×
Ad

ಜಯಂತಿಗಳಂದು ಸರಕಾರಿ ರಜೆ ಅನಗತ್ಯ: ಸಚಿವ ಮಲ್ಲಿಕಾರ್ಜುನ್

Update: 2016-11-17 23:12 IST

ದಾವಣಗೆರೆ, ನ.17: ಸಂತರ ಜಯಂತಿಗಳ ದಿನದಂದು ಸರಕಾರಿ ರಜೆ ಘೋಷಿಸಿದರೆ ಯಾವುದೇ ಪ್ರಯೋಜನವಿಲ್ಲ. ಅಂದಿನ ದಿನದ ಆರ್ಥಿಕ ಬೆಳವಣಿಗೆ ಕುಂಠಿತಗೊಳ್ಳುವುದಲ್ಲದೆ, ಸಾರ್ವಜನಿಕರಿಗೆ ಅನನುಕೂಲವಾಗುವ ಸಾಧ್ಯತೆಯೇ ಹೆಚ್ಚು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು. ನಗರದ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಜರಗಿದ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನಕದಾಸ ಜಯಂತಿ ದಿನದಂದು ಬ್ಯಾಂಕ್‌ಗಳಿಗೆ ರಜೆ ನೀಡದೆ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿರುವುದು ಶ್ಲಾಘನೀಯವಾದುದು ಎಂದರು. ಜಯಂತಿಗಳನ್ನು ಆಚರಿಸುವ ಜೊತೆಗೆ ಮಹಾನ್ ಚೇತನಗಳ ಆದರ್ಶ ಪ್ರತಿಯೊಬ್ಬರಿಗೂ ತಲುಪಿಸುವ ನಿಟ್ಟಿನಲ್ಲಿ ಶ್ರಮಿಸೋಣ. ಅಲ್ಲದೆ, ಕನಕದಾಸರು ಸೇರಿದಂತೆ ಸಮ ಸಮಾಜ ಹಾಗೂ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದಂತಹ ಮಹನೀಯರ ಮಾರ್ಗದರ್ಶನದಲ್ಲಿ ಸಾಗೋಣ ಎಂದು ಹೇಳಿದರು. ಕನಕದಾಸರು ಮಾನವ ಜನ್ಮ ಬಲು ದೊಡ್ಡದು ಅದನ್ನು ವ್ಯರ್ಥ ಮಾಡಿಕೊಳ್ಳಬೇಡಿ ಎಂಬ ದಾಸಪಂಥವನ್ನು ಕರ್ನಾಟಕದ ಉದ್ದಗಲಕ್ಕೂ ಓಡಾಡಿ ತಮ್ಮ ಕಾವ್ಯ, ಕೀರ್ತನೆ ಮುಖಾಂತರ ಸರ್ವ ಜನರ ಆತ್ಮೋದ್ಧಾರಕರಾಗಿ ಶ್ರಮಿಸಿದ್ದಾರೆ ಎಂದು ತಿಳಿಸಿದರು. ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಮಾತನಾಡಿ, ಕೇವಲ ಜಯಂತಿ ದಿನದಂದು ಮಹನೀಯರ ಆಚರಣೆ ಮಾಡಿದರೆ ಸಾಲದು. ನಮ್ಮ ಜೀವನದ ಪ್ರತಿ ಹೆಜ್ಜೆಯಲ್ಲಿಯೂ ಆದರ್ಶ ಮತ್ತು ಸಂದೇಶಗಳನ್ನು ಅಳವಡಿಸಿಕೊಂಡರೆ ಶಾಂತಿ, ಆರೋಗ್ಯ ಪೂರ್ಣ ಸಮಾಜ ನಿರ್ಮಿಸಲು ಸಾಧ್ಯ ಎಂದು ಆಶಿಸಿದರು. ಜಿಲ್ಲಾ ಕುರುಬರ ಸಂಘದ ಕೆಂಗೋ ಹನುಮಂತಪ್ಪ ಮಾತನಾಡಿದರು. ಡಿಆರ್‌ಎಂ ವಿಜ್ಞಾನ ಮಹಾವಿದ್ಯಾನಿಲಯದ ಡಾ.ವಡ್ನಾಳ್ ಜಿ. ರುದ್ರೇಶ್ ಉಪನ್ಯಾಸ ನೀಡಿದರು.
ಇದೇ ವೇಳೆ ಕನಕದಾಸರ ಜಯಂತಿ ಪ್ರಯುಕ್ತ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತವಾದವರಿಗೆ ಬಹುಮಾನ ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಹೊರ ತರಲಾದ ಸಂತಕವಿ ಕನಕದಾಸ ಎಂಬ ಕಿರು ಹೊತ್ತಿಗೆ ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನಾ ದುರ್ಗಾಂಭಿಕ ದೇವಸ್ಥಾನದ ಎದುರು ದಾಸಶ್ರೇಷ್ಠ ಕನಕದಾಸರ ಮೂರ್ತಿಯ ಮೆರವಣಿಗೆ, ವಿವಿಧ ಜಾನಪದ ಕಲಾ ತಂಡಗಳಿಗೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಚಾಲನೆ ನೀಡಿದರು.
ನಂತರ ಕಾಳಿಕಾಂಭ ದೇವಸ್ಥಾನದ ರಸ್ತೆ, ಹೊಂಡದ ಸರ್ಕಲ್, ಅರುಣಾ ಟಾಕೀಸ್ ಮುಂಭಾಗ, ಪಿಬಿ ರಸ್ತೆ ಮೂಲಕವಾಗಿ ಬೀರಲಿಂಗೇಶ್ವರ ದೇವಸ್ಥಾನದ ಆವರಣ ತಲುಪಿತು.
 ಜಿಪಂ ಅಧ್ಯಕ್ಷೆ ಉಮಾ ರಮೇಶ್, ಪಾಲಿಕೆ ಮೇಯರ್ ರೇಖಾ ನಾಗರಾಜ್, ಪಾಲಿಕೆ ಉಪ ಮೇಯರ್ ರಾಜಶೇಖರ್ ಗೌಡ್ರು, ಮಾಜಿ ಶಾಸಕ ಕೆ. ಮಲ್ಲಪ್ಪ, ಜಿಪಂ ಸದಸ್ಯ ತೇಜಸ್ವಿ ಪಟೇಲ್, ಬಸವರಾಜ್, ಲಿಂಗಪ್ಪ, ಪಾಲಿಕೆ ಸದಸ್ಯೆ ಲಲಿತಾ ರಮೇಶ್, ಬಳ್ಳಾರಿ ಷಣ್ಮುಖಪ್ಪ, ರೇಷ್ಮೆ ಅಭಿವೃದ್ಧಿ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಡಿ. ಬಸವರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ್ ಎಸ್. ಗುಳೇದ್, ಪಾಲಿಕೆ ಆಯುಕ್ತ ಬಿ.ಎಚ್. ನಾರಾಯಣಪ್ಪ, ಡಿಡಿಪಿಐ ಎಚ್.ಎಂ. ಪ್ರೇಮಾ, ತಹಶೀಲ್ದಾರ್ ಸಂತೋಷ್ ಕುಮಾರ್, ಜಿ.ಎಂ. ಚನ್ನರಾಜ್ ಮತ್ತಿತರರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಸ್ವಾಗತಿಸಿದರು. ಉಪ ವಿಭಾಗಾಧಿಕಾರಿ ಬಿ.ಟಿ. ಕುಮಾರಸ್ವಾಮಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News