಪಿದೆ ನೀಡಿದೆ ಎಂದು ಗೊತ್ತಾಗಿದೆ. ಈ ಸಂಬಂಧ ಅಧಿಕೃತ ಒಪ್ಪಿಗೆಯ ಸೂಚನೆ ಇಂದು ಸಂಜೆ ವೇಳೆಗೆ ರಾಜ್ಯ ನಾಯಕತ್ವಕ್ಕೆ ಸಿಗಲಿದ್ದು, ಅನಂತರ ರಾಜ್ಯಪಾಲರ ಒಪ್ಪಿಗೆಗೆ ಪಟ್ಟಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕಳುಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹಲವು ವರ್ಷಗಳಿಂದ ಸ್ಥಾನಮಾನದ ನಿರೀಕ್ಷೆಯಲ್ಲಿದ್ದ ಕೆ.ಪಿ.ನಂಜುಂಡಿ ಅವರಿಗೆ ಈ ಬಾರಿ ಹೈಕಮಾಂಡ್ ಕೃಪಾಶೀರ್ವಾದದಿಂದ ಪರಿಷತ್ ನಾಮನಿರ್ದೇಶನ ಒಲಿದಿದ್ದರೆ, ಮೋಹನ್ ಕೊಂಡಜ್ಜಿ ಪರವಾಗಿ ಖುದ್ದು ಮುಖ್ಯಮಂತ್ರಿಗಳು ಪಟ್ಟು ಹಿಡಿದಿದ್ದರು. ಇನ್ನು ಸಚಿವ ಡಿ.ಕೆ. ಶಿವಕುಮಾರ್ ಹಾಗೂ ದಿಗ್ವಿಜಯ ಸಿಂಗ್ ಅವರ ಲಾಬಿಯ ಪರಿಣಾಮವಾಗಿ ಸಿ.ಎಂ. ಲಿಂಗಪ್ಪ ಅವಕಾಶ ಪಡೆದಿದ್ದಾರೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News