ಮೀಸಲಾತಿ ಹೆಚ್ಚಳ: ಮೂಗಿಗೆ ಸವರಿದ ತುಪ್ಪ

Update: 2016-11-07 18:38 GMT

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಶ್ರೇಯೋಭಿವೃದ್ಧಿಗಾಗಿ ಸರಕಾರಗಳು ಇದುವರೆಗೆ ಡಾ. ಬಿ.ಆರ್. ಅಂಬೇಡ್ಕರ್‌ಅವರ ಜಯಂತಿ ಸಂದರ್ಭದಲ್ಲಿ ಹೊಸ ಹೊಸ ಕಾರ್ಯಕ್ರಮಗಳನ್ನು ಪ್ರಕಟಿಸುತ್ತ ಬಂದಿವೆ. ಈಗ ಪರಿಶಿಷ್ಟ ಸಮುದಾಯದವರಿಗಾಗಿ ಹಮ್ಮಿಕೊಳ್ಳುತ್ತಿರುವ ಮಹರ್ಷಿ ವಾಲ್ಮೀಕಿ ಜಯಂತಿ ಸಂದರ್ಭದಲ್ಲೂ ನೂತನ ಭರವಸೆಗಳು ಪ್ರಕಟಗೊಳ್ಳುತ್ತಿವೆ. ಅದೇ ಪ್ರಕಾರ ಈ ಸಲದ ಮಹರ್ಷಿ ವಾಲ್ಮೀಕಿ ಜಯಂತಿ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ‘‘ಈ ಶೋಷಿತ ಸಮುದಾಯಗಳಿಗೆ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಪ್ರಮಾಣ ಹೆಚ್ಚಿಸುವ ಅಗತ್ಯವಿದೆ. ಇದಕ್ಕಾಗಿ ಸಂವಿಧಾನಾತ್ಮಕ ತಿದ್ದುಪಡಿ ತರಬೇಕಾಗುತ್ತದೆ’’ ಎಂದು ಹೇಳಿಕೆ ನೀಡಿ, ಹೊಸ ಆಸೆ ಹುಟ್ಟಿಸಿದ್ದಾರೆ. ಹೌದು. ಸಾವಿರಾರು ವರ್ಷಗಳಿಂದ ತುಳಿದು ತುಳಿದು ಮೂಲೆಗುಂಪು ಮಾಡಿರುವ, ಪಶುಗಳಿಂತ ಕನಿಷ್ಠವಾಗಿ ಪರಿಗಣಿಸಲಾಗಿರುವ ಈ ಸಮುದಾಯ ಮುಖ್ಯವಾಹಿನಿಯಲ್ಲಿ ಒಂದಾಗಿ, ಹೊಸ ಬದುಕು ಕಟ್ಟಿಕೊಂಡು ಮನುಷ್ಯರಂತೆ ಬದುಕುವಂತವರಾಗಬೇಕಾದರೆ ಮೀಸಲಾತಿ ಇಂದಿಗೂ ಅಗತ್ಯವಿದೆ. ಅದರ ಪರಿಷ್ಕರಣೆಯೂ ನಡೆಯಬೇಕಾದ ಅಗತ್ಯವಿದೆ. ಈ ಸಮುದಾಯಗಳನ್ನು ಮೊದಲಿಂದಲೂ ಸಮಾಜವೇ ಲೆಕ್ಕಕ್ಕೆ ತೆಗೆದುಕೊಳ್ಳದಿರುವಾಗ, ಸಮಾಜದ ಮುಖ್ಯವಾಹಿನಿಯದೇ ಹಿತಚಿಂತನೆ ಮಾಡುತ್ತ ಬಂದ ಸರಕಾರಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಇವರ ಅಭಿವೃದ್ಧಿಯನ್ನು ಕಡೆಗಣಿಸುತ್ತಾ ಬಂದಿವೆ. ಐಡೆಂಟಿಟಿ ಇಲ್ಲದ ಈ ಸಮುದಾಯ ಚದರಿಹೋದ ಕಾರಣ ಜನಸಂಖ್ಯೆ ಎಷ್ಟಿದೆ ಎಂಬ ಲೆಕ್ಕಾಚಾರ ಸರಿಯಾಗಿ ಪರಿಗಣನೆಯಾಗಿಲ್ಲ. ಇದರಿಂದಾಗಿ ನ್ಯಾಯಯುತವಾಗಿ ಇವರಿಗೆ ಸಿಗಬೇಕಾದ ಸೌಲಭ್ಯ ಸೌಕರ್ಯಗಳು ಇದುವರೆಗೂ ನಿಗದಿತ ಪ್ರಮಾಣದಲ್ಲಿ ಸಿಕ್ಕಿಲ್ಲ. ಆದರೆ, ಸರಕಾರಿ ಕಾಗದ ಪತ್ರಗಳ ಮೇಲೆ ಇವರಿಗಾಗಿ ಹಮ್ಮಿಕೊಂಡ ಅಭಿವೃದ್ಧಿ ಕಾರ್ಯಕ್ರಮಗಳು, ಮಾಡಿದ ಖರ್ಚು ಸಾಕಷ್ಟು ದೊರೆಯುತ್ತದೆ. ಪ್ರಾಯೋಗಿಕವಾಗಿ ದಲಿತರ ಹರಕು ಗುಡಿಸಲುಗಳಲ್ಲಿ ಅದನ್ನು ಹುಡುಕಿದರೆ ಪ್ರತಿಶತ ಇಪ್ಪತ್ತೈದರ ಪ್ರಮಾಣದಷ್ಟು ಸಿಗುವುದು ಕಷ್ಟ. ಪರಿಸ್ಥಿತಿ ಹೀಗಿರುವಾಗ ಸಮಾಜವಾದಿ ಚಳವಳಿಯ ಮೂಲಕ ಗುರುತಿಸಿಕೊಂಡು ಬೆಳೆದು ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜನಸಂಖ್ಯೆ ಆಧಾರಿತ ಮೀಸಲಾತಿ ಪ್ರಮಾಣ ಹೆಚ್ಚಿಗೆ ನೀಡಬೇಕು ಎಂದು ಒತ್ತಾಯಿಸಿರುವುದರಲ್ಲಿ ನ್ಯಾಯವಿದೆ. ಸಂವಿಧಾನಾತ್ಮಕವಾಗಿ ಈ ಸಮುದಾಯಗಳಿಗೆ ನೀಡಲಾಗಿರುವ ಈಗಿರುವ ಮೀಸಲಾತಿ ಪ್ರಮಾಣವನ್ನೇ ಸಹಿಸಿಕೊಳ್ಳಲಾರದ, ದಲಿತರ ಏಳಿಗೆ ಸಹಿಸಿಕೊಳ್ಳಲಾರದ ಮೂಲಭೂತವಾದಿಗಳು, ಶೋಷಕರು ಯಾಕೋ ಇವರದು ಅತಿಯಾಯಿತು! ಎಂದು ಮತ್ತಷ್ಟು ಕೆಂಡಕಾರುವುದರಲ್ಲಿ ಸಂಶಯವಿಲ್ಲ. ಹಾಗಂತ ಇನ್ನೂ ಗುಲಾಮಗಿರಿಯಲ್ಲಿ ನರಳುತ್ತಿರುವ ಈ ಸಮುದಾಯದ ಹಿತಾಸಕ್ತಿಗೆ ಮೀಸಲಾತಿ ಹೆಚ್ಚಿಸಲು ಹಿಂಜರಿಯಬೇಕಾಗಿಲ್ಲ. ಸಾವಿರಾರು ವರ್ಷಗಳಿಂದ ಉಪವಾಸದಲ್ಲಿಯೇ ಜೀವತೇಯ್ದ ನರಳಿಕೆ ಜೀವನದ ಬಡ್ಡಿಯೇ ಇದುವರೆಗೆ ಚುಕ್ತಾಆಗಿಲ್ಲ. ಸಾಲ ತೀರಿಸುವುದಂತೂ ದೂರದ ಮಾತು.

