ಇ-ಯುಗಕ್ಕೆ ತಕ್ಕಂತೆ ಬದಲಾಗುತ್ತಿರುವ ರೌಡಿಗಳ ಅಡ್ಡಹೆಸರುಗಳು

Update: 2016-11-04 10:47 GMT

ಬೆಂಗಳೂರು,ನ.4: ಆಯಿಲ್ ಕುಮಾರ್, ಗಿಡಿಗಿಡಿ ಕೃಷ್ಣ, ಸ್ಟೇಷನ್ ಶೇಖರ, ಕೊರಂಗು ಕೃಷ್ಣ , ಮುಲಾಮ, ಕವಳ, ಸಾರಾಯಿ....ಇವೆಲ್ಲ ಒಂದು ಕಾಲದಲ್ಲಿ ಬೆಂಗಳೂರನ್ನು ಆಳಿದ ಕುಖ್ಯಾತ ರೌಡಿಗಳ ಅಡ್ಡಹೆಸರುಗಳು. ಈ ಅಡ್ಡಹೆಸರುಗಳು ಎಷ್ಟೊಂದು ಫೇಮಸ್ ಆಗಿದ್ದವೆಂದರೆ ಜನರಿಗೆ ಬಿಡಿ....ಸ್ವತಃ ಈ ರೌಡಿಗಳಿಗೂ ತಮ್ಮ ಅಪ್ಪ-ಅಮ್ಮ ಇಟ್ಟಿದ್ದ ಹೆಸರು ತಕ್ಷಣಕ್ಕೆ ಬಾಯಿಗೆ ಬರುತ್ತಿರಲಿಲ್ಲ. ಈ ಹೆಸರುಗಳೆಲ್ಲ ಈಗ ಭೂತಕಾಲಕ್ಕೆ ಸೇರಿಹೋಗಿವೆ. ಇಂದಿನ ಈ ಡಿಜಿಟಲ್ ಯುಗದಲ್ಲಿ ರೌಡಿಗಳ ಅಡ್ಡಹೆಸರುಗಳು ಅಪಗ್ರೇಡ್ ಆಗಿವೆ. ಕಾಲಾಯ ತಸ್ಮೈ ನಮಃ ಎಂಬಂತೆ ಸಾಮಾಜಿಕ ಮಾಧ್ಯಮಗಳೊಡನೆ ನಂಟು ಬೆಳೆಸಿಕೊಂಡಿರುವ ಅವರೆಲ್ಲ ಈಗ ಚಾಟ್, ಡೌನ್‌ಲೋಡ್, ಗೂಗಲ್ ..... ಇತ್ಯಾದಿ ಹೆಸರುಗಳಿಂದ ಕರೆಯಲ್ಪಡುತ್ತಿದ್ದಾರೆ.

‘‘ ಚಾಟ್‌ನ್ನ ಕರೀಯಪ್ಪ, ಅವನೆಲ್ಲಿದ್ದಾನೋ ಕೇಳು. ಈಗಲೇ ಸ್ಟೇಷನ್ನಿಗೆ ಬರುವಂತೆ ಹೇಳು. ಜೊತೆಗೆ ಡೌನ್‌ಲೋಡ್‌ನ್ನೂ ಕರೆತರಲು ಮರೀಬೇಡ ಎಂದು ಹೇಳು. ಇನ್ಸ್‌ಪೆಕ್ಟರ್ರು ಅವರ ಜೊತೆ ಏನೋ ಮಾತಾಡಬೇಕಂತೆ ’’

ಕೋಡ್ ಭಾಷೆಯಲ್ಲಿನ ಸಂಭಾಷಣೆಯೇ? ಇದು ಕಳ್ಳ-ಪೊಲೀಸ್ ಜಗತ್ತಿನ ಭಾಷೆ. ಈ ಜಗತ್ತಿನಲ್ಲಿ ರೌಡಿಗಳು ಮತ್ತು ಸಮಾಜ ವಿರೋಧಿ ಶಕ್ತಿಗಳು ಪ್ರದೇಶ, ಚಟುವಟಿಕೆ, ಚಟ,ಧೋರಣೆ...ಅಷ್ಟೇ ಏಕೆ,ದೈಹಿಕ ಲಕ್ಷಣಗಳಿಂದಲೂ ಗುರುತಿಸಲ್ಪಡುತ್ತಾರೆ.

ಅವನೊಬ್ಬ ಬಕಾಸುರ ರೌಡಿ.ಆತ ಲಾಕಪ್‌ನಲ್ಲಿದ್ದಾಗೆಲ್ಲ ಆತನಿಗೆ ಸಾಕಷ್ಟು ಆಹಾರ ಒದಗಿಸುವಲ್ಲಿ ಪೊಲೀಸರು ಹಣ್ಣಾಗಿ ಹೋಗುತ್ತಿದ್ದರು. ಇಂತಿಪ್ಪ ರೌಡಿಗೆ ಪೊಲೀಸರೇ ಇಟ್ಟಿದ್ದ ಅಡ್ಡಹೆಸರು ‘ಕವಳ ’

