ನೋಟು ನಿಷೇಧ: ರಾಜ್ಯದಲ್ಲಿ ಸಾಲದ ರೂಪದಲ್ಲಿ ‘ಪಡಿತರ ಭಾಗ್ಯ’
ಬೆಂಗಳೂರು, ನ.17: ರಾಜ್ಯದ ಬಿಪಿಎಲ್ ಕುಟುಂಬಗಳಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರವನ್ನು ಸಾಲದ ರೂಪದಲ್ಲಿ ವಿತರಿಸಲು ನಿರ್ಧರಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರಕಾರವು 500 ಹಾಗೂ 1 ಸಾವಿರ ರೂ.ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿರುವುದರಿಂದ ಜನಸಾಮಾನ್ಯರ ದಿನನಿತ್ಯದ ಜೀವನದಲ್ಲಿ ಗಂಭೀರ ಪರಿಣಾಮ ಬೀರಿದೆ ಎಂದರು.
ರಾಜ್ಯಾದ್ಯಂತ ಸುಮಾರು 20 ಸಾವಿರ ನ್ಯಾಯಬೆಲೆ ಅಂಗಡಿಗಳಿದ್ದು, 1 ಕೋಟಿಗೂ ಹೆಚ್ಚು ಬಿಪಿಎಲ್ ಕುಟುಂಬಗಳಿವೆ. ಪಡಿತರವನ್ನು ಪಡೆದುಕೊಳ್ಳಲು ಬಿಪಿಎಲ್ ಕಾರ್ಡುದಾರರು 42 ರೂ.ಗಳನ್ನು ಪಾವತಿಸಬೇಕು. ಆದರೆ, ಈಗಿನ ಪರಿಸ್ಥಿತಿಯಲ್ಲಿ ಬಡವರಿಗೆ ಆಗುತ್ತಿರುವ ತೊಂದರೆ ನಿವಾರಿಸಲು ಸರಕಾರ ಪಡಿತರವನ್ನು ಸಾಲದ ರೂಪದಲ್ಲಿ ನೀಡಲು ನಿರ್ಧರಿಸಿದೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಈ ವಿಚಾರದ ಕುರಿತು ಚರ್ಚೆ ನಡೆಸಿ ಅನುಮೋದನೆ ಪಡೆದುಕೊಳ್ಳಲಾಗಿದೆ. ಬಿಪಿಎಲ್ ಕಾರ್ಡುದಾರರಿಗೆ ಸಕ್ಕರೆ, ಎಣ್ಣೆ, ಉಪ್ಪು ಹಾಗೂ ಗೋಧಿಯನ್ನು ಸಾಲದ ರೂಪದಲ್ಲಿ ವಿತರಿಸುವುದರಿಂದ ರಾಜ್ಯ ಸರಕಾರಕ್ಕೆ 80 ಕೋಟಿ ರೂ. ಹೊರೆಯಾಗಲಿದೆ ಎಂದು ಖಾದರ್ ತಿಳಿಸಿದರು.
ಪಡಿತರವನ್ನು ನವೆಂಬರ್ ಮಾಸ್ಯಾಂತದವರೆಗೆ ಸಾಲದ ರೂಪದಲ್ಲಿ ನೀಡುತ್ತೇವೆ. ಪರಿಸ್ಥಿತಿ ಸುಧಾರಿಸದಿದ್ದರೆ ಡಿಸೆಂಬರ್ ತಿಂಗಳಿಗೂ ಈ ವ್ಯವಸ್ಥೆಯನ್ನು ಮುಂದುವರೆಸ ಲಾಗುವುದು. ನ್ಯಾಯಬೆಲೆ ಅಂಗಡಿಗಳು ಸಾಲದ ರೂಪದಲ್ಲಿ ಪಡಿತರ ವಿತರಿಸಿದ ದಾಖಲೆಗಳನ್ನು ಸರಕಾರಕ್ಕೆ ಸಲ್ಲಿಸಿದ ಬಳಿಕ ಅವರಿಗೆ ಮೊತ್ತವನ್ನು ಮರುಪಾವತಿ ಮಾಡಲಾಗುವುದು ಎಂದು ಅವರು ಹೇಳಿದರು.
ಬಿಪಿಎಲ್ ಕಾರ್ಡುದಾರರೇ ಎಚ್ಚರ: ಬಿಪಿಎಲ್ ಕಾರ್ಡುಗಳನ್ನು ಹೊಂದಿರುವವರು ತಮ್ಮ ಬ್ಯಾಂಕ್ ಖಾತೆಗಳಿಗೆ 2.50 ಲಕ್ಷ ರೂ.ಗಳಿಗಿಂತ ಹೆಚ್ಚಿನ ಮೊತ್ತವನ್ನು ಜಮೆ ಮಾಡಿದರೆ, ಅವರ ಬಿಪಿಎಲ್ ಕಾರ್ಡು ತಾನಾಗಿಯೆ ರದ್ದಾಗಲಿದೆ ಎಂದು ಖಾದರ್ ತಿಳಿಸಿದರು.