ಮೀಸಲಾತಿ ಹೆಚ್ಚಳಕ್ಕಿಂತ ಅತ್ಯಂತ ಮುಖ್ಯವಾಗಿ ಈಗಿರುವ ಮೀಸಲಾತಿಯ ಹಕೀಕತ್ತು ಮತ್ತು ದಲಿತರ ಜೀವನ ಮಟ್ಟದ ಸ್ಥಿತಿಗತಿಯ ಬಗ್ಗೆ ಸರಕಾರಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ತುರ್ತು ಅಗತ್ಯವಿದೆ. ಈಗಿರುವ ಸಾಂವಿಧಾನಿಕ ಮೀಸಲಾತಿಯ ಪ್ರಾಯೋಗಿಕ ಅನುಷ್ಠಾನದ ಬಗ್ಗೆ ಎಷ್ಟರ ಮಟ್ಟಿಗೆ ಸರಕಾರಗಳು ಚಿಂತಿಸುತ್ತಿವೆ? ಮತ್ತು ಎಷ್ಟರ ಮಟ್ಟಿಗೆ ಉದ್ಯೋಗ ಮತ್ತು ಶೈಕ್ಷಣಿಕ ಶ್ರೇಯೋಭಿವೃದ್ಧಿಯ ಮೂಲಕ ಸಮಪಾಲು ಸಮಬಾಳು ತಂದುಕೊಡಲು ಪ್ರಯತ್ನಿಸುತ್ತಿವೆ ಎಂಬ ಪ್ರಶ್ನೆ ಮುಖ್ಯವಾಗುತ್ತದೆ.
ಈಗಿರುವ ಮೀಸಲು ನಿಯಮದ ಪ್ರಕಾರ ಸರಕಾರ ಹಾಗೂ ಸರಕಾರಿ ಸೌಕರ್ಯಗಳನ್ನು ಪಡೆದುಕೊಂಡಿರುವ ಸಂಸ್ಥೆಗಳು ಎಷ್ಟರಮಟ್ಟಿಗೆ ಮೀಸಲಾತಿ ನಿಯಮಗಳನ್ನು ಪ್ರಾಮಾಣಿಕವಾಗಿ ಪಾಲಿಸಿವೆ ಮತ್ತು ಪಾಲಿಸುತ್ತಿವೆ ಅನ್ನುವ ಇಡೀ ಸತ್ಯ ಹೊರಬರಬೇಕಾಗಿದೆ. ನಿಗದಿ ಮೀಸಲಾತಿ ಪ್ರಮಾಣದಲ್ಲಿಯೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನ್ಯಾಯಯುತವಾಗಿ ಇದುವರೆಗೆ ಉದ್ಯೋಗಾವಕಾಶ ನೀಡಲು ಸಾಧ್ಯವಾಗಿಲ್ಲ. ಸರಕಾರಿ ನೌಕರಿಗಳು ಮಣ್ಣುಗೂಡಿರುವುದರಿಂದ ಆಧುನಿಕ ಆರ್ಥಿಕ ನೀತಿಗಳಿಂದಾಗಿ ಈ ಸಮುದಾಯದ ಪದವೀಧರರು ಉದ್ಯೋಗವಿಲ್ಲದೆ ಹೊಟ್ಟೆಪಾಡಿಗಾಗಿ ಕನಿಷ್ಠಮಟ್ಟದ ಸಂಬಳಕ್ಕೂ ಗತಿಯಿಲ್ಲದೆ ಜೀವನ ಸಾಗಿಸಬೇಕಾದ ಅನಿವಾರ್ಯತೆಯನ್ನು