ಕೊಡಗು: ಒಂದೇ ವಾರಕ್ಕೆ ನಾಲ್ಕು ಪುಂಡಾನೆಗಳ ಸೆರೆ
ಮಡಿಕೇರಿ, ನ.17: ಕಾಫಿ ತೋಟಗಳಲ್ಲಿ ಬೀಡುಬಿಟ್ಟು ಕೃಷಿ ಹಾನಿಯೊಂದಿಗೆ ಕಾರ್ಮಿಕರು ಹಾಗೂ ಸಾರ್ವಜನಿಕರ ಮೇಲೆ ದಾಳಿ ನಡೆಸಿ ಆತಂಕಕ್ಕೆ ಕಾರಣವಾಗುತ್ತಿದ್ದ ಪುಂಡಾನೆಯೊಂದನ್ನು ಬಿಬಿಟಿಸಿ ತೋಟದ ಚೌಡಿಕಾಡು ವಿಭಾಗದಲ್ಲಿ ಸೆರೆಹಿಡಿಯುವುದರೊಂದಿಗೆ ಅರಣ್ಯ ಇಲಾಖೆ ಕಳೆದ ಒಂದು ವಾರದ ಅವಧಿಯಲ್ಲಿ ನಾಲ್ಕು ಕಾಡಾನೆಗಳನ್ನು ಸೆರೆ ಹಿಡಿದಂತಾಗಿದೆ.
ಸಿದ್ದಾಪುರ ಸಮೀಪದ ಬಿಬಿಟಿಸಿ ಸಂಸ್ಥೆಯ ಚೌಡಿಕಾಡು ತೋಟದಲ್ಲಿ ಬೀಡುಬಿಟ್ಟಿದ್ದ ಒಟ್ಟು 9 ಕಾಡಾನೆಗಳ ಹಿಂಡಿನಲ್ಲಿದ್ದ ಸುಮಾರು 35 ವರ್ಷ ಪ್ರಾಯದ ಪುಂಡಾನೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಗುರುವಾರ ಸೆರೆ ಹಿಡಿದಿದ್ದಾರೆ.
ಅರಣ್ಯ ಇಲಾಖಾ ಸಿಬ್ಬಂದಿಗಳು ಗುಂಪಿನಲ್ಲಿದ್ದ ಪುಂಡಾನೆಯನ್ನು ಗುರುತಿಸಿ ಅದಕ್ಕೆ ಅರಿವಳಿಕೆ ನೀಡುವುದರೊಂದಿಗೆ ಅದು ಪ್ರಜ್ಞೆ ತಪ್ಪಿ ಧರೆಗುರುಳಿತ್ತು. ಬಳಿಕ ಕಾಡಾನೆಯನ್ನು ಹಗ್ಗಗಳಿಂದ ಬಂಧಿಸಿ ಸಾಕಾನೆಗಳಾದ ಅಭಿಮನ್ಯು, ಹರ್ಷ, ಗಜೇಂದ್ರ ಹಾಗೂ ಕೃಷ್ಣನ ಸಹಾಯದಿಂದ ತೋಟದ ಸಣ್ಣ ರಸ್ತೆಯ ಮೂಲಕ ಮುಖ್ಯ ರಸ್ತೆಗೆ ಎಳೆದು ತರಲಾಯಿತು. ಈ ಸಂದಭರ್ ಕಾಡಾನೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ತನ್ನ ಸಿಟ್ಟನ್ನು ಪ್ರದರ್ಶಿಸಿತ್ತು. ಸೆರೆಸಿಕ್ಕ ಪುಂಡಾನೆಯನ್ನು ಸಾಕಾನೆಗಳ ಸಹಾಯದಿಂದ ಲಾರಿಗೆ ಹತ್ತಿಸಿ, ದುಬಾರೆ ಸಾಕಾನೆ ಕೇಂದ್ರಕ್ಕೆ ಸಾಗಿಸಲಾಯಿತು. ಈ ಸಂದಭರ್ ಸ್ಥಳದಲ್ಲಿ ಸುತ್ತಮುತ್ತಲ ನೂರಾರು ಗ್ರಾಮಸ್ಥರು ಕಾರ್ಯಾಚರಣೆಯನ್ನು ಕುತೂಹಲದಿಂದ ವೀಕ್ಷಿಸಿದ್ದು ಗೋಚರಿಸಿತು. ಕಾರ್ಯಾಚರಣೆಯಲ್ಲಿ ಜಿಲ್ಲಾಡಳಿತದ ನಿರ್ದೇಶನದಂತೆ ಪಿಸಿಎಫ್ ಪೊನ್ನತ್ತಿ ಶ್ರೀಧರ್, ವನ್ಯಜೀವಿ ಡಿಎಫ್‌ಒ ಜಯರಾಂ, ಎಸಿಎಪ್ ಚಿನ್ನಪಫ, ಆರ್‌ಎಫ್‌ಒ ಗೋಪಾಲ್, ದೇವಯ್ಯ, ಅರಣ್ಯ ವೈದ್ಯಾಧಿಕಾರಿ ಉಮಾಶಂಕರ್, ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಸಂತೋಷ್ ಕಾಶ್ಯಪ, ಎಎಸ್‌ಐ ವಸಂತ್ ಕುಮಾರ್, ಕುಶಾಲಪ್ಪ ಸೇರಿದಂತೆ ಇನ್ನಿತರರು ಇದ್ದರು. ಕಳೆದ ಒಂದು ವಾರದ ಅವಧಿಯಲ್ಲಿ ಸಿದ್ದಾಪುರ ವ್ಯಾಪ್ತಿಯಲ್ಲಿ 2 ಹಾಗೂ ಚೆಟ್ಟಳ್ಳಿ ವಾಲ್ನೂರು ವ್ಯಾಪ್ತಿಯಲ್ಲಿ 2 ಪುಂಡಾನೆಗಳನ್ನು ಸೆರೆಹಿಡಿಯಲಾಗಿದ್ದು, ದುಬಾರೆ ಸಾಕಾನೆ ಕೇಂದ್ರದಲ್ಲಿ ಪುಂಡಾನೆಗಳನ್ನು ಪಳಗಿಸಲಾಗುವುದು. ಮಡಿಕೇರಿ ತಾಲೂಕಿನ ಕಡಗದಾಳುವಿನಲ್ಲಿ ಕಾಲಿಗೆ ಗಾಯವಾಗಿರುವ ಕಾಡಾನೆಯೊಂದು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದು, ಕಾಡಾನೆಯನ್ನು ಹಿಡಿದು ಶೀಘ್ರದಲ್ಲೆ ಕಬಿನಿ ಜಲಾಶಯದ ಅರಣ್ಯಕ್ಕೆ ಬಿಡಲಾಗುವುದೆಂದು ಅರಣ್ಯ ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ.