ನಾಲ್ವರು ನಕ್ಸಲರು ಶರಣಾಗತಿಗೆ ಕ್ಷಣಗಣನೆ
Update: 2016-11-14 12:09 IST
ಚಿಕ್ಕಮಗಳೂರು, ನ.14: ಕಳೆದ ಹದಿನೈದು ವರ್ಷಗಳಿಂದ ಮಲೆನಾಡಿನ ದಟ್ಟ ಕಾಡಿನಲ್ಲಿ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ್ದರೆನ್ನಲಾದ ನಾಲ್ವರು ನಕ್ಸಲರು ಚಿಕ್ಕಮಗಳೂರು ಜಿಲ್ಲಾಡಳಿತದ ಎದುರು ಇಂದು ಮದ್ಯಾಹ್ನ ಶರಣಾಗುವ ಮಾಹಿತಿ ಲಭ್ಯವಾಗಿದೆ.
ಪ್ರಮುಖವಾಗಿ ನೀಲಗುಳಿ ಪಧ್ಮನಾಭ, ರಿಝ್ವನಾ ಬೇಗಂ ಅಲಿಯಾಸ್ ಕಲ್ಪನಾ, ಪಾರ್ವತಿ ಪರಶುರಾಮ್ ಎಂಬವರು ಶರಣಾಗತಿಯಾಗಲಿದ್ದಾರೆ ಎಂಬ ಮಾಹಿತಿ ಕೇಳಿ ಬರುತ್ತಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈಯವರನ್ನು ಮಾಧ್ಯಮಗಳು ಸಂಪರ್ಕಿಸಿದಾಗ, ಶರಣಾಗತಿ ನಡೆಯುವುದು ಖಚಿತವಾಗಿದೆ. ಆದರೆ ಈ ಯಾರು, ಯಾರು ಶರಣಾಗುವರು ಎನ್ನುವ ಬಗ್ಗೆ ಸ್ಪಷ್ಟಪಡಿಸಲಿಲ್ಲ.
ನಕ್ಸಲರ ಶರಣಾಗತಿಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಮತ್ತಿತರರು ನೇತೃತ್ವ ವಹಿಸಲಿದ್ದಾರೆ ಎನ್ನಲಾಗಿದೆ. ಮದ್ಯಾಹ್ನ 1:30 ಗಂಟೆ ನಂತರ ನಕ್ಸಲರು ಜಿಲ್ಲಾಡಳಿತದ ಎದುರು ಹಾಜರಾಗುವ ಮೂಲಕ ಶರಣಾಗುವ ಸಾಧ್ಯತೆಗಳಿವೆ. ಈ ಮೂಲಕ ನಕ್ಸಲರ ಶರಣಾಗತಿಗೆ ಕ್ಷಣಗಣನೆ ಆರಂಭವಾಗಿದೆ.