ಚಿಕ್ಕಮಗಳೂರು: ಮುಖ್ಯವಾಹಿನಿಗೆ ನಾಲ್ವರು ನಕ್ಸಲರು
ಚಿಕ್ಕಮಗಳೂರು, ನ.14: ಕಳೆದ ಹದಿನೈದು ವರ್ಷಗಳಿಂದ ಕಾಡಿನಲ್ಲಿ ನಕ್ಸಲ್ ಚಟುವಟಿಕೆಯಲ್ಲಿ ಸಕ್ರೀಯರಾಗಿದ್ದರು ಎನ್ನಲಾದ ಎ ಮತ್ತು ಬಿ ಕೆಟಗರಿಯ ನಾಲ್ವರು ನಕ್ಸಲರು ಸೋಮವಾರ ಜಿಲ್ಲಾಡಳಿತದ ಎದುರು ಶರಣಾಗುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬಂದಿದ್ದಾರೆ.
ಶಾಂತಿಗಾಗಿ ನಾಗರಿಕ ಹಿತರಕ್ಷಣಾ ವೇದಿಕೆಯ ಮೂಲಕ ನಕ್ಸಲರೆಂದು ಶಂಕಿಸಲಾಗಿರುವ ಈ ನಾಲ್ವರನ್ನು ಪತ್ರಕರ್ತೆ ಗೌರಿ ಲಂಕೇಶ್ ಹಾಗೂ ಮಾಜಿ ಶಾಸಕರೂ ಆದ ಹೈಕೋರ್ಟ್ ವಕೀಲ ಎ.ಕೆ.ಸುಬ್ಬಯ್ಯ ಚಿಕ್ಕಮಗಳೂರು ಜಿಲ್ಲಾ ನಕ್ಸಲ್ ಶರಣಾಗತಿ ವೇದಿಕೆ ಎದುರು ಹಾಜರುಪಡಿಸಿದರು. ನಕ್ಸಲ್ ಪ್ಯಾಕೇಜ್‌ನಡಿ ಶರಣಾಗಿರುವ ನಕ್ಸಲರು ಯಾಮದೇ ಬೇಡಿಕೆಗಳನ್ನು ಸರಕಾರದ ಮುಂದಿಡದೆ ಭವಿಷ್ಯದಲ್ಲಿ ಸಾಮಾಜಿಕ ಹೋರಾಟಗಳಲ್ಲಿ ಭಾಗವಹಿಸುವ ಆಶಯವನ್ನು ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರಿನ ನೀಲಗುಳಿ ಪದ್ಮನಾಭ, ರಾಜಚೂರು ಜಿಲ್ಲೆಯ ರಿಝ್ವನ ಬೇಗಂ, ರಾಜು ಅಲಿಯಾಸ್ ಪರಶುರಾಮ್ ಹಾಗೂ ಭಾರತಿ ಅಲಿಯಾಸ್ ದೀಪಾ ಸಮಾಜದ ಮುಖ್ಯವಾಹಿನಿಗೆ ಬಂದರು. ಇತ್ತೀಚೆಗೆ ಮಲೆನಾಡಿನಲ್ಲಿ ನಕ್ಸಲರ ಸಂಖ್ಯೆ ಕಡಿಮೆಯಾಗಿತ್ತು. ಈ ಮಾತಿಗೆ ಇಂಬು ನೀಡುವಂತೆ ಚಿಕ್ಕಮಗಳೂರು ಜಿಲ್ಲಾಡಳಿತ ಎದುರು ಇಂದು ಈ ನಾಲ್ವರು ಶರಣಾದರು. ಈ ಶರಣಾಗತಿಯ ಹಿಂದೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ, ಪತ್ರಕರ್ತೆ ಗೌರಿ ಲಂಕೇಶ್, ಹಿರಿಯ ವಕೀಲ ಎ.ಕೆ.ಸುಬ್ಬಯ್ಯ ಸೇರಿದಂತೆ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯ ಬಳಿಕ ನಕ್ಸಲ್ ಶರಣಾಗತಿ ಹಾಗೂ ಪುನರ್‌ವಸತಿ ವೇದಿಕೆ ಮೂಲಕ ಶರಣಾಗತಿ ನಡೆದಿದೆ.
ರಾಜ್ಯದ ವಿವಿದ ಪೊಲೀಸ್ ಠಾಣೆಗಳಲ್ಲಿ ನೀಲಗುಳಿ ಪದ್ಮನಾಭನ ವಿರುದ್ಧ ಕೊಲೆ, ಕೊಲೆ ಯತ್ನ, ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ, ಕರಪತ್ರ ಹಂಚಿಕೆ ಸಹಿತ ವಿವಿಧ ಕಲಂಗಳಡಿ ಒಟ್ಟು 19 ಪ್ರಕರಣಗಳು ದಾಖಲಾಗಿವೆ. ರಿಝ್ವಾನಾ ಬೇಗಂ ವಿರುದ್ಧ ಪೊಲೀಸರ ಮೇಲೆ ಗುಂಡೆಸೆತ, ಕರಪತ್ರ ಹಂಚಿಕೆ ಸಹಿತ ಶೃಂಗೇರಿ ಮತ್ತು ರಾಯಚೂರು ಪೊಲೀಸ್ ಠಾಣೆಗಳಲ್ಲಿ ತಲಾ 1 ಪ್ರಕರಣ ದಾಖಲಾಗಿದೆ. ಉಳಿದಂತೆ ಶರಣಾಗತಿಯಾದ ರಾಜು ಅಲಿಯಾಸ್ ಪರುಶುರಾಮ್ ಮತ್ತು ಭಾರತಿ ಅಲಿಯಾಸ್ ದೀಪಾ ಮೇಲೆ ಯಾವುದೇ ಪ್ರಕರಣಗಳು ದಾಖಲಾಗದಿರುವುದು ಕಂಡು ಬಂದಿದೆ.