ಎದುರಿಸುತ್ತಿದ್ದಾರೆ. ದಲಿತರ ಬಗ್ಗೆ ಮೇಲಿಂದ ಮೇಲೆ ಕಳಕಳಿ ವ್ಯಕ್ತಪಡಿಸುತ್ತ ಬಂದಿರುವ ಸರಕಾರಗಳು ಲಕ್ಷಾಂತರ ಬ್ಯಾಕ್‌ಲಾಗ್ ಹುದ್ದೆಗಳನ್ನು ಹಾಗೇ ಉಳಿಸಿಕೊಂಡಿದೆ. ಆರ್ಥಿಕ ಮಿತವ್ಯಯ ಕಾರಣದಿಂದಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಅದರಲ್ಲೂ ವಿಶೇಷವಾಗಿ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಕಳೆದ ಹದಿನೈದು ಇಪ್ಪತ್ತು ವರ್ಷಗಳಿಂದ ಬ್ಯಾಕ್‌ಲಾಗ್ ಹುದ್ದೆಗಳನ್ನು ತುಂಬಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿಲ್ಲ. ಈ ಹುದ್ದೆಗಳ ಭರ್ತಿಯಲ್ಲಿ ಸಂಸ್ಥೆಗಳು ಎಷ್ಟರಮಟ್ಟಿಗೆ ನ್ಯಾಯಯುತವಾಗಿ ನಡೆದುಕೊಳ್ಳುತ್ತಾ ಬಂದಿವೆ ಎಂಬುದನ್ನು ಯಾವ ಸರಕಾರವೂ ತಲೆಕೆಡಿಸಿಕೊಂಡಿಲ್ಲ. ದಲಿತ ಮಂತ್ರಿಗಳಿಗೆ ಮುಖ್ಯಮಂತ್ರಿಗಳಾಗುವುದೇ ದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವಾಗ ದಲಿತರ ಈ ಸಮಸ್ಯೆಗಳ ಬಗ್ಗೆ ಗಮನ ಹರಿಸಲು ಅವರಿಗೆ ಸಮಯ ಸಿಕ್ಕಿಲ್ಲ.
 ಈ ಹಿಂದೆ ಅನುಮತಿ ನೀಡಿದ ಹುದ್ದೆಗಳಲ್ಲಿ ಖಾಸಗಿ ವಲಯದ ಅದೆಷ್ಟೋ ಸಂಸ್ಥೆಗಳು ಈ ಸಮುದಾಯದ ಅಭ್ಯರ್ಥಿಗಳಿಗೆ ಅವಕಾಶ ನೀಡದೆ ಬಹಿರಂಗವಾಗಿ ವಂಚಿಸುತ್ತ ಬಂದಿವೆ. ಪರಿಸ್ಥಿತಿ ಹೀಗಿರಬೇಕಾದರೆ ಅಕ್ಷರ ವಂಚಿತ ಈ ಸಮುದಾಯದಿಂದ ಅಷ್ಟಿಷ್ಟು ಕಲಿತು ಹೊರಬಂದ ಸಂದರ್ಭದಲ್ಲಿ ಅಧುನಿಕ ಆರ್ಥಿಕ ನೀತಿಗಳಿಂದಾಗಿ ಈ ಸಮುದಾಯಕ್ಕೆ ಉದ್ಯೋಗಾವಕಾಶದ ಬಾಗಿಲು ಮುಚ್ಚಿದ್ದರಿಂದ ದಲಿತರನ್ನು ಸಮಾನತೆಯನ್ನು ಸಾರುವ ಸಂವಿಧಾನದ ಸಾಕ್ಷಿಗಣ್ಣಿನಲ್ಲಿಯೇ ಹೊರಕ್ಕೆ ದಬ್ಬಲಾಗಿದೆ. ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದ ಹೆಸರಿನಲ್ಲಿ ಎಲ್ಲಡೆ ಖಾಸಗಿ ಒಡೆತನವೇ ವ್ಯಾಪಿಸಿಕೊಳ್ಳುತ್ತಿರುವಾಗ ಮತ್ತು ಸರಕಾರಗಳು ಬಂಡವಾಳಶಾಹಿಗಳ ಅಧೀನದಲ್ಲಿ ನಿಶ್ಶಕ್ತಿತನದಿಂದ ಬಳಲುತ್ತಿರುವಾಗ ಮೀಸಲಾತಿ ಹೆಚ್ಚಿಸಿ ಈ ಸಮುದಾಯದವರಿಗೆ ಉದ್ಯೋಗಾವಕಾಶ ಕಲ್ಪಿಸುವುದು ಕನಸಿನ ಮಾತು. ಉದ್ಯೋಗ ಸೃಷ್ಟಿಗೆ ಸರಕಾರದ ಹತ್ತಿರ ಇಲಾಖೆಗಳನ್ನು ಹೊರತುಪಡಿಸಿದರೆ ಏನೂ ಉಳಿದಿಲ್ಲ. ಹೀಗಾಗಿ ಮೀಸಲಾತಿ ಎಲ್ಲಿ ಅನ್ವಯಿಸುತ್ತದೆ?. ಖಾಸಗಿಯವರಂತೂ ಪ್ರತಿಭೆ, ಕೌಶಲ್ಯ, ಇಂಗ್ಲಿಷ್ ಸಂವಹನ ಹೆಸರಿನಲ್ಲಿ ಜಾತೀಯತೆಯ ಉದ್ಯೋಗ ಮೇಳಗಳನ್ನು ನಡೆಸುತ್ತಿವೆ. ಈಗ ಕಲಿತು ಕಣ್ಣುಬಿಡುತ್ತಿರುವ ಬಹುಸಂಖ್ಯಾತ ಈ ಯುವಕರಿಗೆ ಇಲ್ಲಿ ಉದ್ಯೋಗ ದೊರೆಯುವುದು ಅಷ್ಟಕಷ್ಟೇ. ಈ ಮಾನದಂಡಗಳನ್ನೇ ನೆಪ ಮಾಡಿಕೊಂಡು ಖಾಸಗಿ ವಲಯ ದಲಿತ ಯುವ ಸಮುದಾಯವನ್ನು ತಳ್ಳುತ್ತಿದೆ. ಕ್ವಚಿತ್ತಾಗಿ ಅವಕಾಶ ಕಲ್ಪಸಿದರೂ ಅತ್ಯಂತ ಕೆಳ ಹಂತದ ಉದ್ಯೋಗ ನೀಡಿ ಶೋಷಿಸಲಾಗುತ್ತಿದೆ. ಈ ಸಮುದಾಯಕ್ಕೆ ಇಲ್ಲಿ ಸರಿಯಾಗಿ ಅವಕಾಶ ಸಿಗುತ್ತಿಲ್ಲ. ಸಿಕ್ಕರೂ ನೆಮ್ಮದಿ ಇಲ್ಲ. ಸೂಕ್ತ ಗೌರವವಿಲ್ಲ.
