×
Ad

ನೋಟ್ ನಿಷೇಧ: ವಿವಿಧೆಢೆ ವ್ಯಾಪಾರ-ವಹಿವಾಟು ಅಸ್ತವ್ಯಸ್ತ

Update: 2016-11-09 23:19 IST

ಶಿವಮೊಗ್ಗ, ನ. 9: ಕೇಂದ್ರ ಸರಕಾರ ದಿಢೀರ್ ಆಗಿ 500 ಹಾಗೂ 1000 ಮುಖ ಬೆಲೆಯ ಹಳೆಯ ನೋಟ್‌ಗಳ ಚಲಾವಣೆಯನ್ನು ಮಂಗಳವಾರ ರಾತ್ರಿಯಿಂದಲೇ ಏಕಾಏಕಿ ರದ್ದುಗೊಳಿಸಿರುವುದು, ಎರಡು ದಿನ ಎಟಿಎಂ ಬಂದ್ ಹಾಗೂ ಒಂದು ದಿನ ಬ್ಯಾಂಕ್‌ಗೆ ರಜೆ ಘೋಷಿಸಿರುವುದು ಶಿವಮೊಗ್ಗ ನಗರದಲ್ಲಿ ವ್ಯಾಪಾರ-ವಹಿವಾಟಿನ ಮೇಲೆ ನೇರ ಪರಿಣಾಮ ಬೀರಿದೆ.


 ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹಿಂದೆಂದೂ ಕಂಡುಬರದಂತಹ ಅಲ್ಲೋಲ ಕಲ್ಲೋಲ ಪರಿಸ್ಥಿತಿ ಸೃಷಿಯಾಗಿದ್ದು, ಅಕ್ಷರಶಃ ಜನಜೀವನ ಅಸ್ತವ್ಯಸ್ತವಾಗಿದೆ. 500, 1000 ರೂ. ನೋಟ್‌ಗಳಿಗೆ ಬೆಲೆಯೇ ಇಲ್ಲದಂತಾಗಿದ್ದು, 100 ಹಾಗೂ 50 ಮುಖಬೆಲೆಯ ನೋಟ್‌ಗಳಿಗೆ ಸಖತ್ ಡಿಮ್ಯಾಂಡ್ ಕಂಡುಬಂದಿದೆ. ಬಹುತೇಕ ವರ್ತಕರಲ್ಲಿ ಚಿಲ್ಲರೆಯ ಕೊರತೆ ಎದುರಾಯಿತು.

ನಿಸ್ತೇಜ: ಬುಧವಾರ ಬೆಳಗ್ಗೆಯಿಂದಲೇ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಹಾಗೂ ಪ್ರಮುಖ ರಸ್ತೆಗಳಲ್ಲಿ ನಿಸ್ತೇಜ ವಾತಾವರಣ ಕಂಡುಬಂದಿತು. ಕೆಲ ಅಂಗಡಿ-ಮುಂಗಟ್ಟುಗಳು ಬಾಗಿಲು ಮುಚ್ಚಿದ್ದರೆ, ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದ ಅಂಗಡಿ-ಮುಂಗಟ್ಟುಗಳಲ್ಲಿ ವಹಿವಾಟು ಬಹುತೇಕ ಕಡಿಮೆಯಿದ್ದುದು ಕಂಡುಬಂದಿತು. ವ್ಯಾಪಾರ-ವಹಿವಾಟು, ಜನಜಂಗುಳಿಯಿಂದ ಸದಾ ತುಂಬಿ ತುಳುಕುವ ನಗರದ ಗಾಂಧಿಬಝಾರ್, ನೆಹರೂ ರಸ್ತೆ, ಬಿ.ಎಚ್.ರಸ್ತೆ, ದುರ್ಗಿಗುಡಿ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ನೀರಸ ವಾತಾವರಣ ಕಂಡುಬಂದಿತು. ಹಲವೆಡೆ ಗ್ರಾಹಕರಿಗಾಗಿ ವರ್ತಕರು ಕಾದು ಕುಳಿತುಕೊಳ್ಳುವಂತಾಗಿತ್ತು. ಮತ್ತೆ ಕೆಲ ವರ್ತಕರು ನೋಟ್‌ಗಳ ಚಲಾವಣೆ ರದ್ದಿನಿಂದ ವ್ಯಾಪಾರದ ಮೇಲಾಗುವ ಪರಿಣಾಮಗಳ ಬಗ್ಗೆ ಗಂಭೀರವಾಗಿ ಆಲೋಚನೆ ನಡೆಸುತ್ತಿದ್ದುದು ಕಂಡುಬಂದಿತು.


