ಬಿ.ಇ. ಪದವೀಧರೆ ಆತ್ಮಹತ್ಯೆಗೆ ಶರಣು
ಮೈಸೂರು, ನ.14: ಗೃಹಿಣಿಯೊಬ್ಬಳು ಪತಿ ಹಾಗೂ ಆತನ ಮನೆಯವರ ಕಿರುಕುಳದಿಂದ ನೊಂದು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಬೋಗಾದಿ 2ನೆ ಹಂತದಲ್ಲಿ ಇಂದು ಬೆಳಗ್ಗೆ ನಡೆದಿದೆ.
ಮೃತರನ್ನು ಅಕ್ಷತಾ(25) ಎಂದು ಗುರುತಿಸಲಾಗಿದೆ. ಈಕೆ ತನ್ನ ತವರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಪತಿ ಮಂಜುನಾಥ್, ಮಾವ ಪುಟ್ಟೇಗೌಡ ಹಾಗೂ ಅತ್ತೆ ಸುಧಾರಾಣಿ ವಿರುದ್ಧ ಹಣಕ್ಕಾಗಿ ಕಿರುಕುಳ ನೀಡಿರುವ ಬಗ್ಗೆ ದೂರು ದಾಖಲಾಗಿದೆ.
ಬಿ.ಇ. ಪದವೀಧರೆಯಾಗಿದ್ದ ಅಕ್ಷತಾರ ವಿವಾಹವು 4 ವರ್ಷಗಳ ಹಿಂದೆ ಬೆಂಗಳೂರಿನ ಯಲಚೇನಹಳ್ಳಿಯ ಮಂಜುನಾಥ್ ಜೊತೆಗೆ ನಡೆದಿತ್ತು. ಈ ಸಂದರ್ಭ ಮಂಜುನಾಥ್‌ಗೆ ವರದಕ್ಷಿಣೆಯಾಗಿ 1 ಕೆ.ಜಿ. ಚಿನ್ನ, 2 ಕೆ.ಜಿ. ಬೆಳ್ಳಿ, ಮೈಸೂರಿನ ವಿಜಯನಗರದಲ್ಲಿ ಒಂದು ಸೈಟು ನೀಡಲಾಗಿತ್ತು ಎಂದು ಹೇಳಲಾಗಿದೆ. ಆದರೂ ಆತ ಹಣ ತರುವಂತೆ ಅಕ್ಷತಾರನ್ನು ಪೀಡಿಸುತ್ತಿದ್ದ ಎಂದು ಡೆತ್ ನೋಟ್‌ನಲ್ಲಿ ತಿಳಿಸಲಾಗಿದೆ. ಇದೀಗ ಮತ್ತೆ 10 ಲಕ್ಷ ರೂ. ತರುವಂತೆ ಅಕ್ಷತಾರನ್ನು ಪೀಡಿಸುತ್ತಿದ್ದ ಮಂಜುನಾಥ್ ಹಾಗೂ ಮನೆಯವರು ಆಕೆಯನ್ನು ತವರಿಗೆ ಕಳುಹಿಸಿದ್ದರು. ಇದೇ ವಿಚಾರವಾಗಿ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಅಕ್ಷತಾ ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.