 ಅಳಿದುಳಿದ ಸರಕಾರಿ ಇಲಾಖೆಗಳ ಉದ್ಯೋಗಾವಕಾಶ ಪಡೆದುಕೊಳ್ಳುವುದು ಬಡಪಾಯಿ ಪ್ರತಿಭಾವಂತರಿಗೆ ಗಗನ ಕುಸುಮ ವಾಗಿ ಪರಿಣಮಿಸಿದೆ. ಚಪರಾಸಿಯಿಂದ ಉನ್ನತ ಹುದ್ದೆಯವರಿಗೆ ಇಂದು ಸರಕಾರಿ ನೌಕರಿ ಸಾಮಾನ್ಯ ನಿಗೆ ಅಸಾಧ್ಯ ಎಂಬುದು ಮನೆ ಮಾತಾಗಿದೆ. ಬಡಪಾಯಿ ಪದವೀಧರ ತನ್ನ ಎಲ್ಲ ಸರ್ಟಿಫಿಕೇಟ್ ಹಾಗೂ ಪದಕಗಳನ್ನು ಮುಂದಿಟ್ಟು ಕೊಂಡು ಅಂಗಲಾಚಿದರೂ ಸರಕಾರಿ ಉದ್ಯೋಗ ಸಿಗುವುದು ಕಷ್ಟ ಸಾಧ್ಯ. ಕಾರಣ- ಕಡಿಮೆ ಉದ್ಯೋಗಾವಕಾಶ, ಸ್ಪರ್ಧೆ ಜಾಸ್ತಿ. ಸರಕಾರಿ ಹುದ್ದೆಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ನಡೆಯುವ ಹಣಕಾಸಿನ ಸ್ಪರ್ಧೆ ವಿಪರೀತ ಎಂಬುದು ಎಲ್ಲರಿಗೂ ಗೊತ್ತಿರುವ ಮಾಮೂಲು ಸಂಗತಿ. ಮೀಸಲು ಹುದ್ದೆಗಳ ಸ್ಪರ್ಧೆಯಲ್ಲಿ ಗೆಲ್ಲುವುದು ಬಲಿತ ದಲಿತನೇ ಹೊರತು ಬಡಪಾಯಿ ದಲಿತನಲ್ಲ. ಅಲ್ಪಪ್ರಮಾಣದ ಮೀಸಲು ಹುದ್ದೆಗಳು ಆರ್ಥಿಕ ಹಾಗೂ ರಾಜಕೀಯ ಬಲ ಪಡೆದಿರುವ ದಲಿತರ ಪಾಲಾಗುತ್ತಿರುವುದರಿಂದ ಕೂಲಿನಾಲಿ ಮಾಡಿ ಓದಿ, ರ್ಯಾಂಕ್, ಚಿನ್ನದ ಪದಕ ಪಡೆದ ಪ್ರತಿಭಾವಂತರು ಸರಕಾರಿ ಹುದ್ದೆಗಳಿಂದ ಸಂಪೂರ್ಣವಾಗಿ ವಂಚಿತರಾಗುತ್ತಿದ್ದಾರೆ.

 ಭ್ರಷ್ಟಾಚಾರದ ಸ್ಪರ್ಧೆ ಎದುರಿಸುವ ಶಕ್ತಿಯಿಲ್ಲದ ಈ ಬಡಪಾಯಿಗಳು ಪಡೆದ ಶಿಕ್ಷಣಕ್ಕೆ ಸಂಬಂಧವಿಲ್ಲದ, ಯಾವುದಾದರೂ ಕೆಲಸ ಮಾಡಿ ಜೀವನ ಸಾಗಿಸುವ ಅತ್ಯಂತ ಕೆಳಮಟ್ಟಕ್ಕೆ ಕುಸಿದುಹೋಗಿದ್ದಾರೆ. ಇಂಥ ವ್ಯಾಪಕ ಭ್ರಷ್ಟ್ಟಾಚಾರ ಹಾಗೂ ಅನೀತಿಗಳ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗದ ಸರಕಾರ ಸಂವಿಧಾನ ತಿದ್ದುಪಡಿ ಮಾಡಿ ಮೀಸಲಾತಿ ಹೆಚ್ಚಿಸಲು ಯೋಚಿಸುತ್ತಿದೆ. ಇದ್ದ ಉದೋಗ್ಯಾವಕಾಶ ನಿಜವಾದ ಫಲಾನುಭವಿಗಳಿಗೆ ತಪ್ಪಿಹೋಗಲು