ಆದರೆ ಆನ್‌ಲೈನ್ ಮೂಲಕ ಬ್ಯಾಂಕಿಂಗ್ ವ್ಯವಹಾರ ನಡೆಸುವ ವರ್ತಕರು ಎಂದಿನಂತೆ ಹಣ ವರ್ಗಾವಣೆ ಪ್ರಕ್ರಿಯೆ ನಡೆಸುತ್ತಿದ್ದುದು ಕಂಡುಬಂದಿತಾದರೂ ಈ ವರ್ತಕರ ವ್ಯವಹಾರದ ಮೇಲೂ ಕೂಡ ನೋಟ್ ರದ್ದಿನ ಎಫೆಕ್ಟ್ ಗಾಢವಾಗಿ ಬಿದ್ದಿತ್ತು. ಮಿಶ್ರ ಪ್ರತಿಕ್ರಿಯೆ: ದಿಢೀರ್ ಆಗಿ 500 - 1000 ಕರೆನ್ಸಿ ರದ್ದಿಗೆ ವಾಣಿಜ್ಯೋದ್ಯಮ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಕೇಂದ್ರ ಸರಕಾರದ ಈ ಕ್ರಮವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರೆ, ಮತ್ತೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸರಕಾರದ ತರಾತುರಿಯ ನಿರ್ಧಾರದಿಂದ ಆರ್ಥಿಕ ವ್ಯವಸ್ಥೆ ಅಸ್ತವ್ಯಸ್ತವಾಗುವಂತಾಗಿದ್ದು, ಜನಸಾಮಾನ್ಯರು ತೊಂದರೆಗೊಳಗಾಗುವಂತೆ ಮಾಡಿದೆ ಎಂದು ಅಭಿಪ್ರಾಯ ಪಡುತ್ತಾರೆ. ಸರಕಾರ ಕೈಗೊಂಡಿರುವ ನಿರ್ಧಾರದಿಂದ ದೇಶದ ಸಾಮಾನ್ಯ ಜನರು ತೀವ್ರ ತೊಂದರೆಗೊಳಗಾಗುವಂತಾಗಿದೆ.
 
ಅಕ್ಷರಶಃ ವ್ಯಾಪಾರ-ವಹಿವಾಟು ಸ್ತಬ್ಧಗೊಳ್ಳುವಂತೆ ಮಾಡಿದ್ದು, ಕೈಕಾಲು ಆಡಿಸಲಾಗದಂತಹ ಬಿಕ್ಕಟ್ಟು ಸೃಷ್ಟಿಸಿದೆ. ವರ್ತಕರು ಅಪಾರ ಪ್ರಮಾಣದ ನಷ್ಟ ಅನುಭವಿಸುವಂತಾಗಿದೆ. ಮಾರುಕಟ್ಟೆಯಲ್ಲಿ ಸಾವಿರಾರು ಕೋಟಿ ರೂ. ನಷ್ಟ ಉಂಟಾಗಿದೆ. ಈ ಪರಿಸ್ಥಿತಿ ಸೃಷ್ಟಿಯಾಗದಂತೆ ಕೇಂದ್ರ ಸರಕಾರ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಾಗಿತ್ತು. ತದನಂತರವೇ ನೋಟ್ ರದ್ದುಗೊಳಿಸುವ ನಿರ್ಧಾರ ಪ್ರಕಟಿಸಬೇಕಾಗಿತ್ತು. ಗ್ರಾಮೀಣ ಜನರೇ ಹೆಚ್ಚಾಗಿರುವ, ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕ ವ್ಯವಸ್ಥೆಯ ಭಾರತದಂತಹ ದೇಶದಲ್ಲಿ ಪ್ರಮುಖ ಮುಖಬೆಲೆಯ ನೋಟುಗಳ ಚಲಾವಣೆ ರದ್ದುಗೊಳಿಸುವ ನಿರ್ಧಾರದಿಂದ ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಅರ್ಥ ವ್ಯವಸ್ಥೆಯೇ ಕುಸಿದು ಬೀಳುವ ಸಾಧ್ಯತೆಯಿರುತ್ತದೆ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಉದ್ಯಮಿಯೋರ್ವರು ತಮ್ಮ ಅನಿಸಿಕೆ ವ್ಯಕ್ತಪಡಿಸುತ್ತಾರೆ. 