ಆದಾಯ ತೆರಿಗೆ ಪಾವತಿಸುವವರು, ಸ್ವಂತ ಕಾರು, ನಗರ ಪ್ರದೇಶದಲ್ಲಿ ಮನೆಯನ್ನು ಹೊಂದಿರುವವರಿಗೆ ಬಿಪಿಎಲ್ ಕಾರ್ಡು ನೀಡುವಂತಿಲ್ಲ. ಬ್ಯಾಂಕ್ ಖಾತೆಗಳಿಗೆ 2.50 ಲಕ್ಷ ರೂ.ಗಳಿಗಿಂತ ಹೆಚ್ಚಿನ ಮೊತ್ತವನ್ನು ಜಮೆ ಮಾಡಿದಾಗ, ಆದಾಯ ತೆರಿಗೆ ಕಟ್ಟಬೇಕಾಗುತ್ತದೆ. ಆದುದರಿಂದ, ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು ಎಂದು ಅವರು ಹೇಳಿದರು.
ಆದಾಯ ತೆರಿಗೆ ಪಾವತಿಸುವವರಾಗಿ ಗುರುತಿಸಲ್ಪಟ್ಟ ನಂತರ ಮತ್ತೆ ಬಿಪಿಎಲ್ ಪಡಿತರ ಚೀಟಿಗಾಗಿ ಅರ್ಜಿಸಲ್ಲಿಸಿದರೆ, ಅಂತಹವರಿಗೆ ಬಿಪಿಎಲ್ ಬದಲು ಎಪಿಎಲ್ ಕಾರ್ಡು ನೀಡಲಾಗುವುದು. ಆದಾಯ ತೆರಿಗೆ ಪಾವತಿಸುವವರು ಬಿಪಿಎಲ್ ವ್ಯಾಪ್ತಿಗೆ ಬರುವುದಿಲ್ಲ ಎಂದು ಖಾದರ್ ಸ್ಪಷ್ಟಣೆ ನೀಡಿದರು.
ರಾಜಕೀಯ ಗಿಮಿಕ್: ಕೇಂದ್ರ ಸರಕಾರವು 500 ಹಾಗೂ 1 ಸಾವಿರ ರೂ.ಮುಖ ಬೆಲೆಯ ನೋಟುಗಳನ್ನು ರದ್ದುಪಡಿಸಿದ ಬಳಿಕ ಕೈಗಾರಿಕಾ ವಲಯದ ಸಾಲಮನ್ನಾ ಮಾಡಲು ಬ್ಯಾಂಕುಗಳು ಮುಂದಾಗುತ್ತಿರುವುದನ್ನು ನೋಡಿದರೆ, ಇದೊಂದು ರಾಜಕೀಯ ಗಿಮಿಕ್ ಆಗಿ ಕಾಣುತ್ತದೆ ಎಂದು ಖಾದರ್ ಟೀಕಿಸಿದರು.
ರಾಷ್ಟ್ರೀಕೃತ ಬ್ಯಾಂಕುಗಳು ಉದ್ಯಮಿ ವಿಜಯಮಲ್ಯ ಸೇರಿದಂತೆ ಇನ್ನಿತರ ಕೈಗಾರಿಕೋದ್ಯಮಿಗಳ ಸಾಲ ಮನ್ನಾ ಮಾಡಲು ನಿರ್ಧರಿಸಿರುವ ಕುರಿತು ಮಾಹಿತಿ ಸಿಕ್ಕಿದೆ. ಕೈಗಾರಿಕಾ ವಲಯಕ್ಕೆ ಸೇರಿದ ಸಾಲ ಮನ್ನಾ ಮಾಡುವ ಉದ್ದೇಶದಿಂದಲೆ, ನೋಟುಗಳನ್ನು ಚಲಾವಣೆಯನ್ನು ರದ್ದು ಮಾಡಿದೆ ಎಂಬ ಅನುಮಾನ ಮೂಡುತ್ತದೆ ಎಂದು ಅವರು ಹೇಳಿದರು.
ಕೈಗಾರಿಕಾ ವಲಯದ ಸಾಲ ಮನ್ನಾ ಮಾಡಲು ಸಿದ್ಧವಿರುವ ರಾಷ್ಟ್ರೀಕೃತ ಬ್ಯಾಂಕುಗಳು, ವಿದ್ಯಾರ್ಥಿಗಳು ಪಡೆದಿರುವಂತಹ ಶೈಕ್ಷಣಿಕ ಸಾಲವನ್ನು ಮನ್ನಾ ಮಾಡಲಿ, ಇದರಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲ ವಾಗಲಿದೆ ಎಂದು ಖಾದರ್ ಅಭಿಪ್ರಾಯಪಟ್ಟರು.