ಭೂಮಿ ಮತ್ತು ಮನೆ, ನಿವೇಶನಕ್ಕೆ ಆಗ್ರಹಿಸಿ ಡಿಸಿ ಕಛೇರಿಗೆ ಮುತ್ತಿಗೆ
ಹಾಸನ,ನ.18: ಬಡ ರೈತರಿಗೆ, ಕಾರ್ಮಿಕರಿಗೆ, ದಲಿತರಿಗೆ, ಬಡವರಿಗೆ ಮತ್ತು ವಸತಿ ರಹಿತರಿಗೆ ಭೂಮಿ ಮತ್ತು ಮನೆ, ನಿವೇಶನಕ್ಕಾಗಿ ಆಗ್ರಹಿಸಿ ಜೈಲ್ ಭರೋ ಚಳುವಳಿಯಲ್ಲಿ ಜಿಲ್ಲಾಧಿಕಾರಿ ಕಛೇರಿಗೆ ಮುತ್ತಿಗೆ ಹಾಕಲು ಮುಂದಾದ ಸಾವಿರಾರು ಜನ ನಾನಾ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ ಘಟನೆ ನಡೆಯಿತು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಬೃಹತ್ ಪ್ರತಿಭಟನೆಯು ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಛೇರಿ ಆವರಣಕ್ಕೆ ತೆರಳಿದರು. ಲಕ್ಷ್ಮಣ್ ರೇಖೆ ಹಾಕಿದಂತೆ ಪೊಲೀಸರು ಮೊದಲೆ ಬ್ಯಾರಿಕೇಡ್ ಹಾಕಿ ನಿಗದಿತ ಸ್ಥಳದಲ್ಲಿ ಪ್ರತಿಭಟನೆ ಮಾಡಲು ಸೂಚಿಸಿದರು. ಆದರೇ ವಿವಿಧ ಸಂಘಟನೆಯ ಮುಖಂಡರು ಡಿಸಿ ಕಛೇರಿ ಬಳಿ ಬಂದು ಘೋಷಣೆ ಕೂಗಲು ಯತ್ನಿಸಿದಾಗ ಪೊಲೀಸ್ ಅಧಿಕಾರಿಗಳು ಕೂಡಲೇ ಬಂದಿಸಲು ಆದೇಶ ನೀಡಿದರು. ಈ ವೇಳೆ ಕೆಲ ಸಂಘಟನೆಯ ಮುಖಂಡರು ಬರಲು ನಿರಾಕರಿಸಿದಾಗ ಮಹಿಳಾ ಪೊಲೀಸರು ಅವರನ್ನು ಬಲವಂತವಾಗಿ ಕರೆದೊಯ್ದರು. ಈ ವೇಳೆ ಸಂಘಟನೆಯ ಮುಖಂಡರಾದ ವರಲಕ್ಷ್ಮಿ ಅವರು ಪೊಲೀಸರ ವಿರುದ್ಧ ಆಕ್ರೋಶವ್ಯಕ್ತಪಡಿಸಿ ಪ್ರತಿಭಟನೆಗೆ ಮುಂದಾಗಿ ಓರ್ವ ಮಹಿಳಾ ಪೊಲೀಸ್ ಪೇದೆಯ ತಲೆ ಕೂದಲನ್ನು ಎಳೆಯಲಾಯಿತು. ತಕ್ಷಣ ಸ್ಥಳದಲ್ಲಿದ್ದ ಪೊಲೀಸರು ಆಕೆಯ ಮೇಲೆ ಹಿಗ್ಗಾ ಮುಗ್ಗ ಥಳಿಸಿದರು. ಬಸ್, ಟೆಂಪೋ ಸೇರಿದಂತೆ ಇತರೆ ವಾಹನಗಳಲ್ಲಿ ಸಾವಿರಾರು ಜನ ಮಹಿಳೆಯರನ್ನು ನಗರದ ಪೊಲೀಸ್ ವಸತಿಗೃಹಕ್ಕೆ ಕರೆ ತಂದರು. ಶೇಕಡ 90 ಭಾಗ ಮಹಿಳೆಯರೇ ಹೆಚ್ಚು ಪೊಲೀಸರ ಅತಿಥಿಯಾದವರು.
