ತಲಾಖ್, ಏಕರೂಪ ನಾಗರಿಕ ಸಂಹಿತೆ ವಿರೋಧಿಸಿ ಬೃಹತ್ ಪ್ರತಿಭಟನೆ
ಕರ್ನಾಟಕ ಮುಸ್ಲಿಮ್ ಜಮಾಅತ್ ಕೌನ್ಸಿಲ್‌ನಿಂದ ಪ್ರಧಾನಿಗೆ ಮನವಿ ಚಿಕ್ಕಮಗಳೂರು, ನ.5: ತಲಾಖ್ ಮತ್ತು ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿರುವುದು ಪ್ರಜಾಪ್ರಭುತ್ವ ರಾಷ್ಟ್ರದ ಜಾತ್ಯತೀತ ನಿಲುವಿಗೆ ಮಾರಕ ಎಂದು ಆರೋಪಿಸಿ ಕರ್ನಾಟಕ ಮುಸ್ಲಿಮ್ ಜಮಾಅತ್ ಕೌನ್ಸಿಲ್ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಯಿತು.
ಈ ವೇಳೆ ಕರ್ನಾಟಕ ಮುಸ್ಲಿಮ್ ಜಮಾಅತ್ ಕೌನ್ಸಿಲ್ ರಾಜ್ಯಾಧ್ಯಕ್ಷ ಶಾಫಿ ಸಅದಿ ಮಾತನಾಡಿ, ತಲಾಖ್ ಮತ್ತು ಏಕರೂಪ ನಾಗರಿಕ ಸಂಹಿತೆ ಕುರಿತಂತೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ವಿನಾಕಾರಣ ಅನಗತ್ಯ ರೀತಿಯಲ್ಲಿ ಹಸ್ತಕ್ಷೇಪ ನಡೆಸುತ್ತಿದೆ. ಈ ವಿಚಾರದಲ್ಲಿ ಕೇಂದ್ರ ಸರಕಾರ ಮೂಗು ತೂರಿಸುವುದು ಸರಿಯಲ್ಲ. ದೇಶದಲ್ಲಿ ಪರಿಹರಿಸಲಾಗದೆ ಉಳಿದಿರುವ ಅನೇಕ ಸಮಸ್ಯೆಗಳಿವೆ. ಅವುಗಳನ್ನು ಬಗೆಹರಿಸುವತ್ತ ಹಾಗೂ ಸಾಮಾನ್ಯ ಜನರು ಉತ್ತಮ ರೀತಿಯಲ್ಲಿ ಬದುಕು ಸಾಗಿಸಲು ಬೇಕಾದ ಮಾದರಿಯಲ್ಲಿ ಆಡಳಿತ ನಡೆಸಲಿ ಎಂದು ಆಗ್ರಹಿಸಿದರು.
ಮುಸ್ಲಿಮ್ ಸಮುದಾಯದ ಜನರು ಅಡ್ಡಿ ಆತಂಕವಿಲ್ಲದೆ ಈ ವಿಚಾರದಲ್ಲಿ ಉತ್ತಮ ರೀತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಹೀಗಿರುವಾಗ ಕೇಂದ್ರ ಸರಕಾರ ಯಾವುದೇ ಕಾರಣಕ್ಕೂ ಮಧ್ಯೆ ಪ್ರವೇಶಿಸಿ ಸಮಸ್ಯೆ ತಂದಿಡುವುದು ಸರಿಯಲ್ಲ. ಇದು ಮುಸ್ಲಿಮರಿಗೆ ಸಂವಿಧಾನ ನೀಡಿರುವ ವಿಶೇಷ ವೈಯಕ್ತಿಕ ಕಾನೂನಿನ ಮೇಲೆ ಸವಾರಿ ಮಾಡಿದಂತಾಗುತ್ತದೆ ಎಂದು ದೂರಿದರು.
ಸಂಯುಕ್ತ ಜಮಾಅತ್ ಖಾಝಿ ಬೇಕಲ್ ಇಬ್ರಾಹೀಂ ಮುಸ್ಲಿ ಯಾರ್ ಮಾತನಾಡಿ, ಏಕರೂಪ ನಾಗರಿಕ ಸಂಹಿತೆಯನ್ನು ಕೇವಲ ನಿರ್ದೇಶನ ತತ್ವಗಳಲ್ಲೊಂದಾಗಿ ಸಂವಿಧಾನವು ಪ್ರಸ್ತಾಪಿಸಿದೆ. ಇದನ್ನು ಜಾರಿಗೊಳಿಸುವುದರಿಂದ ಸಮುದಾಯದ ಮೂಲಭೂತ ಹಕ್ಕುಗಳಿಗೆ ಕೊಡಲಿ ಪೆಟ್ಟು ಬಿದ್ದಂತಾಗುತ್ತದೆ. ಮುಸ್ಲಿಮರ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ಗದಾಪ್ರಹಾರ ಮಾಡಿದಂತಾಗುವ ಅಪಾಯಕಾರಿ ಸನ್ನಿವೇಶ ನಿರ್ಮಾಣವಾಗಲಿದೆ. ಇದರಿಂದ ಜನರು ದಂಗೆ ಏಳುವ ದಿನ ದೂರವಿಲ್ಲ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿ, ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ಕರ್ನಾಟಕ ಮುಸ್ಲಿಮ್ ಜಮಾಅತ್ ಕೌನ್ಸಿಲ್ ಅಧ್ಯಕ್ಷ ಯೂಸುಫ್ ಹಾಜಿ, ಕಾರ್ಯದರ್ಶಿ ಝೈದ್ ಬಾಹಸನಿ, ಜಿಪಂ ಮಾಜಿ ಅಧ್ಯಕ್ಷ ಕೆ. ಮುಹಮ್ಮದ್, ಮುಖಂಡರಾದ ಬಿ.ಎಸ್. ಮುಹಮ್ಮದ್, ಸೈಯದ್ ಅಝ್ಮತ್, ಜಂಶೀದ್ ಹಾಗೂ ಜಿಲ್ಲೆಯ ವಿವಿಧ ಮಸೀದಿಗಳ ಉಸ್ತಾದರು ಪಾಲ್ಗೊಂಡಿದ್ದರು.