ಶರಣಾಗತಿಯಾದ ನಾಲ್ವರು ಶಂಕಿತ ನಕ್ಸಲರಲ್ಲಿ ನೀಲಗುಳಿ ಪದ್ಮನಾಭ ಮತ್ತು ರಿಝ್ವನಾ ಬೇಗಂರನ್ನು ವಾರೆಂಟ್ ಇರುವ ಹಿನ್ನೆಲೆಯಲ್ಲಿ ಶೃಂಗೇರಿ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡರು. ಇನ್ನುಳಿದ ರಾಜು ಮತ್ತು ಭಾರತಿ ಮೇಲೆ ಯಾವುದೇ ಪ್ರಕರಣಗಳು ಇಲ್ಲದಿರುವ ಹಿನ್ನೆಲೆಯಲ್ಲಿ ಅವರನ್ನು ಬಂಧಿಸದೇ ತನಿಖೆಗೆ ಕರೆದಾಗ ಬಂದು ಸಹಕರಿಸುವಂತೆ ಸೂಚನೆ ನೀಡಿ ಬಿಟ್ಟು ಬಿಡಲಾಗಿದೆ. ಈ ಹಿಂದೆ ನೀಲಗುಳಿ ಪದ್ಮನಾಭ ಪತ್ತೆ ಹಚ್ಚಿ ಕೊಟ್ಟವರಿಗೆ 5 ಲಕ್ಷ ರೂ.ಗಳ ಬಹುಮಾನವನ್ನು ಘೋಷಿಸಿದ್ದರೆ, ಉಳಿದವರ ಹೆಸರಿಗೆ ತಲಾ 1 ಲಕ್ಷ ರೂ.ಗಳ ಬಹುಮಾನವನ್ನು ಘೋಷಿಸಲಾಗಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
2015ರ ಡಿಸೆಂಬರ್ 8ರಂದು ನೂರ್ ಜುಲ್ಪಿಕರ್ ಅಲಿಯಾಸ್ ನೂರ್ ಶ್ರೀಧರ್ ಮತ್ತು ಸಿರಿಮನೆ ನಾಗರಾಜ್ ಜಿಲ್ಲಾಡಳಿತದ ಎದುರು ಸಮಾಜದ ಮುಖ್ಯವಾಹಿನಿಗೆ ಬಂದಿದ್ದರು. ಇವರ ಬೆನ್ನಲ್ಲಿಯೇ ಈ ನಾಲ್ವರು ಶಂಕಿತ ನಕ್ಸಲರು ಸಮಾಜದ ಮುಖ್ಯವಾಹಿನಿಗೆ ಬಂದಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ನಕ್ಸಲರು ಕಾಡಿನ ಹೋರಾಟದಿಂದ ವಿಮುಖರಾಗಿ ನಾಡಿನ ಹೋರಾಟದತ್ತ ಧುಮುಕಲಿದ್ದಾರೆ ಎಂದು ಕಾದು ನೋಡಬೇಕಾಗಿದೆ. ಈ ಸಮಯದಲ್ಲಿ ಜಿಲ್ಲಾಧಿಕಾರಿ ಸತ್ಯವತಿ, ಎಸ್ಪಿ ಕೆ.ಅಣ್ಣಾಮಲೈ ಮತ್ತು ಜಿಪಂ ಸಿಇಒ ರಾಗಪ್ರಿಯ ಇದ್ದರು.
ನಾನು ಆಯುಧ ಹಿಡಿದು ಹೋರಾಟಕ್ಕೆ ಬಂದಿಲ್ಲ. ಸಮಾಜ ನನಗೆ ಮುಂದಿನ ದಿನಗಳಲ್ಲಿ ಸಮಾಜದೊಂದಿಗೆ ರೈತರು, ಕಾರ್ಮಿಕರು, ದಲಿತರು ಹಾಗೂ ಮಹಿಳೆಯರ ಪರವಾಗಿ ಹೋರಾಡ ನಡೆಸುವ ಇಚ್ಛೆ ಇದೆ. ಈ ನಿಟ್ಟಿನಲ್ಲಿ ತಾವು ಸಮಾಜದ ಮುಖ್ಯವಾಹಿನಿಗೆ ಬರಲು ನಿರ್ಧರಿಸಿದ್ದೇವೆ. ಇದು ಶರಣಾಗತಿಯಲ್ಲ. ನಾನು ಹೋರಾಟದ ದೃಷ್ಟಿಯಿಂದ ಸಮಾಜದಲ್ಲಿ ಗುರುತಿಸಿಕೊಳ್ಳಲು ಮುಖ್ಯವಾಹಿನಿಗೆ ಬರುತ್ತಿದ್ದೇವೆ.
- ನೀಲಗುಳಿ ಪದ್ಮನಾಭ