×
Ad

ಟಿಪ್ಪು ಜಯಂತಿ ವಿರೋಧಿಸುವವರೇ ಮತಾಂಧರು: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2016-11-10 19:13 IST

ಬೆಂಗಳೂರು, ನ. 10: ಟಿಪ್ಪು ಸುಲ್ತಾನ್ ಅಪ್ರತಿಮ ಸ್ವಾತಂತ್ರ ಸೇನಾನಿ. ಮಾತ್ರವಲ್ಲ, ಆತನೊಬ್ಬ ಜಾತ್ಯತೀತ ನಾಯಕ. ಹೀಗಾಗಿ ಟಿಪ್ಪು ಜಯಂತಿ ಆಚರಣೆ ಮಾಡುತ್ತಿದ್ದು, ಟಿಪ್ಪು ಜಯಂತಿ ಆಚರಣೆ ವಿರೋಧಿಸುವವರೇ ಮತಾಂಧರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.ಗುರುವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏರ್ಪಡಿಸಿದ್ದ ಹಝ್ರತ್ ಟಿಪ್ಪು ಸುಲ್ತಾನ್ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯನ್ನು ಯಾವುದೇ ರಾಜಕೀಯ ಲಾಭಕ್ಕಾಗಿ ಆಚರಿಸುತ್ತಿಲ್ಲ ಎಂದು ಸ್ಪಷ್ಟಣೆ ನೀಡಿದರು.

ಬ್ರಿಟಿಷರ ವಿರುದ್ಧ ಯುದ್ದ ನಡೆಸಿದ ಸ್ವಾತಂತ್ರ ಸೇನಾನಿ. ಆತನಿಗೆ ಗೌರವಿಸಲು ಜಯಂತಿ ಆಚರಣೆ ಮಾಡಲಾಗುತ್ತಿದೆ ಎಂದ ಅವರು, ಬಿಜೆಪಿ, ಆರೆಸೆಸ್ಸ್ ಸೇರಿದಂತೆ ಸಂಘಪರಿವಾರದವರು ವಿರೋಧಿಸುತ್ತಾರೆಂಬ ಕಾರಣಕ್ಕೆ ಟಿಪ್ಪು ಜಯಂತಿ ಆಚರಣೆ ನಿಲ್ಲಿಸುವುದಿಲ್ಲ ಎಂದರು.ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಸಂಗೊಳ್ಳಿರಾಯಣ್ಣ ಸೇರಿದಂತೆ ಅನೇಕ ಸ್ವಾತಂತ್ರ ಹೋರಾಟಗಾರರ ಜಯಂತಿಯನ್ನು ಆಚರಣೆ ಮಾಡುವಂತೆಯೆ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡುತ್ತಿದ್ದು, ಮುಸ್ಲಿಮರ ಓಲೈಕೆಗಾಗಿ ಅಲ್ಲ ಎಂದು ಅವರು ತಿಳಿಸಿದರು.ಟಿಪ್ಪು ಸುಲ್ತಾನ್ ಮತಾಂಧ, ಕ್ರೂರಿ ಎಂಬುದು ಅಪ್ಪಟ ಸುಳ್ಳು. ಆತನ ಪ್ರಧಾನ ಮಂತ್ರಿ ದಿವಾನ್‌ಪೂರ್ಣಯ್ಯ ಸೇರಿದಂತೆ ಹಲವು ಮಂದಿ ಟಿಪ್ಪು ಆಸ್ಥಾನದಲ್ಲಿದ್ದರು ಎಂದ ಅವರು, ಟಿಪ್ಪು ಬೆಂಗಳೂರಿನ ವೆಂಕಟರಮಣ ದೇವಸ್ಥಾನ, ಶೃಂಗೇರಿಯ ಶಾರದೆ ಪೀಠ, ಮೇಲುಕೋಟೆಯ ಚಲುವನಾರಾಯಣಸ್ವಾಮಿ ದೇವಸ್ಥಾನ ಸೇರಿದಂತೆ ಅನೇಕ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿ ಕಾಣಿಕೆ ನೀಡಿದಾರೆ ಎಂದರು.