ಭ್ರಷ್ಟಾಚಾರಕ್ಕೆ ಸರಕಾರವೇ ನೇರವಾಗಿ ಕುಮ್ಮಕ್ಕು ನೀಡುತ್ತಿರುವ ವಿಷಯ ಗುಟ್ಟಾಗಿ ಉಳಿದುಕೊಂಡಿಲ್ಲ. ಸರಕಾರದ ನೀತಿ ಹಾಗೂ ಖಾಸಗೀಕರಣದಿಂದಾಗಿ ನಿಜವಾದ ದಲಿತರು ಇಂದು ಗುಣಮಟ್ಟದ ಶಿಕ್ಷಣದಿಂದಲೂ ವಂಚಿತರಾಗುತ್ತಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹೂವಿನ ಹಾಸಿಗೆ ಹಾಸುತ್ತಿರುವ ಸರಕಾರ ಬಡವರ ಸಾರ್ವಜನಿಕ ಶಾಲಾ ಕಾಲೇಜುಗಳನ್ನು ಸಂಪೂರ್ಣವಾಗಿ ಮರೆತಿವೆ. ಬಟ್ಟೆ ಆಕಾರ ಬದಲಾಯಿಸುವ, ಶೂ ಕೊಡುವ, ಸೈಕಲ್ ವಿತರಿಸುವ, ಮಧ್ಯಾಹ್ನ ಬಿಸಿಯೂಟ ನೀಡುವುದನ್ನೇ ಗುಣಮಟ್ಟದ ಶಿಕ್ಷಣ ಎಂದು ಸರಕಾರದ ವ್ಯಾಖ್ಯಾನವಾಗಿದೆ. ಈ ಮೂಲಭೂತ ಆವಶ್ಯಕತೆಗಳು ಈ ಸಮುದಾಯಕ್ಕೆ ತುಂಬಾ ಅಗತ್ಯ. ಆದರೆ, ಅದೇ ಗುಣಮಟ್ಟದ ಶಿಕ್ಷಣ ಎಂದು ಭಾವಿಸಿಕೊಂಡಿರುವುದು ದುರಂತ. ದಲಿತ ಮಕ್ಕಳು ಆಧುನಿಕ ಸ್ಪರ್ಧಾ ಜಗತ್ತನ್ನು ಎದುರಿಸುವ ಶಿಕ್ಷಣ ವ್ಯವಸ್ಥೆ ಕಲ್ಪಿಸುವುದಕ್ಕೆ ಸರಕಾರಕ್ಕೆ ಇದುವರೆಗೆ ಸಾಧ್ಯವಾಗಿಲ್ಲ. ತದ್ವಿರುದ್ಧವಾಗಿ ವಿದ್ಯಾರ್ಥಿಗಳ ಕೊರತೆಯನ್ನು ನೆಪ ಮಾಡಿಕೊಂಡು ಇದ್ದುಬಿದ್ದ ಶಾಲೆಗಳನ್ನು ಮುಚ್ಚಲು ಹವಣಿಸುತ್ತಿದೆ. ಹಾಳುಬಿದ್ದ, ನಿರಪಯುಕ್ತ ಸಾರ್ವಜನಿಕ ಶಾಲೆಗಳಲ್ಲಿ ಓದುವ ದಲಿತ ಮಕ್ಕಳು ಹೊರ ಜಗತ್ತನ್ನು ಸರಿಯಾಗಿ ಎದುರುಗೊಳ್ಳಲು ಸಾಧ್ಯವಾಗುತ್ತಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳಿಗೆ ಪ್ರವೇಶ ನೀಡುವಷ್ಟು ಆರ್ಥಿಕ ಶಕ್ತಿ ಇವರಲ್ಲಿ ಇಲ್ಲ. ವಾಸ್ತವ ಸ್ಥಿತಿ ಹೀಗಿರಬೇಕಾದರೆ, ತುಂಬಾ ದುಬಾರಿಯಾಗಿರುವ ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ಇತರೇ ವೃತ್ತಿಪರ ಕೋರ್ಸ್‌ಗಳಲ್ಲಿ ಪ್ರವೇಶ ಪಡೆದುಕೊಳ್ಳಲು