×
Ad

ಕುಸಿಯುತ್ತಿದೆ ಅಂತರ್ಜಲ ಮಟ್ಟ

Update: 2016-11-04 22:31 IST

ಶಿವಮೊಗ್ಗ, ನ.4: ಸರ್ವೇ ಸಾಮಾನ್ಯವಾಗಿ ಮಲೆನಾಡು ಪ್ರದೇಶದಲ್ಲಿ ಎಪ್ರಿಲ್, ಮೇ ತಿಂಗಳಲ್ಲಿ ಬೇಸಿಗೆಯ ಬಿರು ಬಿಸಿಲು ಕಂಡುಬರುತ್ತದೆ. ತಾಪಮಾನದ ಪ್ರಮಾಣ 35 ರಿಂದ 40 ಡಿಗ್ರಿಯವರೆಗೂ ದಾಖಲಾಗುತ್ತದೆ. ಆದರೆ ಪ್ರಸ್ತುತ ವರ್ಷ ಚಳಿಗಾಲದ ಪ್ರಾರಂಭದ ಹಂತದಲ್ಲಿಯೇ ತೀವ್ರ ಬಿಸಿಲ ಝಳಕ್ಕೆ ಮಲೆನಾಡು ತುತ್ತಾಗುತ್ತಿದ್ದು, ಇದು ನಾಗರಿಕರಲ್ಲಿ ತಳಮಳ ಸೃಷ್ಟಿಸಿದೆ.

ಜಿಲ್ಲೆಯಲ್ಲಿ ಒಂದೆಡೆ ಮುಂಗಾರು ಮಳೆ ಕೈಕೊಟ್ಟ ಪರಿಣಾಮದಿಂದ ಪ್ರಮುಖ ಜಲಾಶಯ, ಕೆರೆಕಟ್ಟೆ, ಹಳ್ಳಕೊಳ್ಳಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗಿಲ್ಲ. ಮತ್ತೊಂದೆಡೆ ಅಕಾಲಿಕವಾಗಿ ತಾಪಮಾನದ ಪ್ರಮಾಣದಲ್ಲಿ ತೀವ್ರ ಏರಿಕೆ ಕಂಡುಬರುತ್ತಿದೆ. ಸೂರ್ಯನ ಪ್ರಖರತೆಗೆ ಕೆರೆಕಟ್ಟೆ, ಹಳ್ಳಕೊಳ್ಳಗಳಲ್ಲಿ ಸಂಗ್ರಹವಾಗಿರುವ ನೀರು ದಿನದಿಂದ ದಿನಕ್ಕೆ ಕಡಿಮೆಯಾಗತೊಡಗಿದೆ. ಅಂತರ್ಜಲದ ಮಟ್ಟ ಕುಸಿಯತೊಡಗಿದೆ. ಇದರ ನೇರ ಪರಿಣಾಮ ರೈತ ಸಮುದಾಯದ ಮೇಲೆ ಬಿದ್ದಿದೆ. ನೀರಿನ ಕೊರತೆಯಿಂದ ಕಷ್ಟಪಟ್ಟು ಬೆಳೆದ ಬೆಳೆ ಒಣಗಿ ಹೋಗುವಂತಹ ದುಃಸ್ಥಿತಿ ನಿರ್ಮಾಣವಾಗಿದೆ. ಜಲಾಶಯ-ಕೆರೆಗಳಿಂದ ನೀರು ಪೂರೈಕೆ ಅಸಾಧ್ಯವಾಗಿರುವ ಕಾರಣದಿಂದ ರೈತರು ಬೋರ್‌ವೆಲ್, ಬಾವಿ, ಹಳ್ಳಕೊಳ್ಳಗಳಿಂದ ಪಂಪ್‌ಸೆಟ್ ಮೂಲಕ ಗದ್ದೆ-ತೋಟಗಳಿಗೆ ನೀರು ಪೂರೈಕೆ ಮಾಡುತ್ತಿದ್ದರು. ಇದೀಗ ಅಂತರ್ಜಲದ ಮಟ್ಟ ಕುಸಿಯುತ್ತಿರುವುದರಿಂದ ಬೋರ್‌ವೆಲ್-ಬಾವಿಗಳಿಂದಲೂ ನೀರು ಪೂರೈಕೆ ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಏರಿಕೆ:

