ಉಪ್ಪಿನ ಬೆಲೆ ಹೆಚ್ಚಳ ವದಂತಿ : ವರ್ತಕರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ

Update: 2016-11-12 13:36 GMT

ಕಲ್ಬುರ್ಗಿ, ನ.12: ಉಪ್ಪು, ಸಕ್ಕರೆ ಸೇರಿದಂತೆ ಅಗತ್ಯ ವಸ್ತುಗಳನ್ನು ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುವಂತಹ ವರ್ತಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ಬಸವಲಿಂಗಪ್ಪ ಎಚ್ಚರಿಕೆ ನೀಡಿದ್ದಾರೆ.

ದೇಶಾದ್ಯಂತ ಉಪ್ಪಿನ ಬೆಲೆ ಹೆಚ್ಚಳದ ವದಂತಿ ಹಬ್ಬಿದ ಪರಿಣಾಮ, ಕಲ್ಬುರ್ಗಿಯಲ್ಲಿ ಕೆಲ ವರ್ತಕರು ಉಪ್ಪು ಹಾಗೂ ಸಕ್ಕರೆಯನ್ನು ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಶುಕ್ರವಾರ ರಾತ್ರಿ ದರ್ಗಾ ಏರಿಯಾ, ರಹಮತ್ ನಗರ, ಹೊರ ವರ್ತುಲ ರಸ್ತೆ, ಎಂ.ಜಿ.ರಸ್ತೆ ಹಾಗೂ ಖಮರ್ ಕಾಲನಿ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿನ ಕೆಲವು ಅಂಗಡಿಗಳಲ್ಲಿ ಪ್ರತಿ ಕೆಜಿ ಉಪ್ಪಿಗೆ 50 ರೂ.ಹಾಗೂ ಪ್ರತಿ ಕೆಜಿ ಸಕ್ಕರೆ 400 ರೂ.ಗಳಂತೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.

ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಬೆಲೆ ದಿಢೀರ್ ಏರಿಕೆಯಾಗಿರುವ ಕುರಿತು ವದಂತಿಗಳು ಹಬ್ಬಿದ ಪರಿಣಾಮವಾಗಿ, ತಹಶೀಲ್ದಾರ್ ಬಸವಲಿಂಗಪ್ಪ ನೇತೃತ್ವದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಪರಿಶೀಲನೆ ಕಾರ್ಯ ನಡೆಸಿದರು.

ಸಾರ್ವಜನಿಕರು ಇಂತಹ ಯಾವುದೆ ವದಂತಿಗಳಿಗೆ ಕಿವಿಗೊಡಬಾರದು. ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಅಗತ್ಯ ವಸ್ತುಗಳನ್ನು ಮಾರಾಟ ಮಾಡುವಂತಹ ವರ್ತಕರ ವಿರುದ್ಧ ಕಾನೂನು ರೀತಿಯಲ್ಲಿ ಕಠಿಣವಾದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ಅಗತ್ಯವಸ್ತುಗಳ ಅಭಾವ ಉಂಟಾಗಿದೆ ಎಂದು ಕೆಲವು ಕಿಡಿಗೇಡಿಗಳು ವದಂತಿ ಹಬ್ಬಿಸಿದ್ದಾರೆ. ಇದರಿಂದಾಗಿ, ಸಾರ್ವಜನಿಕರು ಆತಂಕಕ್ಕೆ ಈಡಾಗಿದ್ದಾರೆ. ಕೆಲವು ವರ್ತಕರು ಈ ವದಂತಿಯನ್ನು ದುರುಪಯೋಗ ಪಡಿಸಿಕೊಂಡಿರುವ ಕುರಿತು ಮಾತುಗಳು ಕೇಳಿ ಬರುತ್ತಿವೆ ಎಂದು ಕಲ್ಬುರ್ಗಿ ಮಹಾನಗರ ಪಾಲಿಕೆ ವೆುೀಯರ್ ಸೈಯದ್ ಅಹ್ಮದ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಅಗತ್ಯ ವಸ್ತುಗಳಿಗೆ ಅಭಾವ ಉಂಟಾಗಿಲ್ಲ. ಆದುದರಿಂದ, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಇಂತಹ ವದಂತಿಗಳನ್ನು ಹರಡಿಸಿ, ಜನರನ್ನು ದಿಕ್ಕು ತಪ್ಪಿಸುತ್ತಿರುವವರನ್ನು ಪತ್ತೆ ಹಚ್ಚಿನ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News