ಶಾಲಾ ಆಡಳಿತ ಮಂಡಳಿ, ಶಿಕ್ಷಕರ ನಡುವೆ ಒಳಜಗಳ
ಸಾಗರ, ನ.9: ಇಲ್ಲಿನ ಎಚ್. ಶಿವಲಿಂಗಪ್ಪ ಪ್ರೌಢಶಾಲೆಯಲ್ಲಿ ಆಡಳಿತ ಮಂಡಳಿ ಹಾಗೂ ಶಿಕ್ಷಕರ ನಡುವಿನ ಒಳಜಗಳದಿಂದ ಮಕ್ಕಳ ಶೈಕ್ಷಣಿಕ ಚಟುವಟಿಕೆ ಮೇಲೆ ಮಾರಕ ಪರಿಣಾಮ ಬೀರುತ್ತಿದ್ದು, ಶಾಲೆಯ ಆಡಳಿತ ವ್ಯವಸ್ಥೆಯನ್ನು ಸರಿಯಾದ ರೀತಿಯಲ್ಲಿ ನಡೆಸಲು ಆಡಳಿತಾಧಿಕಾರಿಯನ್ನು ನೇಮಿಸುವಂತೆ ಒತ್ತಾಯಿಸಿ ಬುಧವಾರ ಸಾರ್ವಜನಿಕರು ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು. 1962-63ರಲ್ಲಿ ಪ್ರಾರಂಭವಾದ ರಾಷ್ಟ್ರೀಯ ವಿದ್ಯಾವರ್ಧಕ ಸೊಸೈಟಿಯು ಎಚ್.ಶಿವಲಿಂಗಪ್ಪ ಪ್ರೌಢಶಾಲೆನ್ನು ಪ್ರಾರಂಭಿಸಿತ್ತು. ಜಿಲ್ಲೆಯ ಪ್ರತಿಷ್ಠಿತ ಪ್ರೌಢಶಾಲೆ ಎಂಬ ಹೆಗ್ಗಳಿಕೆಗೆ ಸಹ ಇದು ಪಾತ್ರವಾಗಿತ್ತು. ಒಂದು ಕಾಲದಲ್ಲಿ 600 ರಿಂದ 700 ವಿದ್ಯಾರ್ಥಿಗಳು ಅಭ್ಯಾಸ ನಡೆಸುತ್ತಿದ್ದ ಶಾಲೆಯಲ್ಲೀಗ ಆಡಳಿತ ಮಂಡಳಿ ಹಾಗೂ ಶಿಕ್ಷಕರ ಒಳಜಗಳದಿಂದ ಮಕ್ಕಳ ಸಂಖ್ಯೆ 187ಕ್ಕೆ ಇಳಿದಿದೆ. ಕಳೆದ 10ವರ್ಷಗೀಚೆ ಜಿಲ್ಲೆಯಲ್ಲಿ ಕಳಪೆ ಆಡಳಿತ ಮಂಡಳಿ ಹೊಂದಿರುವ ಶಾಲೆ ಎನ್ನುವ ಕೆಟ್ಟಹೆಸರು ಶಾಲೆಗೆ ಬಂದಿರುವುದು ವಿಷಾದದ ಸಂಗತಿ ಎಂದು ಮನವಿಯಲ್ಲಿ ಹೇಳಲಾಗಿದೆ. ಆಡಳಿತ ಮಂಡಳಿಯ ಸ್ವಪ್ರತಿಷ್ಠೆ ಹಾಗೂ ಸ್ವಾರ್ಥಪರ ನಿಲುವುಗಳೇ ಶಾಲೆಯಲ್ಲಿ ಶೈಕ್ಷಣಿಕ ಚಟುವಟಿಕೆ ಕುಂಠಿತವಾಗಲು ಕಾರಣವಾಗಿದ್ದು, ಇದರಿಂದ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ಮಕ್ಕಳಿಗೆ ಅನ್ಯಾಯವಾಗುತ್ತಿದೆ. ಬಿಸಿಯೂಟದ ಅನುದಾನ ದುರ್ಬಳಕೆ, ಶಾಲಾವರಣದ ಅಕೇಶಿಯಾ ಮರ ಮಾರಾಟ ಮಾಡಿ ಲೆಕ್ಕ ಕೊಡದಿರುವುದು, ಶಾಲಾ ಶಿಕ್ಷಕರ ಜೇಷ್ಠತಾ ಪಟ್ಟಿಯನ್ನು ಆಡಳಿತ ಮಂಡಳಿ ಮನಬಂದಂತೆ ಬದಲಾಯಿಸುತ್ತಿರುವುದು, ಮಂಜಪ್ಪ ಎಂಬ ಶಿಕ್ಷಕರಿಗೆ ಮುಂಭಡ್ತಿ ನೀಡಿ, ಅವರ ಮೇಲೆ ಅವ್ಯವಹಾರದ ಆರೋಪ ಹೊರಿಸಿ, ಅಮಾನತು ಮಾಡಿರುವುದು ಹೀಗೆ ಸಂಸ್ಥೆಯಲ್ಲಿ ಅನೇಕ ತಾರತಮ್ಯ ವ್ಯವಹಾರಗಳು ನಡೆದಿವೆ ಎಂದು ಮನವಿಯಲ್ಲಿ ದೂರಲಾಗಿದೆ. ಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಕೋರಂ ಕೊರತೆ ಇದ್ದರೂ ಪರಿಗಣಿಸದೇ, ತಮಗೆ ಇಷ್ಟ ಬಂದ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಮುಖ್ಯ ಶಿಕ್ಷಕರಾಗಿ ನಿವೃತ್ತಿ ಹೊಂದಿದವರನ್ನು ಶಾಲಾ ಆಡಳಿತಾಧಿಕಾರಿಯಾಗಿ ನೇಮಕ ಮಾಡಿಕೊಳ್ಳಲಾಗಿದ್ದು, ಸಂಸ್ಥೆಯಿಂದ ವೇತನ ನೀಡುವ ಮೂಲಕ ಹೊರೆ ಹೆಚ್ಚಿಸಲಾಗಿದೆ. ಈ ಎಲ್ಲ ಅವ್ಯವಸ್ಥೆಯನ್ನು ಸರಕಾರ ಪರಿಗಣಿಸಿ, ತಪ್ಪಿತಸ್ಥ ಆಡಳಿತ ಮಂಡಳಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಬೇಕು. ಹಾಲಿ ಆಡಳಿತ ಮಂಡಳಿಯನ್ನು ರದ್ದುಗೊಳಿಸಿ, ಅನುದಾನಿತ ಶಾಲೆಯಾದ ಎಚ್.ಶಿವಲಿಂಗಪ್ಪ ಪ್ರೌಢಶಾಲೆಗೆ ಆಡಳಿತಾಧಿಕಾರಿಯನ್ನು ನೇಮಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ಉಮೇಶ್ ಹಿರೇನೆಲ್ಲೂರು, ಎಸ್.ಬಸವರಾಜ್, ಎಂ.ನಾರಾಯಣಪ್ಪ ಮಂಜಿನಕಾನು, ಎಂ.ರಾಮಪ್ಪ, ಸಿದ್ದನಾಯಕ್, ಕನ್ನಪ್ಪ ಇನ್ನಿತರರು ಹಾಜರಿದ್ದರು.