ಕಳೆದ ಕೆಲ ತಿಂಗಳುಗಳಿಂದ ಜಿಲ್ಲೆಯಾದ್ಯಂತ ಮಳೆ ಸಂಪೂರ್ಣವಾಗಿ ಕಣ್ಮರೆಯಾಗಿದ್ದು, ಅಕ್ಟೋಬರ್ ತಿಂಗಳಿನಿಂದಲೇ ಜಿಲ್ಲೆಯಾದ್ಯಂತ ತಾಪಮಾನದ ಪ್ರಮಾಣದಲ್ಲಿ ತೀವ್ರ ಹೆಚ್ಚಳ ಕಂಡುಬಂದಿದೆ. ಬಿಸಿಲ ಬೇಗೆ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದೆ. ಶಿವಮೊಗ್ಗ ನಗರದಲ್ಲಿ ಇತ್ತೀಚೆಗೆ 30 ರಿಂದ 35 ಡಿಗ್ರಿ ಸೆಲ್ಸಿಯಸ್‌ವರೆಗೆ ತಾಪಮಾನ ದಾಖಲಾಗುತ್ತಿದ್ದು, ಬಿಸಿಲ ಹೊಡೆತಕ್ಕೆ ನಾಗರಿಕರು ಏದುಸಿರು ಬಿಡುವಂತಾಗಿದೆ. ಶಿವಮೊಗ್ಗ ಜಿಲ್ಲೆಯ ತಾಲೂಕು ಕೇಂದ್ರಗಳು, ಪ್ರಮುಖ ಹೋಬಳಿ ಕೇಂದ್ರಗಳಲ್ಲಿಯೂ ಬಿಸಿಲ ಹೊಡೆತ ತೀವ್ರವಾಗಿದೆ. ಹಿಂಗಾರು ಅನುಮಾನ?: ಮುಂಗಾರು ಮಳೆ ಪೂರ್ಣಗೊಂಡು ಹಿಂಗಾರು ಮಳೆಯ ಅವಧಿ ಪ್ರಾರಂಭಗೊಂಡಿದೆ. ಆದರೆ ಬಹುತೇಕ ಜಿಲ್ಲೆಯಾದ್ಯಂತ ಎಲ್ಲೆಡೆ ವಾಡಿಕೆಯ ಮಳೆಯೂ ಆಗಿಲ್ಲ. ಕೆಲವೆಡೆ ಒಂದೆರೆಡು ದಿನ ತುಂತುರು ಮಳೆ ಹೊರತುಪಡಿಸಿದರೆ ವರ್ಷಧಾರೆ ಅಕ್ಷರಶಃ ಮಾಯವಾಗಿದೆ. ಹವಾಮಾನ ಇಲಾಖೆಯ ಮೂಲಗಳು ಹೇ

