ನೋಟ್ ರದ್ದು: ಶುಭ ಸಮಾರಂಭಗಳಿಗೆ ಕುತ್ತು!

Update: 2016-11-16 17:30 GMT

ಶಿವಮೊಗ್ಗ, ನ.16: ಕೇಂದ್ರ ಸರಕಾರವು ದಿಢೀರ್ ಆಗಿ 500 ಹಾಗೂ 1000 ರೂ. ಮುಖಬೆಲೆಯ ಹಳೆಯ ನೋಟ್‌ಗಳ ಚಲಾವಣೆ ರದ್ದುಗೊಳಿಸಿದ ನಂತರ ದೇಶಾದ್ಯಂತ ಅಘೊೀಷಿತ ಆರ್ಥಿಕ ತುರ್ತು ಪರಿಸ್ಥಿತಿ ಹೇರಿದ ಅನುಭವ ನಾಗರಿಕರದ್ದಾಗಿದೆ. ಬಹುತೇಕ ಎಲ್ಲ ವರ್ಗದ ನಾಗರಿಕರು ಒಂದಲ್ಲ ಒಂದು ರೀತಿಯಲ್ಲಿ ನೋಟ್ ರದ್ದಿನ ಎಫೆಕ್ಟ್‌ಗೆ ತುತ್ತಾಗಿದ್ದಾರೆ!
ಪ್ರಸ್ತುತ ನೆಯುತ್ತಿರುವ ಮದುವೆ ಮತ್ತಿತರ ಶುಭ ಸಮಾರಂಭಗಳ ಮೇಲೆಯೂ ನೋಟ್ ರದ್ದಿನ ಪರಿಣಾಮಗಳು ಬೀರಲಾರಂಭಿಸಿದ್ದು, ಭಾರೀ ದೊಡ್ಡ ಪ್ರಮಾಣದ ವಿಘ್ನ ತಂದೊಡ್ಡುತ್ತಿದೆ. ಕೈಯಲ್ಲಿ ಹಣವಿದ್ದರೂ ಖರ್ಚು ಮಾಡಲಾಗದ ಸ್ಥಿತಿ ಹಲವರದ್ದಾಗಿದೆ. ಹಣದ ತೊಂದರೆಯಿಂದಾಗಿ ಈಗಾಗಲೇ ನಿಗದಿಯಾಗಿದ್ದ ಮದುವೆ ಮತ್ತಿತರ ಶುಭ ಸಮಾರಂಭಗಳನ್ನು ಕೆಲವರು ಮುಂದೂಡುತ್ತಿರುವ ಮಾಹಿತಿಗಳು ಕೂಡ ಕೇಳಿಬರುತ್ತಿವೆ. ಮತ್ತೆ ಕೆಲವರು ಸಾಕಷ್ಟು ಶ್ರಮ ವಹಿಸಿ, ನಿಗದಿತ ದಿನಾಂಕಗಳಂದೇ ಶುಭ ಸಮಾರಂಭಗಳನ್ನು ನಡೆಸುತ್ತಿದ್ದಾರೆ. ಅದರಲ್ಲಿಯೂ ಬಡ- ಮಧ್ಯಮ ವರ್ಗದವರ ಗೋಳು ಹೇಳತೀರದಾಗಿದ್ದು, ತೀ್ರ ಆರ್ಥಿಕ ತೊಂದರೆಯ ನಡುವೆಯೇ ಕಷ್ಟಪಟ್ಟು ಹಣ ಹೊಂದಿಸಿ ಶುಭ ಸಮಾರಂಭ ನಡೆಸಿ ನಿಟ್ಟುಸಿರು ಬಿಡುತ್ತಿದ್ದಾರೆ!
ತೊಂದರೆ: ಮದುವೆ ಹಾಗೂ ಶುಭ ಸಮಾರಂಭ ಆಯೋ ಜಿಸುವ ಬಹುತೇ ಕರು ಮೊದಲೇ ಹಣ ಹೊಂದಿಸಿಟ್ಟುಕೊಳ್ಳುತ್ತಾರೆ. ಅಗತ್ಯಕ್ಕೆ ಅನುಗುಣವಾಗಿ ಖರ್ಚು ಮಾಡುತ್ತಿರುತ್ತಾರೆ. ಹೆಚ್ಚಿನವರ ಬಳಿ 500, 1000 ರೂ. ಮುಖಬೆಲೆಯ ನೋಟ್‌ಗಳೇ ಹೆಚ್ಚಿರುತ್ತವೆ. ಕೇಂದ್ರ ಸರಕಾರ ದಿಢೀರ್ ಆಗಿ ಈ ನೋಟ್‌ಗಳ ಚಲಾವಣೆ ರದ್ದುಗೊಳಿಸಿದ್ದರಿಂದ ಆಯೋಜಕರನ್ನು ತಬ್ಬಿಬ್ಬುಗೊಳ್ಳುವಂತೆ ಮಾಡಿದೆ!
