×
Ad

ಶಿವಮೊಗ್ಗ ಜಿಲ್ಲೆಯ 77 ಎಪಿಎಂಸಿ ಸ್ಥಾನಗಳಿಗೆ ನ.27ರಂದು ಚುನಾವಣೆ

Update: 2016-11-04 22:28 IST

ಶಿವಮೊಗ್ಗ, ನ.4: ಜಿಲ್ಲೆಯ ಏಳು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ 77 ಸ್ಥಾನಗಳಿಗೆ ನ.27ರಂದು ಚುನಾವಣೆ ನಡೆಯಲಿದೆ. ಈ ಸಂಬಂಧ ಈಗಾಗಲೇ ಜಿಲ್ಲಾ ಚುನಾವಣಾಧಿ ಕಾರಿಯಾಗಿರುವ ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ ಅಧಿಸೂಚನೆ ಹೊರಡಿಸಿದ್ದಾರೆ.

ಶಿವಮೊಗ್ಗ, ಭದ್ರಾವತಿ, ಸಾಗರ, ಶಿಕಾರಿಪುರ, ತೀರ್ಥಹಳ್ಳಿ, ಸೊರಬ, ಹೊಸನಗರ ಎಪಿಎಂಸಿಗಳಿಗೆ ಚುನಾವಣೆ ನಡೆಯ ಲಿದೆ. ಈ ಎಲ್ಲ ಎಪಿಎಂಸಿಗಳಲ್ಲಿ ತಲಾ 11 ಸ್ಥಾನಗಳು ಇವೆ. ಅವುಗಳನ್ನು ಮೀಸಲಾತಿ ಅನ್ವಯ ಸಾಮಾನ್ಯ ಮಹಿಳೆ, ಎಸ್ಸಿ, ಎಸ್ಟಿ, ಬಿಸಿಎ ಮತ್ತು ಬಿಸಿಬಿ ವರ್ಗಕ್ಕೆ ಮೀಸಲಿಡಲಾಗಿದೆ. ಪ್ರತೀ ಎಪಿಎಂಸಿಯಲ್ಲಿ ಇಬ್ಬರು ಮಹಿಳಾ ಸದಸ್ಯರು ಕಡ್ಡಾಯವಾಗಿ ಇರತಕ್ಕದ್ದು ಎಂದು ಈ ಬಾರಿ ಸೂಚಿಸಲಾಗಿದೆ. ಈ ಕ್ಷೇತ್ರಗಳು ಕೃಷಿಕರ ವಲಯದಿಂದ ಮತ ಚಲಾ ಯಿಸಲ್ಪಡುವಂತಹವು. ಇದರ ಹೊರತಾಗಿ ಚಿಲ್ಲರೆ ವ್ಯಾಪಾರಿಗಳಾಗಿದ್ದರೆ, ಕಮಿಷನ್ ಏಜೆಂಟರು ಮತ್ತು ವ್ಯಾಪಾರಿಗಳು ಚುನಾಯಿಸಿದ ಒಬ್ಬ ಸದಸ್ಯ, ಎಪಿಎಂಸಿ ಮಾರುಕಟ್ಟೆ ಪ್ರದೇಶದೊಳಗೆ ವ್ಯವಹಾರ ನಡೆಸುವ ಸಂಘಗಳ ಪ್ರತಿನಿಧಿಯೊಬ್ಬ ಅಂತಹ ಸಂಘಗಳ ಆಡಳಿತ ಸಮಿತಿಗಳಿಂದ ಚುನಾಯಿಸಲ್ಪಡಬೇಕು. ಮಾರುಕಟ್ಟೆ ಪ್ರದೇಶದೊಳಗೆ ಅಧಿಸೂಚಿತ ಕೃಷಿ ಉತ್ಪನ್ನ ವ್ಯವಹಾರ ನಡೆಸುವ ಕೃಷಿ ಸಹಕಾರಿ ಸಂಸ್ಕರಣ ಸಂಘಗಳ ಪ್ರತಿನಿಧಿಯಾಗಿರುವ ಸಂಘಗಳ ಆಡಳಿತ ಸಮಿತಿಗಳಿಂದ ಚುನಾಯಿತನಾದ ಒಬ್ಬ ಸದಸ್ಯ ಇದರಲ್ಲಿ ಇರುತ್ತಾರೆ.

ಚುನಾವಣೆಗೆ ಆಯಾಯ ತಾಲೂಕಿನ ತಹಶೀಲ್ದಾರ್‌ಗ ಳ ನ್ನು ಚುನಾವಣಾಧಿಕಾರಿಗಳನ್ನಾಗಿ ನೇಮಿಸ ಲಾಗಿದೆ. ತಹಶೀಲ್ದಾರ್ ಗ್ರೇಡ್-2 ಸಹಾಯಕ ಚುನಾವ ಣಾಧಿಕಾರಿ ಯಾಗಿರುತ್ತಾರೆ. ನೋಡಲ್ ಅಧಿಕಾರಿಗಳನ್ನಾಗಿ ಆಯಾಯ ಉಪವಿಭಾಗಗಳ ಉಪವಿಭಾಗಾಧಿಕಾರಿಗಳನ್ನು ನೇಮಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 2,53,036 ಮತದಾರರು ಇದ್ದು, ಈ ಪೈಕಿ ಶಿಕಾರಿಪುರದಲ್ಲಿ ಅತ್ಯಧಿಕ ಎಂದರೆ 46,217 ಮತದಾರರು, ಹೊಸನಗರದಲ್ಲಿ ಅತಿಕಡಿಮೆ ಎಂದರೆ 19,425, ಸೊರಬ 42,073, ಸಾಗರ 31,657, ತೀರ್ಥಹಳ್ಳಿ 28,577, ಭದ್ರಾವತಿ 42,487 ಮತ್ತು ಶಿವಮೊಗ್ಗ 42,600 ಮತದಾರರು ಇದ್ದಾರೆ.

ಜಿಲ್ಲೆಯಲ್ಲಿ ಒಟ್ಟು 395 ಮತಗಟ್ಟೆಗಳನ್ನು ತೆರೆಯಲಾಗಿದೆ. ಶಿವಮೊಗ್ಗದಲ್ಲಿ 50, ಭದ್ರಾವತಿಯಲ್ಲಿ 68, ತೀರ್ಥಹಳ್ಳಿಯಲ್ಲಿ 51, ಸಾಗರದಲ್ಲಿ 60, ಹೊಸನಗರದಲ್ಲಿ 30, ಸೊರಬದಲ್ಲಿ 79, ಶಿಕಾರಿಪುರದಲ್ಲಿ 57 ಮತಗಟ್ಟೆಗಳು ಇವೆ. ಚುನಾವಣೆಗೆ ಒಟ್ಟು 435 ಮತಪೆಟ್ಟಿಗಳನ್ನು ಬಳಸಲಾಗುವುದು. ಸುಮಾರು 22 ಬಸ್, 69 ಜೀಪ್ ಬೇಕಾಗಬಹುದು ಎಂದು ನಿರ್ಧರಿಸಲಾಗಿದೆ. 1,740 ಮತಗಟ್ಟೆ ಸಿಬ್ಬಂದಿ ಈ ಚುನಾವಣೆಯಲ್ಲಿ ಕೆಲಸ ನಿರ್ವಹಿಸುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News