ಈಗ ಡಿಜಿಟಲ್ ಯುಗಕ್ಕೆ ತಕ್ಕಂತೆ ರೌಡಿಗಳು ಸಾಮಾಜಿಕ ಮಾಧ್ಯಮಗಳ ಟಚ್ ಇರುವ ಅಡ್ಡಹೆಸರುಗಳನ್ನು ಇಟ್ಟುಕೊಳ್ಳುತ್ತಿದ್ದಾರೆ. ಅಲಿಯಾಸ್ ಎನ್ನುವುದು ರೌಡಿಗಳ ಹೆಸರುಗಳೊಂದಿಗಿನ ಮುಖ್ಯ ಟ್ಯಾಗ್ ಆಗಿದೆ. ಅಲಿಯಾಸ್ ಇಲ್ಲದಿದ್ದರೆ ರೌಡಿ ಎಂದು ಅನಿಸುವುದೇ ಇಲ್ಲ! ರಮೇಶ ಅಲಿಯಾಸ್ ಗೂಗಲ್ ಉತ್ತರ ಬೆಂಗಳೂರು ವ್ಯಾಪ್ತಿಯ ರೌಡಿಶೀಟರ್. ಸಹವರ್ತಿಗಳು ಅವನನ್ನು ಕರೆಯುವುದು ಗೂಗಲ್ ಎಂದೇ. ಇಂಟರ್‌ನೆಟ್‌ನಲ್ಲಿ ಮಾಹಿತಿಗಳನ್ನು ಪಡೆಯಲು ಸರ್ಚ್ ಇಂಜಿನ್‌ಗಳನ್ನು ಬಳಸುವಲ್ಲಿ ಪ್ರವೀಣ ಎಂದೇ ಆತನಿಗೆ ಈ ಜಗದ್ವಿಖ್ಯಾತ ಹೆಸರು! ಗ್ಯಾಂಗಿನ ಇತರ ಸದಸ್ಯರಿಂದ ಆತನಿಗೆ ಭಾರೀ ಮರ್ಯಾದೆಯಿದೆ. ಆತನಿಗೆ ಟೆಕ್ಕಿ ಎಂದು ಭಡ್ತಿಯನ್ನೂ ಕೊಟ್ಟುಬಿಟ್ಟಿದ್ದಾರೆ.

ಸೆಂಟ್ರಲ್ ಬೆಂಗಳೂರು ವ್ಯಾಪ್ತಿಯಲ್ಲಿರುವ ರೌಡಿಯ ಹೆಸರು ಸಂತೋಷ ಅಲಿಯಾಸ ಚಾಟ್. ಗೆಳೆಯರೊಂದಿಗೆ ಮತ್ತು ಪೊಲೀಸರ ವಿಚಾರಣೆ ಸಂದರ್ಭ ಅತಿಯಾಗಿ ಮಾತನಾಡುವ ಪ್ರವೃತ್ತಿ ಈತನಿಗೆ ಈ ಅಡ್ಡಹೆಸರನ್ನು ತಂದಿದೆ.

ಇದೇ ರೀತಿ ಶಂಕರ್ ಎಂಬಾತ್ ಅಲಿಯಾಸ್ ಸೇರಿಸಿಕೊಂಡು ವಾಟ್ಸಾಪ್ ಆಗಿಬಿಟ್ಟಿದ್ದಾನೆ. ವಾಟ್ಸಾಪ್ ಬಗ್ಗೆ ಏನೂ ಗೊತ್ತಿಲ್ಲದ, ಆದರೂ ಅದನ್ನು ಬಳಸಲು ಬಯಸುವವರು ಸಂಪರ್ಕಿಸುವುದು ಈ ಶಂಕರನನ್ನೇ. ಸಂಜೆಯ ವೇಳೆಗೆ ಗಾಂಧಿ ಬಜಾರ್ ಸಮೀಪದ ಕಟ್ಟೆಯೊಂದರ ಮೇಲೆ ಕಾಣಸಿಗುವ ಈತ ವಾಟ್ಸಾಪ್ ಬಗ್ಗೆ ಉದ್ದುದ್ದ ಲೆಕ್ಚರ್‌ಗಳನ್ನು ಕೊರೆಯುತ್ತಿರುತ್ತಾನೆ.

ನಾಗರಾಜ ಅಲಿಯಾಸ್ ಡೌನ್‌ಲೋಡ್‌ಗೆ ತನ್ನದೇ ಆದ ಕೌಶಲ್ಯಗಳಿವೆ. ನಾಗರಾಜ್ ಡೌನ್‌ಲೋಡ್ ಮಾಡಲಾಗದ್ದು ಈ ಭೂಮಿಯ ಮೇಲೆ ಯಾವುದೂ ಇಲ್ಲ ಎನ್ನುವುದು ಆತನ ಸಹಚರರ ಗಟ್ಟಿನಂಬಿಕೆ.

ನಾಗರಾಜ್ ನೆರವಿನಿಂದ ನಾವು ಹಲವಾರು ಹಳೆಯ ಕನ್ನಡ ಸಿನೆಮಾಗಳನ್ನು ನೋಡಲು, ಸಾವಿರಾರು ಹಳೆಯ ಹಾಡುಗಳನ್ನು ಕೇಳಲು ಸಾಧ್ಯವಾಗಿದೆ ಎನ್ನುತ್ತಾರೆ ಆತನ ಸಹವರ್ತಿಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News