ಡಿಸೆಂಬರ್ ತಿಂಗಳಲ್ಲಿ ಮಗಳ ಮದುವೆಗೆ ದಿನಾಂಕ ನಿರ್ಧರಿಸಲಾಗಿತ್ತು. ಈಗಾಗಲೇ ಮದುವೆಯ ಪೂರ್ವಭಾವಿ ಸಿದ್ಧತೆ ಕೂಡ ಆರಂಭಿಸಲಾಗಿತ್ತು. ಇದೀಗ 500, 1000 ರೂ. ನೋಟ್‌ಗಳ ಚಲಾವಣೆ ರದ್ದುಗೊಳಿಸಿದ ನಂತರ ಕೈಯಲ್ಲಿ ಹಣವಿದ್ದರೂ ಖರ್ಚು ಮಾಡಲಾಗದ ಸ್ಥಿತಿ ತಮ್ಮದಾಗಿದೆ. ದುಡ್ಡಿಲ್ಲದೆ ಯಾವುದೇ ಕೆಲಸ ಕಾರ್ಯಗಳು ನಡೆಸಲಾಗದಂತಾಗಿದೆ. ತಮ್ಮ ಬಳಿಯಿರುವ ಹಣ ಬ್ಯಾಂಕ್‌ಗೆ ಜಮಾ ಮಾಡಿದರೂ ಏಕಕಾಲಕ್ಕೆ ಈ ಹಣ ಬಿಡಿಸಿಕೊಳ್ಳಲು ಆಗುವುದಿಲ್ಲ. ಸ್ನೇಹಿತರು, ಸಂಬಂಧಿಗಳ ಬಳಿ ಸಾಲ ಪಡೆಯೋಣವೆಂದರೆ ಹಳೆಯ ನೋಟ್ ನೀಡುವುದಾಗಿ ಹೇಳುತ್ತಾರೆ. ಏನು ಮಾಡಬೇಕು ಎನ್ನುವುದೇ ಗೊತ್ತಾಗುತ್ತಿಲ್ಲ. ವರನ ಮನೆಯವರ ಪರಿಸ್ಥಿತಿಯೂ ಇದೇ ರೀತಿಯದ್ದಾಗಿದೆ. ಈ ಹಿನ್ನೆಲೆಯಲ್ಲಿ ಮದುವೆ ಮುಂದೂಡುವ ಚಿಂತನೆ ನಡೆಸಿದ್ದೇವೆ. ಮುಂದೇನಾಗುವುದೋ ಕಾದು ನೋಡಬೇಕಾಗಿದೆ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ವ್ಯಕ್ತಿಯೋರ್ವರು ತಮ್ಮ ಅಳಲು ತೋಡಿಕೊಳ್ಳುತ್ತಾರೆ.
ರದ್ದು: ಶುಭ ಸಮಾರಂಭಗಳ ನಿಮಿತ್ತ ಈಗಾಗಲೇ ಮುಂಗಡವಾಗಿ ಬುಕ್ ಮಾಡಲಾಗಿದ್ದ ಕಲ್ಯಾಣ ಮಂದಿರ, ಪಾರ್ಟಿ ಹಾಲ್‌ಗಳ ಬುಕ್ಕಿಂಗ್‌ನ್ನು ಕೆಲ ಆಜಕರು ರದ್ದು ಮಾಡುತ್ತಿದ್ದಾರೆ. ಕೆಲವರು ರದ್ದುಗೊಳಿಸಲಾಗಿರುವ 500, 1000 ರೂ. ನೋಟ್ ಕೊಡಲು ಮುಂದಾಗುತ್ತಿದ್ದರೆ, ಮತ್ತೆ ಕೆಲವರು ಕೆಲ ದಿನಗಳ ನಂತರ ಹಣ ಪಾವತಿಸುವುದಾಗಿ ಮಾಲೀಕರಿಗೆ ಹೇಳುತ್ತಿದ್ದಾರೆ. 
ನೋಟ್ ರದ್ದಿನ ಕಾರಣದಿಂದಲೇ ಕಲ್ಯಾಣ ಮಂದಿರ ಹಾಗೂ ಹೊಟೇಲ್‌ಗಳ ಪಾರ್ಟಿ ಹಾಲ್‌ಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಶುಭ ಸಮಾರಂಭಗಳು ನಡೆಯುತ್ತಿಲ್ಲವಾಗಿದೆ. ಇದನ್ನು ಹೊಟೇಲ್ ಪಾರ್ಟಿ ಹಾಲ್ ವ್ಯವಸ್ಥೆ ಹೊಂದಿರುವ ಮಾಲಕರೊಬ್ಬರು ಖಚಿತ ಪಡಿಸುತ್ತಾರೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಹೋಗುವ ವಿಶ್ವಾಸ ವ್ಯಕ್ತಪಡಿಸುತ್ತಾರೆ’. ಕಡಿಮೆ: ಪ್ರಸ್ತುತ ನಡೆಯುತ್ತಿರುವ ಮದುವೆ ಇತರ ಶುಭ ಸಮಾರಂಭಗಳಿಗೆ ಆಗಮಿಸುತ್ತಿರುವ ಜನರ ಸಂಖ್ಯೆ ಕೂಡ ಕಡಿಮೆಯಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ ಜನರು ಕಾರ್ಯಕ್ರಮಗಳಿಗೆ ಆಗಮಿಸುತ್ತಿಲ್ಲ. ಒಟ್ಟಾರೆ ನೋಟ್ ರದ್ದಿನ ಎಫೆಕ್ಟ್ ಶುಭ ಕಾರ್ಯಗಳ ಮೇಲೆಯೂ ಕರಿನೆರಳು ಬೀರಿರುವುದಂತೂ ಸತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News