ಸಮಸ್ಯೆಗೆ ಪರಿಹಾರ ಹುಡುಕುವ ಆಸಕ್ತಿ ವಹಿಸಿ: ಅಣ್ಣಾಮಲೈ
ಚಿಕ್ಕಮಗಳೂರು, ನ.4: ಸುತ್ತಲಿನ ಸಮಸ್ಯೆಗಳನ್ನು ಅರಿತು ಪರಿಹಾರ ಹುಡುಕುವುದರತ್ತ ವಿದ್ಯಾರ್ಥಿ ಯುವಜನರು ಆಸಕ್ತಿ ವಹಿಸಬೇಕು ಎಂದು ಎಸ್ಪಿ ಕೆ.ಅಣ್ಣಾಮಲೈ ಕರೆ ನೀಡಿದರು.
ಅವರು ಶುಕ್ರವಾರ ಚಿಕ್ಕಮಗಳೂರು ಅಡ್ವೆಂಚರ್ ಸ್ಪೋರ್ಟ್ಸ್ ಕ್ಲಬ್ ಮತ್ತು ನೆಹರು ಯುವ ಕೇಂದ್ರದ ಆಶ್ರಯದಲ್ಲಿ ನಗರದ ಸ್ಕೌಟ್ ಭವನದಲ್ಲಿ ಆಯೋಜಿಸಿದ ‘ನೆರೆಹೊರೆ ಯುವಸಂಸತ್ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಮಾತನಾಡಿದರು.
ಸಮಸ್ಯೆಗಳಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಆಲೋಚನೆ, ಸಂಶೋಧನೆ, ಪ್ರಯೋಗ ಕೈಗೊಂಡು ಜನರ ಜೀವನ ಹಸನುಗೊಳಿಸುವ ಬದಲು ದೊಡ್ಡ ಕಂಪೆನಿ ಸೇರಿ ವೈಯಕ್ತಿಕ ಬೆಳವಣಿಗೆಯನ್ನಷ್ಟೆ ಕಂಡುಕೊಳ್ಳುವುದು ಗ್ರಾಮಕ್ಕೆ ದ್ರೋಹ ಬಗೆದಂತೆ. ಹೊಸ ವಿಷಯಗಳ ಬಗ್ಗೆ ಆಲೋಚಿಸಿ ಕಾರ್ಯರೂಪಕ್ಕಿಳಿಸಿದರೆ ಮಾತ್ರ ಸಮಾಜದಲ್ಲಿ ಬದಲಾವಣೆ ತರಬಹುದು ಎಂದರು.
ಚಿಕ್ಕಮಗಳೂರು ಅಡ್ವೆಂಚರ್ ಸ್ಪೋರ್ಟ್ಸ್‌ಕ್ಲಬ್ ಅಧ್ಯಕ್ಷೆ ನಳಿನಾ ಡಿಸಾ ಮಾತನಾಡಿ, ವಿದ್ಯಾರ್ಥಿ ಯುವಕರು ಸಾಂಘಿಕ ಶಿಸ್ತು ಮತ್ತು ನಾಯಕತ್ವ ಬೆಳೆಸಿಕೊಳ್ಳಬೇಕು. ಮಾನಸಿಕ ದೃಢತೆ, ನೈತಿಕ ಬೆಂಬಲದೊಂದಿಗೆ ದುಶ್ಚಟಗಳಿಂದ ಮುಕ್ತರಾಗಬಹುದು. ಒಳ್ಳೆಯ ಹವ್ಯಾಸ ಮತ್ತು ಸಹಜ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮಾನಸಿಕ, ದೈಹಿಕ ಆರೋಗ್ಯ ಹೊಂದಬಹುದು ಎಂದರು.
ಅಡ್ವೆಂಚರ್ ಸ್ಪೋರ್ಟ್ಸ್ ಕ್ಲಬ್ 2007ರಲ್ಲಿ ಅಂದಿನ ಎಸ್ಪಿ ವಿಪುಲಕುಮಾರ್ ಅಧ್ಯಕ್ಷತೆಯಲ್ಲಿ ಆರಂಭಗೊಂಡಿತು. ಅವಘಡ ರಹಿತ ಸಾಹಸ ಚಟುವಟಿಕೆ ಇದರ ಗುರಿ. ಏಕಾಗ್ರತೆ, ಶಿಸ್ತು, ಸಂಯಮ, ಧೈರ್ಯ, ಆತ್ಮವಿಶ್ವಾಸದ ಜೊತೆಗೆ ಉತ್ಸಾಹ ಮೂಡಿಸುವುದು ಕ್ಲಬ್‌ನ ಉದ್ದೇಶ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಡಾ. ಎಚ್.ಪಿ. ಮಂಜುಳಾ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಬಿ. ಮಂಜುನಾಥ, ಸೈಕೋತೆರಪಿಸ್ಟ್ ಮಮತಾ ಮಹೇಶ್, ವಕೀಲೆ ಡಿ.ಎಸ್. ಮಮತಾ, ಜಿಲ್ಲಾ ಕಸಾಪ ನಿಕಟ ಪೂರ್ವ ಅಧ್ಯಕ್ಷ ಎನ್.ಎಸ್. ಶಿವಸ್ವಾಮಿ, ಎನ್.ವೈ.ಕೆ. ಮಂಜುನಾಥ, ಚಿಕ್ಕಮಗಳೂರು ಅಡ್ವೆಂಚರ್ ಸ್ಪೋರ್ಟ್ಸ್‌ಕ್ಲಬ್ ಕಾರ್ಯದರ್ಶಿ ವಿವೇಕ, ಉಪಾಧ್ಯಕ್ಷ ಕಿಶನ್‌ಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ವೈಯಕ್ತಿಕ ಮಹತ್ವಾಕಾಂಕ್ಷೆಗಿಂತ ಸಮುದಾಯದ ಸಮಸ್ಯೆಗಳ ವಿರುದ್ಧ ಪರಿಹಾರ ಹುಡುಕಬೇಕು. ಇಂದು ಸಮಾಜಸೇವೆ, ಸಾಹಿತ್ಯ ರಚನೆ, ಪರಿಸರ ಸಂರಕ್ಷಣೆ, ಮಳೆನೀರು ಕೊಯ್ಲು ಸೇರಿದಂತೆ ಜನಪರ ಕಾರ್ಯಗಳಲ್ಲಿ ಹಿರಿಯರಷ್ಟೇ ತೊಡಗಿಸಿಕೊಂಡಿದ್ದಾರೆ, ಯುವಕರ ಸುಳಿವೇ ಇಲ್ಲ.