ಈ ಸಮುದಾಯದ ಮಕ್ಕಳಿಗೆ ಸಾಧ್ಯವಾಗುತ್ತಿಲ್ಲವಾದ್ದರಿಂದ ಕನಿಷ್ಠಮಟ್ಟದ ಶಿಕ್ಷಣದಿಂದಾಗಿ ಕೂಲಿಯಾಳುಗಳಾಗಿ ಹೊರಹೊಮ್ಮುವುದರ ಮೂಲಕ ಮತ್ತೊಮ್ಮೆ ವ್ಯವಸ್ಥಿತವಾಗಿ ಶೋಷಣೆಗೆ ಗುರಿಯಾಗುತ್ತಿದ್ದಾರೆ. ಸಾಂವಿಧಾನಿಕ ಮೀಸಲಾತಿಯ ಪರಿಣಾಮಕಾರಿ ಅನುಷ್ಠಾನದಿಂದ ದುಡಿಯುವ ಕೈಗಳಿಗೆ ಸೂಕ್ತ ಉದ್ಯೋಗಾವಕಾಶ ನೀಡಿ, ಹಸಿದ ಹೊಟ್ಟೆಗಳು ತುಂಬಲು ಅವರ ಬಾಯಿಗಳಿಗೆ ಅನ್ನ ದೊರೆಯುವ ಅವಕಾಶಕ್ಕೆ ಮುಕ್ತವಾತಾವರಣ ಕಲ್ಪಿಸಬೇಕಾದ ಸರಕಾರ, ಮೀಸಲಾತಿ ಹೆಚ್ಚಿಸುವ ಮಾತು ಹರಿಬಿಟ್ಟು ತನ್ನ ಅಸ್ತಿತ್ವ ಉಳಿಸಿಕೊಳ್ಳುವುದರ ಸಲುವಾಗಿ ಅನ್ನಕ್ಕಾಗಿ ಬಾಯಿ ತೆಗೆದವರ ಮೂಗಿಗೆ ತುಪ್ಪಸವರುವ ಕೆಲಸಕ್ಕೆ ಮುಂದಾಗಿದೆ. ರಾಜ್ಯ ಹಾಗೂ ಕೇಂದ್ರ ಸರಕಾರಗಳಿಗೆ ನಿಜವಾಗಲೂ ದಲಿತರ ಬಗ್ಗೆ ಕಾಳಜಿ ಇದ್ದಿದ್ದೇ ಆದರೆ, ಡಾ. ಬಿ.ಆರ್. ಅಂಬೇಡ್ಕರ ಬಗ್ಗೆ ಗೌರವ ಹೊಂದಿದ್ದರೆ ನಿಜವಾದ ದಲಿತರು ಎದುರಿಸುತ್ತಿರುವ ನಿತ್ಯ ಬದುಕಿನ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಲಿ. ಅಟ್ಟಹಾಸ ಮೆರೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಿ. ದಲಿತರ ಏಳ್ಗೆಗೆ ಖಾಸಗಿ ವಲಯದಲ್ಲಿ ಮೀಸಲಾತಿ ಜಾರಿಗೊಳಿಸಿ ಸೂಕ್ತ ಉದ್ಯೋಗಾವಕಾಶ ದೊರೆಯುವಂತೆ ಮಾಡಲಿ. ಮಾಡಲೇಬೇಕಾದ ಈ ಕೆಲಸಗಳಿಗೆ ಅಸಾಧ್ಯವೆನಿಸುವ ಸಂವಿಧಾನಿಕ ತಿದ್ದುಪಡಿ ಬೇಕಾಗಿಲ್ಲ. ಸದ್ಯ ಬೇಕಾಗಿರುವುದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿಜವಾದ ಕಾಳಜಿ ಮತ್ತು ಇಚ್ಛಾಶಕ್ತಿ.

Writer - ಡಾ. ಕೆ. ಎನ್. ದೊಡ್ಡಮನಿ

contributor

Editor - ಡಾ. ಕೆ. ಎನ್. ದೊಡ್ಡಮನಿ

contributor

Similar News