ಗರ್ಭಿಣಿಯರಿಗೆ ಬಿಸಿಯೂಟ: ಸಚಿವೆ ಉಮಾಶ್ರೀ
ಬೆಂಗಳೂರು, ನ. 13: ಭ್ರೂಣಾವಸ್ಥೆಯಲ್ಲಿಯೇ ಮಗುವಿನ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಗರ್ಭಿಣಿ ಮಹಿಳೆಯರಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಯೋಜನೆಯು ರಾಜ್ಯ ಸರಕಾರ ಮುಂದಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.
ರವಿವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಕ್ಕಳ ದಿನಾಚರಣೆ ಪ್ರಯುಕ್ತ ನಗರದ ಕಬ್ಬನ್ ಉದ್ಯಾನವನದಲ್ಲಿ ಆಯೋಜಿಸಿದ್ದ ‘ಮಕ್ಕಳ ಹಬ್ಬ’ ಕಾರ್ಯಕ್ರಮ ಯಾಗೂ ‘ಅಂತಃಕರಣ’ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಗರ್ಭಿಣಿ ಮಹಿಳೆ ಆರೋಗ್ಯವಾಗಿದ್ದರೆ ಮಾತ್ರ ಆರೋಗ್ಯಪೂರ್ಣ ಮಗು ಜನಿಸಲು ಸಾಧ್ಯ. ಈ ನಿಟ್ಟಿನಲ್ಲಿ ಮುಂದಿನ ಡಿ.15ರಿಂದ ಪ್ರಾಯೋಗಿಕವಾಗಿ ಎಚ್.ಡಿ.ಕೋಟೆ, ಮಧುಗಿರಿ, ಜಮಖಂಡಿ ಹಾಗೂ ಮಾನ್ವಿ ತಾಲೂಕುಗಳಲ್ಲಿ ಗರ್ಭಿಣಿ ಮಹಿಳೆಯರಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ಚಾಲನೆ ನೀಡಲಾಗುವುದು. ತದ ನಂತರ ಹಂತ, ಹಂತವಾಗಿ ರಾಜ್ಯದೆಲ್ಲೆಡೆ ವಿಸ್ತರಿಸಲಾಗುವುದು ಎಂದು ಅವರು ಹೇಳಿದರು.
ಗರ್ಭಿಣಿ ಮಹಿಳೆಯ ಆರೋಗ್ಯವನ್ನು ವೃದ್ಧಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ‘ಪುಷ್ಟಿ ವರ್ಧನೆ ಮಾತ್ರೆ’ ನೀಡುವ ಯೋಜನೆಗೆ ಕಳೆದ ಬಜೆಟ್‌ನಲ್ಲಿ ಚಾಲನೆ ನೀಡಲಾಗಿದೆ. ಒಟ್ಟಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಮಹಿಳಾ ಮತ್ತು ಮಕ್ಕಳ ಆರೋಗ್ಯ ಸುಧಾರಣೆ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಉಮಾಶ್ರೀ ಮೆಚ್ಚುಗೆ ವ್ಯಕ್ತಪಡಿಸಿದರು.
ಇಂದಿನ ಮಕ್ಕಳು ದೇಸಿಯ ನೆಲೆಗಟ್ಟಿನಲ್ಲಿ ತಮ್ಮ ಭಾವನೆ ಹಾಗೂ ಚಿಂತನೆಗಳನ್ನು ರೂಪಿಸಿಕೊಳ್ಳಬೇಕಾಗಿದೆ. ಆ ನಿಟ್ಟಿನಲ್ಲಿ ನಮ್ಮ ಗ್ರಾಮೀಣ ಬದುಕಿನ ರೀತಿ ರೀವಾಜುಗಲು, ಜಾನಪದ ಕಲೆ ಹಾಗೂ ಕ್ರೀಡೆಗಳ ಮಹತ್ವವನ್ನು ತಿಳಿಯಬೇಕಾಗಿದೆ. ಅದಕ್ಕಾಗಿ ‘ಮಕ್ಕಳ ಹಬ್ಬ’ದ ಈ ದಿನ ಕಬನ್ ಉದ್ಯಾನವನದಲ್ಲಿ ಗ್ರಾಮೀಣ ಸೊಗಡಿನ ಕಲಾಪ್ರದರ್ಶನಕ್ಕೆ ಹೆಚ್ಚಿನ ಆದ್ಯತೆ ಕೊಡಲಾಗಿದೆ ಎಂದು ಅವರು ಹೇಳಿದರು.
ಮಕ್ಕಳನ್ನು ಆಧುನಿಕ ಕಲೆ ಹಾಗೂ ಕ್ರೀಡೆಯನ್ನು ಆಡುವ ಜೊತೆ, ಜೊತೆಗೆ ಗ್ರಾಮೀಣ ಕಲೆ,ಕ್ರೀಡೆಗಳನ್ನು ಅರಿತು ಆಡಬೇಕಾಗಿದೆ. ನಶಿಸುವ ಹಂತದಲ್ಲಿರುವ ಅನೇಕ ಗ್ರಾಮೀಣ ಕಲೆ ಹಾಗೂ ಕ್ರೀಡೆಗಳನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.
ಶಾಸಕ ಎನ್.ಎ.ಹ್ಯಾರೀಸ್ ಮಾತನಾಡಿ, ರಾಜ್ಯದಲ್ಲಿ ಏನೇ ಸಮಸ್ಯೆ ಎದುರಾದರು ಮಕ್ಕಳಿಗೆ ಸಿಗುವಂತಹ ಸೌಲತ್ತುಗಳನ್ನು ಯಾವ ಕಾರಣಕ್ಕೂ ಕಡಿತಗೊಳಿಸಬಾರದು. ಬಾಲ್ಯಾವಸ್ಥೆ ಉತ್ತಮವಾಗಿದ್ದರೆ ಮಾತ್ರ ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಿ ರೂಪಗೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಿಸಿದರು.
ಬೆಂಗಳೂರಿನಲ್ಲಿ ಆಚರಿಸುತ್ತಿರುವ ಮಕ್ಕಳ ಹಬ್ಬವನ್ನು ಮುಂದಿನ ದಿನಗಳಲ್ಲಿ ಪ್ರತಿ ಜಿಲ್ಲೆಯಲ್ಲಿಯೂ ಆಚರಿಸಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಚಿಂತಿಸಬೇಕು. ಹಾಗೂ ಬೆಂಗಳೂರಿನಲ್ಲಿರುವ ಬಾಲ ಭವನದಲ್ಲಿ ಪ್ರತಿ ದಿನವೂ ಗ್ರಾಮೀಣ ಸೊಗಡಿನ ಕಲೆ ಹಾಗೂ ಕ್ರೀಡೆಗಳ ಪ್ರದರ್ಶವನ್ನು ಏರ್ಪಡಿಸಬೇಕು. ಪ್ರವಾಸಕ್ಕೆ ಬರುವ ಶಾಲಾ ಮಕ್ಕಳು ಬಾಲ ಭವನಕ್ಕೆ ಭೇಟಿ ಕೊಡಬೇಕು ಎಂದು ಅವರು ಆಶಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಡಾ.ಕೃಪಾ ಅಮರ್ ಆಳ್ವ, ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷೆ ವೇದವ್ಯಾಸ ಹ.ಕೌಲಗಿ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಭಾರತಿ ಶಂಕರ್, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಮತ್ತಿತರರಿದ್ದರು.