ುವ ಪ್ರಕಾರ ಹಿಂಗಾರು ಮಳೆ ಕೂಡ ನಿರೀಕ್ಷಿತ ಪ್ರಮಾಣದಲ್ಲಿ ಬೀಳುವುದು ಅನುಮಾನವಾಗಿದೆ ಎಂದು ಹೇಳುತ್ತಿವೆ. ಒಟ್ಟಾರೆ ಮಲೆನಾಡು ಬಯಲುಸೀಮೆಯಾಗಿ ಮಾರ್ಪಡುತ್ತಿದ್ದು, ತೀವ್ರ ಸ್ವರೂಪದ ಪ್ರಾಕೃತಿಕ ವೈಪರೀತ್ಯಕ್ಕೆ ಸಾಕ್ಷಿಯಾಗುತ್ತಿದೆ. ಇದಕ್ಕೆ ಮಲೆನಾಡಿನಾದ್ಯಂತ ನಡೆಯುತ್ತಿರುವ ಮರಗಳ ಮಾರಣ ಹೋಮ, ಕಣ್ಮರೆಯಾಗುತ್ತಿರುವ ದಟ್ಟ ಅರಣ್ಯಗಳು, ಪರಿಸರ ಮಾಲಿನ್ಯ ಕಾರಣವಾಗಿದೆ ಎಂದು ಪರಿಸರ ಪ್ರೇಮಿಗಳು ಅಭಿಪ್ರಾಯಪಡುತ್ತಿದ್ದು, ಮುಂಬರುವ ಬೇಸಿಗೆ ಮಲೆನಾಡಿಗರ ಪಾಲಿಗೆ ಕರಾಳವಾಗಿರುವುದಂತೂ ಸತ್ಯವಾಗಿದೆ.

ಕುಡಿಯುವ ನೀರಿಗೆ ಪರಿತಪಿಸುವ ಸಿ್ಥತಿ ನಿರ್ಮಾಣ

ತಾಪಮಾನದ ದಿಢೀರ್ ಹೆಚ್ಚಳದಿಂದ ಅಂತರ್ಜಲ ಮಟ್ಟ ತೀವ್ರ ಪ್ರಮಾಣದಲ್ಲಿ ಕುಸಿಯಲಾರಂಭಿಸಿದೆ. ಬೋರ್‌ವೆಲ್, ಕೆರೆಕಟ್ಟೆ, ಬಾವಿಗಳಲ್ಲಿ ನೀರಿನ ಕೊರತೆ ಕಂಡುಬರುತ್ತಿದೆ. ಈಗಾಗಲೇ ಜಿಲ್ಲೆಯ ನೂರಾರು

ಕೆರೆಗಳು ನೀರಿಲ್ಲದೆ ಬರಿದಾಗಿವೆ. ಇದೇ ರೀತಿ ಬಿಸಿಲ ಬೇಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಅಂತರ್ಜಲದ ಮಟ್ಟ ಇನ್ನಷ್ಟು ಕುಸಿಯಲಿದೆ. ಇಡೀ ಮಲೆನಾಡು ಕುಡಿಯುವ ನೀರಿಗೆ ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗುವ ಆತಂಕ ಸೃಷ್ಟಿಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯಲ್ಲಿ ಈ ರೀತಿಯ ಪರಿಸ್ಥಿತಿ ಕಂಡುಬಂದಿರಲಿಲ್ಲ. ಜಿಲ್ಲೆಯ ಬಯಲು ಪ್ರದೇಶ ಮಾ

ತ್ರವಲ್ಲದೆ ದಟ್ಟ ಅರಣ್ಯ ಪ್ರದೇಶದಿಂದ ಆವೃತವಾಗಿರುವ ಮಲೆನಾಡು ಭಾಗಗಳಲ್ಲಿಯೂ ಚಳಿಗಾಲದಲ್ಲಿಯೇ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. ಇನ್ನೊಂದೆಡೆ ತಾಪಮಾನದ ಪ್ರಮಾಣ ಕೂಡ ಏರಿಕೆಯಾಗುತ್ತಿರುವುದರಿಂದ ಕೃಷಿ ಚಟುವಟಿಕೆ ಮಾತ್ರವಲ್ಲದೆ ಕುಡಿಯಲು ನೀರು ಪೂರೈಕೆ ಮಾಡಲು ಅಸಾಧ್ಯವಾಗುವಂತಾಗಿದೆ ಎಂದು ಜಿಲ್ಲಾ ಪಂಚಾಯತ್ ಹಿರಿಯ ಅಧಿಕಾರಿಯೋರ್ವರು ಹೇಳುತ್ತಾರೆ

Writer - ಬಿ.ರೇಣುಕೇಶ್

contributor

Editor - ಬಿ.ರೇಣುಕೇಶ್

contributor

Similar News