×
Ad

ಜಿಪಂ ಕೆಡಿಪಿ ಸಭೆ

Update: 2016-11-15 22:55 IST

ಮಡಿಕೇರಿ ನ.15: ಕೊಡಗು ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಪೂರಕವಾಗಿ ಜಿಲ್ಲಾ ಪಂಚಾಯತ್‌ಗೆ ಒದಗಿಸಲಾಗಿರುವ 25 ಕೋಟಿ ರೂ. ಅನುದಾನವನ್ನು ಜಿ.ಪಂನ ಎಲ್ಲ ಸದಸ್ಯರ ಕ್ಷೇತ್ರಗಳಿಗೆ ಹಂಚಿಕೆ ಮಾಡಬೇಕು ಮತ್ತು ಇದಕ್ಕೆ ಪೂರಕವಾದ ಕಾಮಗಾರಿಗಳ ಪ್ರಸ್ತಾವನೆಯನ್ನು ಸಿದ್ಧಪಡಿಸಬೇಕೆಂದು ಜಿಲ್ಲಾ ಪಂಚಾಯತ್ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯ ಪಾಲಕ ಅಭಿಯಂತರರಿಗೆ ಅಧ್ಯಕ್ಷ ಬಿ. ಎ. ಹರೀಶ್ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.


ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಜಿಪಂ ಅಧ್ಯಕ್ಷ ಬಿ.ಎ. ಹರೀಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರ ರೆಡ್ಡಿ, ರಾಜ್ಯ ಸರಕಾರ ತಲಾ 25 ಕೋಟಿ ರೂ. ಅನುದಾನವನ್ನು ಜಿಲ್ಲಾ ಪಂಚಾಯತ್ ಮತ್ತು ಲೋಕೋಪಯೋಗಿ ಇಲಾಖೆಗೆ ಒದಗಿಸಿದೆ. ಜಿಲ್ಲಾ ಪಂಚಾಯತ್‌ಗೆ ಸಂಬಂಧಿಸಿದಂತೆ ಲಭ್ಯ ವಿಶೇಷ ಅನುದಾನದಲ್ಲಿ ನಡೆಯಬೇಕಿರುವ ಕಾಮಗಾರಿಗಳನ್ನು ಇಲಾಖಾ ಇಂಜಿನಿಯರ್‌ಗಳ ಮುಖೇನ ಮತ್ತು ಸಾರ್ವಜನಿಕರು ನೀಡಿದ ಮನವಿಯ ಆಧಾರದಲ್ಲಿ ಪಟ್ಟಿಯೊಂದನ್ನು ಸಿದ್ಧಪಡಿಸಲಾಗಿದೆ ಎಂದು ಸಭೆಯ ಗಮನಕ್ಕೆ ತರುವುದಾಗಿ ತಿಳಿಸಿದರು.


ಇದರಿಂದ ಅಸಮಾಧಾನಗೊಂಡ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಶಿ ಸುಬ್ರಮಣಿ, ಜಿಲ್ಲಾ ಪಂಚಾಯತ್‌ಗೆ ಲಭ್ಯ ಅನುದಾನಕ್ಕೆ ಸಂಬಂಧಿಸಿದಂತೆ ಚುನಾಯಿತ ಸದಸ್ಯರ ಗಮನಕ್ಕೆ ತಾರದೆ ಕಾಮಗಾರಿಗಳ ಪಟ್ಟಿ ಸಿದ್ಧಪಡಿಸಿರುವ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದರು. ಅಲ್ಲದೆ, ಲಭ್ಯ ಅನುದಾನವನ್ನು ಜಿಪಂನ ಎಲ್ಲಾ 29 ಸದಸ್ಯರಿಗೆ ಸಮಾನವಾಗಿ ಹಂಚಬೇಕೆಂದು ಆಗ್ರಹಿಸಿದರು. ಇದಕ್ಕೆ ಧ್ವನಿ ಗೂಡಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಜಿಲ್ಲಾ ಪಂಚಾಯತ್ ಸದಸ್ಯರ ಸಾಕಷ್ಟು ಕ್ಷೇತ್ರಗಳಲ್ಲಿ ಅನೇಕ ರಸ್ತೆಗಳು ಹದಗೆಟ್ಟಿವೆ.

ಜಿಪಂ ಸದಸ್ಯರೆಲ್ಲರ ಗಮನಕ್ಕೆ ವಿಚಾರ ತಂದು ಅವರ ಸಲಹೆ ಸೂಚನೆಗಳನ್ನು ಪಡೆದು ಕಾಮಗಾರಿಗಳ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಬೇಕೆಂದು ತಿಳಿಸಿದರು.
ಪ್ರಬಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜಾ, ಸರಕಾರದ ವಿಶೇಷ ಅನು ದಾನದ ಬಳಕೆಯ ಬಗ್ಗೆ ಆದೇಶ ಬಂದಿರುವ ಬಗ್ಗೆ ಪ್ರಶ್ನಿಸಿದಾಗ, ಾರ್ಯಪಾಲಕ ಅಭಿಯಂತರ ರೆಡ್ಡಿ, ವಿಶೇಷ ಅನುದಾನದಡಿ ಅಂತಹ ಆದೇಶಗಳು ಬಂದಿಲ್ಲ. ಬದಲಾಗಿ ಕಾಮಗಾರಿಯ ಪ್ರಸ್ತಾವನೆಯನ್ನು ವಾರದೊಳಗೆ ಕಳುಹಿಸುವ ಅಗತ್ಯವಿರುವುದಾಗಿ ತಿಳಿಸಿದರು.


 ಎಲ್ಲಾ ಜಿಪಂ ಸದಸ್ಯರಿಗೆ ವಿಷಯವನ್ನು ತಿಳಿಸಿ, ಅವರಿಂದ ಕಾಮಗಾರಿಗಳ ಪಟ್ಟಿ ಪಡೆದು ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸುವುದು ಒಲಿತು ಎಂದು ಶಶಿ ಸುಬ್ರಮಣಿ ಹೇಳಿದರು.
 ಈ ಸಂದರ್ಭ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜಾ, ಜಿಲ್ಲಾ ಪಂಚಾಯತ್‌ನ ಎಲ್ಲಾ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News