ಬ್ಯಾಂಕ್ ವ್ಯವಹಾರ ಸ್ಥಗಿತ: ಪರದಾಡಿದ ಜನಸಾಮಾನ್ಯ ಮಡಿಕೇರಿ: ಕೇಂದ್ರ ಸರಕಾರ 500 ಹಾಗೂ 1000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ದಿಢೀರ್ ಆಗಿ ರದ್ದು ಮಾಡಿದ್ದಲ್ಲದೆ, ಬ್ಯಾಂಕ್‌ಗಳಲ್ಲಿ ವ್ಯವಹಾರ ನಡೆಯದೆ ಇದ್ದ ಕಾರಣ ಜನಸಮಾನ್ಯರು ಪರದಾಡುವ ಪರಿಸ್ಥಿತಿ ಎದುರಾಯಿತು.
ಕೇಂದ್ರ ಸರಕಾರದ ಈ ದಿಢೀರ್ ನಿರ್ಧಾರದ ಅರಿವು ಜನರಿಗೆ ತಿಳಿಯಬೇಕಾದರೆ ಮಧ್ಯ ರಾತ್ರಿಯೇ ಆಗಿತ್ತು. ಬೆಳಗ್ಗೆ ಎದ್ದು ಎಂದಿನಂತೆ ಸಾಮಾನ್ಯ ಜೀವನಕ್ಕೆ ಮರಳಿದ ಜನಸಾಮಾನ್ಯರಿಗೆ ಸಾವಿರ ಹಾಗೂ ಐನೂರು ರೂಪಾಯಿ ನೋಟುಗಳು ಚಲಾವಣೆಯಾಗದೆ ಇದ್ದಾಗ ಅಸಹಾಯಕ ಪರಿಸ್ಥಿತಿ ಎದುರಾಯಿತು. ಕೊಡಗು ಜಿಲ್ಲೆಯಲ್ಲೂ ಜನ ಇದೇ ಅತಂತ್ರ ಸ್ಥಿತಿಯನ್ನು ಅನುಭವಿಸಿದರು.

ಸಾವಿರ ಹಾಗೂ ಐನೂರು ರೂಪಾಯಿ ನೋಟುಗಳ ಚಲಾವಣೆಯನ್ನು ರದ್ದು ಮಾಡುವ ಮೂಲಕ ಕೇಂದ್ರ ಸರಕಾರ ಭ್ರಷ್ಟರಿಗೆ ತಕ್ಕ ಪಾಠ ಕಲಿಸಿದೆ ಎನ್ನುವ ಅಭಿಪ್ರಾಯ ಬಹುತೇಕರಿಂದ ಕೇಳಿ ಬಂದರೂ ಬ್ಯಾಂಕ್ ವ್ಯವಹಾರ ಮತ್ತು ಎಟಿಎಂ ಬಂದ್ ಮಾಡಿದ ಬಗ್ಗೆ ಕೊಂಚ ಟೀಕೆಗಳು ಕೇಳಿ ಬಂದವು. ಐನೂರು, ಸಾವಿರ ಮುಖಬೆಲೆಯ ನೋಟುಗಳನ್ನು ಹೊಂದಿದ್ದವರು ಅನಿವಾರ್ಯ ಕಾರ್ಯಗಳನ್ನು ಕೂಡ ನಿಭಾಯಿಸಲು ಸಾಧ್ಯವಾಗಿಲ್ಲ. ವರ್ತಕರು ಸೇರಿದಂತೆ ವ್ಯಾವಹಾರಿಕವಾಗಿ ಇತರರು ಈ ಎರಡೂ ನೋಟುಗಳನ್ನು ಪಡೆಯಲು ನಿರಾಕರಿಸಿದರು. ಇದರಿಂದ ಪರದಾಡಿದ ಅನೇಕರು ಸಾಲಕ್ಕೆ ಮೊರೆ ಹೋದರು, ಅಲ್ಲದೆ ತಮ್ಮಲ್ಲಿದ್ದ ಐನೂರು, ಸಾವಿರದ ನೋಟುಗಳನ್ನು ನೀಡಿ ಸಾಲವನ್ನು ನೀಡುವಂತೆ ಮನವೊಲಿಸುತ್ತಿದ್ದ ದೃಶ್ಯ ಕಂಡು ಬಂತು.

ಎಟಿಎಂ ನ್ನೇ ನಂಬಿಕೊಂಡಿದ್ದ ಕೆಲವರು ಹಣವಿಲ್ಲದೆ ಪರದಾಡುವಂತ್ತಾಯಿತು. ಮಡಿಕೇರಿ ನಗರದಲ್ಲಿ ವ್ಯಾಪಾರ, ವಹಿವಾಟು ಸಂಪೂರ್ಣವಾಗಿ ಕುಸಿದು ಹೋಗಿತ್ತು. ಅಂಗಡಿ, ಮುಂಗಟ್ಟುಗಳು, ಹೊಟೇಲ್‌ಗಳು ಖಾಲಿಯಾಗಿದ್ದವು. ಪ್ರವಾಸಿಗರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿಲ್ಲ. ನಗರದ ಮುಖ್ಯ ಬೀದಿಗಳಲ್ಲೇ ಜನ ಸಂಚಾರ ವಿರಳವಾಗಿತ್ತು. ಕೆಎಸ್ಸಾರ್ಟಿಸಿ ಹಾಗೂ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರ ಕೊರತೆ ಎದುರಾಯಿತು.

