ಜೈಪುರದ ನಕಲಿ ನ್ಯಾಯವಾದಿ ಬೆಂಗಳೂರಿನಲ್ಲಿ ಸೆರೆ
ಬೆಂಗಳೂರು, ನ.6: ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಜೈಪುರದ ಮೂಲದ ನಕಲಿ ವಕೀಲೆಯನ್ನು ಶನಿವಾರ ಪುಲಕೇಶಿ ನಗರ ಪೊಲೀಸರು ಬಂಧಿಸಿದ್ದಾರೆ.
ಖುಷ್ಬುಶರ್ಮಾಳನ್ನು ವಕೀಲರೊಬ್ಬರಿಂದ ಹಣ ಪಡೆದು ವಂಚಿಸಿದ ಆರೋಪದ ಮೇಲೆ ಪುಲಕೇಶಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಖುಷ್ಬು ಶರ್ಮಾ ಅಲಿಯಾಸ್ ಸ್ಮೃತಿ ಶರ್ಮಾ(26) ವಿರುದ್ಧ ರಾಜಸ್ಥಾನ, ದಿಲ್ಲಿ, ಆಂಧ್ರಪ್ರದೇಶ, ಪುಣೆ ಸೇರಿದಂತೆ ದೇಶದ ವಿವಿಧೆಡೆ 150ಕ್ಕೂ ಹೆಚ್ಚು ವಂಚನೆ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದು ಬಂದಿದೆ. ಅಂಗವಿಕಲೆಯಾಗಿರುವ ಖುಷ್ಬು ಶರ್ಮ ಅಫಘಾತವೊಂದರಲ್ಲಿ ಬಲಗೈಯನ್ನು ಕಳೆದುಕೊಂಡಿದ್ದಳು.
ನಗರದ ಯುಬಿ ಸಿಟಿ ಕಟ್ಟಡದಲ್ಲಿ ಕೊಠಡಿ ಕೊಡಿಸುವ ನೆಪದಲ್ಲಿ ನ್ಯಾಯವಾದಿಯೊಬ್ಬರಿಂದ 2.5 ಲಕ್ಷ ರೂಪಾಯಿ ಪಡೆದು ವಂಚಿಸಿದ್ದರೆನ್ನಲಾಗಿದೆ. ಅವರು ನೀಡಿದ ದೂರಿನಂತೆ ಪುಲಕೇಶಿ ನಗರ ಪೊಲೀಸರು ಖುಷ್ಬು ಶರ್ಮಾ ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದಾಗ ಈಕೆ ಹಲವು ವಂಚನೆ ಪ್ರಕರಣಗಳು ಬೆಳಕಿಗೆ ಬಂದಿತೆನ್ನಲಾಗಿದೆ. ಒಂದು ಕಡೆ ಐಎಎಸ್ ಅಧಿಕಾರಿ. ಇನ್ನೊಂದು ಕಡೆ ಐಪಿಎಸ್ ಅಧಿಕಾರಿಯ ಮಗಳು ಹಾಗೂ ಸುಪ್ರೀಂ ಕೋರ್ಟ್‌ನ ವಕೀಲೆ ಎಂದು ಹೇಳಿಕೊಳ್ಳುತ್ತಿದ್ದ
ಇಂದಿರಾನಗರದ ಪಿಜಿಯೊಂದರಲ್ಲಿ ವಾಸವಾಗಿದ್ದಳು. ಜೈಪುರ ಮೂಲದ ಖುಷ್ಬು ಶರ್ಮಾ ಕಳೆದ ಏಪ್ರಿಲ್ ನಲ್ಲಿ ಬೆಂಗಳೂರಿಗೆ ಆಗಮಿಸಿ ಇಂದಿರಾನಗರದ ಪಿಜಿಯೊಂದರಲ್ಲಿ ವಾಸವಾಗಿದ್ದಳು.ನಗರದ ವಕೀಲರೊಬ್ಬರನ್ನು ಫೇಸ್ ಬುಕ್ ಮೂಲಕ ಪರಿಚಯ ಮಾಡಿಕೊಂಡಿದ್ದಳು. ತಾನು ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯವಾದಿ ಎಂದು ಹೇಳಿ ಅವರಿಗೆ ಕಚೇರಿ ತೆರೆಯಲು ಯುಬಿ ಸಿಟಿ ಕಟ್ಟಡದಲ್ಲಿ ಕೊಠಡಿ ಒದಗಿಸಿಕೊಡುವುದಾಗಿ ನಂಬಿಸಿ ವಂಚಿಸಲು ಹೋಗಿ ಸಿಕ್ಕಿ ಬಿದ್ದಿದ್ದಾಳೆ ಎಂದು ತಿಳಿದು ಬಂದಿದೆ.
ಇತ್ತೀಚೆಗೆ ವಕೀಲರಿಗೆ ಕಚೇರಿಗೆ ಕೊಠಡಿ ಒದಗಿಸಿಕೊಂಡು ಭರವಸೆ ನೀಡಿ 1.45 ಲಕ್ಷ ರುಪಾಯಿ ಮತ್ತು 80 ಸಾವಿರ ರೂಪಾಯಿ ಮೌಲ್ಯದ ಆ್ಯಪಲ್ ಫೋನ್ ಪಡೆದಿದ್ದಳು ಎನ್ನಲಾಗಿದೆ.
ಖುಷ್ಬು ಕಚೇರಿ ತೋರಿಸಲು ಬಂದಿದ್ದ ವೇಳೆ ವಕೀಲರನ್ನು ಯುಬಿ ಸಿಟಿ ಕಟ್ಟಡದ ಬಳಿ ಇಳಿಸಿ ಅವರ ಕಾರಿನಲ್ಲಿದ್ದ ಕರಿಕೋಟು ಹಾಗೂ ಸೂಟ್‌ಕೇಸ್ ತೆಗೆದುಕೊಂಡು ಪರಾರಿಯಾಗಿದ್ದಳು. ಅವರ ಕೋಟಿನಲ್ಲಿ 25 ಸಾವಿರ ರುಪಾಯಿ ನಗದು ಇತ್ತು ಎನ್ನಲಾಗಿದೆ. ವಂಚನೆಗೊಳಗಾದ ವಕೀಲರು ಪುಲಕೇಶಿ ನಗರ ಠಾಣೆಗೆ ಈಕೆಯ ವಿರುದ್ಧ ದೂರು ನೀಡಿದ್ದರು.
ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುವ ಖುಷ್ಬು ಓದಿದ್ದು 8ನೇ ತರಗತಿ. ತನಗಿರುವ ಸೌಂದರ್ಯವನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಹಲವರನ್ನು ಬುಟ್ಟಿಗೆ ಹಾಕಿಕೊಂಡು ಅವರಿಗೆ ವಂಚಿಸಿ ಪರಾರಿಯಾಗುತ್ತಿದ್ದಳು. ‘2015ರ ಮೇ 27ರಂದು ಜೈಪುರ ಪೊಲೀಸರು ಆಕೆಯನ್ನು ಬಂಧಿಸಿದ್ದರು. ವಿಚಾರಣೆಗೆ ಕರೆದೊಯ್ಯುವಾಗ ಸಂಭವಿಸಿದ ಕಾರು ಅಪಘಾತದಲ್ಲಿ ಆಕೆಯ ಬಲಗೈ ಕಳೆದುಕೊಂಡಿದ್ದಳು ಎಂದು ತಿಳಿದು ಬಂದಿದೆ.