ಬ್ರಿಟಿಷರ ಏಜೆಂಟರಾಗಿ ಕೆಲಸ ಮಾಡುತ್ತಿದ್ದ ಕೆಲವರನ್ನು ದಂಡಿಸಿದ್ದು, ಅದನ್ನು ತಪ್ಪು ಎಂದು ಹೇಳಲು ಆಗದು. ರಾಜನೀತಿಯನ್ವಯ ಶಿಕ್ಷೆ ನೀಡಿದ್ದಾನೆ ಎಂದ ಅವರು, ಟಿಪ್ಪು ಸುಲ್ತಾನ್ ನರಿಯಂತೆ ನೂರು ದಿನ ಬದುಕುವುದಕ್ಕಿಂತ ಹುಲಿಯಂತೆ ಒಂದೇ ಬದುಕುವುದು ಲೇಸೆಂದು ನಂಬಿದ್ದ ರಾಜ ಎಂದು ಬಣ್ಣಿಸಿದರು.

►ಬೆಂಕಿ ಹಚ್ಚುವವರಿಗೆ ಬೆಂಬಲ ಬೇಡ:

ಬಿ.ಎಸ್.ಯಡಿಯೂರಪ್ಪ ಕೆಜೆಪಿ ಸ್ಥಾಪನೆ ವೇಳೆ ಮತ್ತು ಜಗದೀಶ್ ಶೆಟ್ಟರ್ ಸಿಎಂ ಆಗಿದ್ದ ವೇಳೆ ಟಿಪ್ಪು ಓರ್ವ ಜಾತ್ಯತೀತ ನಾಯಕ ಎಂದು ಬಣ್ಣಿಸಿದ್ದರು. ಆದರೆ, ಇದೀಗ ರಾಜಕೀಯ ಕಾರಣಕ್ಕಾಗಿ ಮತಾಂಧ, ಕ್ರೂರಿಯೆಂದು ಕರೆಯುತ್ತಾರೆ. ನಿಮಗೆ ಎಷ್ಟು ನಾಲಗೆಗಳಿವೆ ಎಂದು ವಾಗ್ದಾಳಿ ನಡೆಸಿದರು.ರಾಜ್ಯದ ಜನತೆಗೆ ಇತಿಹಾಸ ಸ್ಪಷ್ಟವಾಗಿ ಗೊತ್ತಿದೆ. ರಾಜ್ಯದಲ್ಲಿ ಕೋಮು ಸಂಘರ್ಷಕ್ಕೆ ಅವಕಾಶ ಕಲ್ಪಿಸುವ ಮತ್ತು ಬೆಂಕಿ ಹಚ್ಚುವ ಕಾರ್ಯಕ್ಕೆ ಯಾರೊಬ್ಬರೂ ಬೆಂಬಲ ನೀಡುವುದಿಲ್ಲ. ಬಿಜೆಪಿ ದೊಂಬರಾಟಕ್ಕೆ ಜನತೆ ಮರಳಾಗುವುದಿಲ್ಲ ಎಂದ ಅವರು, ಕಾನೂನು ಉಲ್ಲಂಘಿಸುವವರನ್ನು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕಲಾಗುವುದು ಎಂದು ಎಚ್ಚರಿಸಿದರು.ಸಮಾರಂಭದ ಸಾನಿಧ್ಯವನ್ನು ಹಝ್ರತ್ ವೌಲಾನಾ ಮುಫ್ತಿ ಮೊಹಮ್ಮದ್ ಆಶ್ರಫ್ ಆಲಿ ಬಕ್ವಾವಿ, ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮಿ ವಹಿಸಿದ್ದರು. ಸ್ಪೀಕರ್ ಕೆ.ಬಿ.ಕೋಳಿವಾಡ, ಸಚಿವರಾದ ರೋಷನ್ ಬೇಗ್, ಉಮಾಶ್ರೀ, ಕೆ.ಜೆ. ಜಾರ್ಜ್, ಯು.ಟಿ.ಖಾದರ್, ಶಾಸಕರಾದ ಶಕುಂತಲಾ ಶೆಟ್ಟಿ, ಜೆ.ಆರ್.ಲೋಬೋ, ಕೋನರೆಡ್ಡಿ, ಅಶೋಕ್ ಖೇಣಿ, ರಾಜ್ಯಸಭಾ ಸದಸ್ಯ ಕೆ.ರೆಹಮಾನ್ ಖಾನ್, ಬ್ಯಾರಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ಮೊಹಮದ್ ಹನೀಫ್, ಉರ್ದು ಅಕಾಡಮಿ ಅಧ್ಯಕ್ಷ ಅಜೀಜುಲ್ಲಾ ಬೇಗ್, ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ನಜೀರ್ ಅಹ್ಮದ್, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗಪೂರ್ ಹಾಗೂ ಪತ್ರಕರ್ತ ಗುರುರಾಜ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News