500-1000 ರೂ. ನೋಟು ನಿಷೇಧ: ಮಲೆನಾಡಿನಲ್ಲಿ ಆತಂಕಗೊಂಡ ಜನತೆ
  ತೀರ್ಥಹಳ್ಳಿ: 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ಕೇಂದ್ರ ಸರಕಾರ ನಿಷೇಧಿಸಿರುವ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಜನಸಾಮಾನ್ಯರು ಆತಂಕಗೊಂಡು ಪಟ್ಟಣದ ಬ್ಯಾಂಕ್‌ಗಳು ಹಾಗೂ ವ್ಯಾಪಾರಸ್ಥರ ಮಳಿಗೆಗಳಿಗೆ ಆಗಮಿಸಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.
ಪಟ್ಟಣದ ರಾಷ್ಟ್ರೀಕೃತ ಬ್ಯಾಂಕ್‌ಗಳು ಹಾಗೂ ಸಹಕಾರಿ ಬ್ಯಾಂಕ್‌ಗಳು, ಎಟಿಎಂಗಳು ರಜೆಯಾದ ಹಿನ್ನೆಲೆಯಲ್ಲಿ ಸಾರ್ವಜನಿಕರು ತಮ್ಮಲ್ಲಿರುವ ಹಳೆಯ 500 ರೂ. ಹಾಗೂ 1000 ನೋಟುಗಳನ್ನು ಯಾವ ರೀತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂಬ ಗೊಂದಲದಲ್ಲಿದ್ದರು. ಸದಾ ಗಿಜಿಗಿಡುತ್ತಿದ್ದ ರಾಷ್ಟ್ರೀಕೃತ ಬ್ಯಾಂಕ್‌ಗಳು ಮುಚ್ಚಿದ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಸಮಸ್ಯೆಗೆ ಒಳಗಾಗಬೇಕಾಯಿತು.
ಪಟ್ಟಣ ವ್ಯಾಪ್ತಿಯ ಪೆಟ್ರೋಲ್ ಬಂಕ್ ಹಾಗೂ ಮೆಡಿಕಲ್ ಶಾಪ್‌ಗಳಲ್ಲಿ ಗ್ರಾಹಕರುಗಳಿಂದ 500 ಹಾಗೂ 1000 ರೂ. ಮುಖಬೆಲೆ ನೋಟುಗಳನ್ನು ತೆಗೆದುಕೊಳ್ಳುತ್ತಿದ್ದರೂ ಚಿಲ್ಲರೆ ಸಮಸ್ಯೆಯಿಂದಾಗಿ ಗ್ರಾಹಕರು ಕಾಯುವಂತಹ ಪರಿಸ್ಥಿತಿ ಉಂಟಾಗಿತ್ತು. ಎರಡು ದಿನಗಳ ಕಾಲ ಬ್ಯಾಂಕ್‌ಗಳು ಹಾಗೂ ಎಟಿಎಂ ರಜೆ ಇರುವುದರಿಂದ ತಮ್ಮಲ್ಲಿರುವ ಹಣಕ್ಕೆ ಬೆಲೆ ಇಲ್ಲದಂತಾಗಿದೆ ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡುವಂತಾಗಿತ್ತು.

100, 50 ಮುಖಬೆಲೆಯ ನೋಟ್‌ಗಳಿಗೆ ಸಖತ್ ಡಿಮ್ಯಾಂಡ್
 ಏಕಾಏಕಿ 100, 50 ಮುಖಬೆಲೆಯ ನೋಟ್‌ಗಳಿಗೆ ಸಖತ್ ಡಿಮ್ಯಾಂಡ್ ಕಂಡುಬಂದಿದೆ. ಆದರೆ ಈ ನೋಟ್‌ಗಳ ಚಲಾವಣೆ ಕಡಿಮೆಯಾಗಿರುವುದು ನಾಗರಿಕರನ್ನು ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿದೆ. ಹಾಗೆಯೇ ಚಿಲ್ಲರೆ ಅಭಾವ ಕೂಡ ತಲೆದೋರಿದ್ದು, ವರ್ತಕರು ಹಾಗೂ ನಾಗರಿಕರ ಪರದಾಟ ಹೇಳತೀರದಾಗಿದೆ. ಒಟ್ಟಾರೆ ನೋಟ್ ರದ್ದಿನ ಸೈಡ್ ಎಫೆಕ್ಟ್ ಭಾರೀ ದೊಡ್ಡ ಮಟ್ಟದಲ್ಲಿ ನಾಗರಿಕರನ್ನು ಪರಿತಪಿಸುವಂತೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News