ಕಿಡಿಗೇಡಿಗಳಿಂದ ಕುರ್‌ಆನ್‌ಗೆ ಬೆಂಕಿ ಹಚ್ಚಿದ ಆರೋಪ
ಮಡಿಕೇರಿ, ನ.13: ಸೋಮವಾರಪೇಟೆ ತಾಲೂಕಿನ ಐಗೂರು ಮಸೀದಿಗೆ ನುಗ್ಗಿದ ಕಿಡಿಗೇಡಿಗಳು ಕುರ್‌ಆನ್‌ಗೆ ಬೆಂಕಿ ಹಚ್ಚಿ ಸುಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಶನಿವಾರ ಸಂಜೆ ಐಗೂರಿನ ಅಬ್ದುಲ್ ರಹಿಮಾನ್ ಎಂಬವರು ಪ್ರಾರ್ಥನೆಗೆ ತೆರಳಿದ್ದ ಸಂದರ್ಭ ಈ ಕೃತ್ಯ ಬೆಳಕಿಗೆ ಬಂದಿದೆ. ಅವರು ಕೂಡಲೇ ಈ ವಿಷಯವನ್ನು ಹೊಸತೋಟ ಜಮಾಅತ್ ಅಧ್ಯಕ್ಷರ ಗಮನಕ್ಕೆ ತಂದಿದ್ದರು.
ಹೊಸತೋಟ ಜಮಾಅತ್ ಅಧ್ಯಕ್ಷ ಸೈದುಹಾಜಿ ಈ ಸಂಬಂಧ ಸೋಮವಾರಪೇಟೆ ಪೊಲೀಸರಿಗೆ ದೂರು ನೀಡಿರುವ ಹಿನ್ನೆಲೆಯಲ್ಲಿ, ಮೊಕದ್ದಮೆ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.
ಕಿಡಿಗೇಡಿಗಳು ರಾತ್ರಿ ಸಮಯದಲ್ಲಿ ಕಟ್ಟಡದ ಹಿಂಭಾಗದಿಂದ ಕಟ್ಟಡವೇರಿ ಹೆಂಚು ತೆಗೆದು, ಒಳಕ್ಕೆ ಇಳಿದು ಪ್ರಾರ್ಥನಾ ಕೊಠಡಿಯಲ್ಲಿದ್ದ ಕುರಾನ್ ಗ್ರಂಥಕ್ಕೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.
ಪ್ರಕರಣ ಸಂಬಂಧ ಸೋಮವಾರಪೇಟೆ ಸಿಐ ಪರಶಿವಮೂರ್ತಿ, ಮಡಿಕೇರಿ ಸಿಐ ಕರೀಂ ರಾವುತರ್, ಠಾಣಾಧಿಕಾರಿ ಶಿವಣ್ಣ ಮತ್ತು ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿ, ಐಗೂರಿನಲ್ಲಿ ಮೊಕ್ಕಂ ಹೂಡಿದ್ದಾರೆ. ಅಪರಾಧ ಪತ್ತೆದಳದ ತಂಡ ಹಾಗೂ ಬೆರಳಚ್ಚು ತಜ್ಞರು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಐಗೂರು ಮಸೀದಿಯಲ್ಲಿ ಕುರ್‌ಆನ್ ಸುಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಸುಳಿವು ಸಿಕ್ಕಿದೆ. ಆ ಹಿನ್ನೆಲೆಯಲ್ಲಿ ತನಿಖೆ ಮುಂದುವರಿದಿದೆ. ಆರೋಪಿಗಳನ್ನು ಶೀಘ್ರ ಬಂಧಿಸುತ್ತೇವೆ. ಹೊಸತೋಟ ಜಮಾಅತ್ ಸದಸ್ಯರಿಗೆ ತನಿಖೆ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಅವರು ಸಹಕಾರದ ಭರವಸೆ ನೀಡಿದ್ದಾರೆ. ಐಗೂರು ಶಾಂತಿಯುತವಾಗಿದೆ. ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ಬಂದೋಬಸ್ತ್ ಕಲ್ಪಿಸಿದ್ದಾರೆ.
ಸಂಪತ್ ಕುಮಾರ್, ಡಿವೈಎಸ್ಪಿ