ಬಡ ರೈತರಿಗೆ, ಕಾರ್ಮಿಕರಿಗೆ, ದಲಿತರಿಗೆ, ಬಡವರಿಗೆ ಮತ್ತು ವಸತಿ ರಹಿತರಿಗೆ ಭೂಮಿ ಮತ್ತು ಮನೆ, ನಿವೇಶನಕ್ಕಾಗಿ ಆಗ್ರಹಿಸಿ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಹೋರಾಟ ನಡೆಸಲಾಗುತ್ತಿದ್ದು, ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು. ಪ್ರತಿಯೊಬ್ಬ ನಾಗರೀಕರಿಗೂ ಅಗತ್ಯವಿರುವ ವಸತಿ, ಆಹಾರ, ಶಿಕ್ಷಣ, ಆರೋಗ್ಯ, ಉದ್ಯೋಗ ಇಂತಹ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವ ಅವಕಾಶಗಳನ್ನು ಒದಗಿಸಿಕೊಡುವುದು ಯಾವುದೇ ನಾಗರೀಕ ಸರ್ಕಾರದ ಜವಾಬ್ಧಾರಿಯಾಗಿದೆ. ಆದರೆ ಸರ್ಕಾರಗಳು ತನ್ನ ಈ ಹೊಣೆಗಾರಿಕೆಗಳನ್ನು ಸರಿಯಾಗಿ ನಿರ್ವಹಿಸದ ಕಾರಣವಾಗಿ ಬಹುತೇಕ ಜನರು ತಮ್ಮ ಹಾಗೂ ತಮ್ಮ ಕುಟುಂಬದ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಅತ್ಯಂತ ಹೆಚ್ಚು ಕಷ್ಟಪಡಬೇಕಾದ ಪರಿಸ್ಥಿತಿಯಿದೆ ಎಂದರು. ಇಂದು ಎಲ್ಲಾ ರೀತಿಯ ಅಗತ್ಯ ವಸ್ತುಗಳು ಹಾಗೂ ಸೇವೆಗಳು ಅತ್ಯಂತ ದುಬಾರಿಯಾಗಿವೆ. ಬಹುತೇಕ ಜನರು ತಮ್ಮ ದುಡಿಮೆಯಿಂದ ಬರುವ ಅತ್ಯಲ್ಪ ಆದಾಯದಲ್ಲಿ ಈ ಎಲ್ಲಾ ಅಗತ್ಯಗಳನ್ನು ಪೂರೈಸಿಕೊಳ್ಳುವುದೇ ಬಹಳ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ವಾಸಕ್ಕಾಗಿ ಸ್ವಂತವಾದ ಒಂದು ಸಣ್ಣ ಮನೆಯನ್ನಾದರೂ ಮಾಡಿಕೊಳ್ಳಬೇಕೆನ್ನುವ ಬಹುತೇಕ ಜನರ ಕನಸು ನನಸಾಗದೆ ಬಾಡಿಗೆ ಮನೆಗಳಲ್ಲಿ ಅಥವಾ ಇಕ್ಕಟ್ಟಾದ ಚಿಕ್ಕ ಮನೆಗಳಲ್ಲಿ ಮೂರು ನಾಲ್ಕು ಕುಟುಂಬಗಳು ಬದುಕಬೇಕಾದ ಅನಿವಾರ್ಯ ಪರಿಸ್ಥಿತಿಯಿದೆ. ತಮ್ಮ ದುಡಿಮೆಯಿಂದ ಬರುವ ಅತ್ಯಲ್ಪ ಆದಾಯದಲ್ಲಿ ಜೀವನ ಸಾಗಿಸುವುದೇ ಕಷ್ಟವಾಗಿರುವಾಗ ಅನಿವಾರ್ಯವಾಗಿ ಬಾಡಿಗೆ ಮನೆಗಳಲ್ಲಿ ಬದುಕುತ್ತಾ ತಮ್ಮ ದುಡಿಮೆಯ ಬಹುಪಾಲು ಹಣವನ್ನು ಬಾಡಿಗೆ ಕಟ್ಟಲು ಬಳಸಬೇಕಾದ ಅನಿವಾರ್ಯ ಸಂದರ್ಭದಲ್ಲಿ ಬಹುತೇಕರು ಬದುಕುತ್ತಿದ್ದಾರೆ ಎಂದು ಹೇಳಿದರು. ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವವರ ಸಮಸ್ಯೆ ತೀವ್ರ ಗಂಭೀರ ಸ್ವರೂಪದ್ದಾಗಿದೆ. ಆಯಾ ಗ್ರಾಮ ಪಂಚಾಯತಿ ಮತ್ತು ನಗರದ ಮುನಿಸಿಪಾಲಿಟಿಗಳ ಕೆಲಸವೇ ಅಲ್ಲಿ ವಾಸವಾಗಿರುವ ನಾಗರೀಕರಿಗೆ ಅಗತ್ಯವಿರುವ ವಸತಿ, ಕುಡಿಯುವ ನೀರು, ನೈರ್ಮಲ್ಯ ಹಾಗೂ ಇನ್ನಿತರೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವುದೇ ಆಗಿದೆ. ಆದರೆ, ಇಂದು ಗ್ರಾಮ ಪಂಚಾಯತಿಗಳು ಹಾಗೂ ಮುನಿಸಿಪಾಲಿಟಿಗಳು ಅಲ್ಲಿ ವಾಸಿಸುತ್ತಿರುವ ನಾಗರೀಕರಿಗೆ ಅಗತ್ಯವಿರುವಷ್ಟು ಮನೆ, ನಿವೇಶನ ನೀಡಲು ವಿಫಲವಾಗಿವೆ. ಇದಕ್ಕೆ ಕಾರಣ ನಿವೇಶನ ನೀಡಲು ಅಗತ್ಯವಿರುವಷ್ಟು ಭೂಮಿ ಹಾಗೂ ಸಂಪನ್ಮೂಲದ ಕೊರತೆ, ಇರುವುದನ್ನು ಸಮರ್ಪಕವಾಗಿ ಹಂಚುವಲ್ಲಿ ತಾರತಮ್ಯ, ಭ್ರಷ್ಟಾಚಾರ ಮಾಡುವುದು ಹಾಗೂ ರಿಯಲ್ ಎಸ್ಟೇಟ್ ಲಾಭಿಯಿಂದಾಗಿ ಬಹುತೇಕ ಬಡವರಿಗೆ ಸ್ವಂತ ಮನೆ ಎನ್ನುವುದು ಗಗನ ಕುಸುಮವಾಗಿದೆ ಎಂದರು.
ಈ ಸಮಸ್ಯೆಗಳಿಗೆ ಇನ್ನೊಂದು ಪ್ರಮುಖ ಕಾರಣ ಸರ್ಕಾರಗಳು ಅನುಸರಿಸುತ್ತಿರುವ ಕೆಲವು ನೀತಿಗಳಿಂದಾಗಿ ಬಡವರಿಗೆ, ವಸತಿ ರಹಿತರಿಗೆ ಮನೆ ಕಟ್ಟಿಕೊಳ್ಳಲು ಸಿಗಬೇಕಿದ್ದ ಭೂಮಿ ಕೆಲವೇ ಶ್ರೀಮಂತರ ಹಾಗೂ ಉದ್ಯಮಿಗಳ ಪಾಲಾಗುತ್ತಿದೆ. ಈ ಪರಿಸ್ಥಿತಿ ಬದಲಾವಣೆ ಆಗದ ಹೊರತು ಎಲ್ಲಾ ಬಡವರಿಗೆ ವಸತಿ ರಹಿತರಿಗೆ ಮನೆ - ನಿವೇಶನ ಕನಸಾಗಿಯೇ ಉಳಿಯಲಿದೆ. ಹಾಗೂ ಈಗಾಗಲೇ ನಗರ ಹಾಗೂ ಗ್ರಾಮಂತರ ಪ್ರದೇಶಗಳಲ್ಲಿ ಸರ್ಕಾರಿ ಜಾಗಗಳಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿರುವವರಿಗೆ ಕಾನೂನುಬದ್ಧವಾದ ಹಕ್ಕುಪತ್ರಗಳೂ ಸಿಗದಂತಾಗಿದೆ. ಈ ಹಿನ್ನೆಲೆಯಲ್ಲಿ ಮನೆ, ನಿವೇಶನ ರಹಿತರ ಹೋರಾಟ ಸಮಿತಿ ಹಾಗೂ ಸಿಐಟಿಯು ಮತ್ತು ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ರಾಜ್ಯಾದ್ಯಂತ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿರುವ ವಸತಿ ರಹಿತರನ್ನು ಸಂಘಟಿಸಿ ಅವರಿಂದ ಸಂಬಂಧಪಟ್ಟ ಗ್ರಾಮ ಪಂಚಾಯತಿ ಹಾಗೂ ಮುನಿಸಿಪಾಲಿಟಿಗಳಿಗೆ ಅರ್ಜಿ ಹಾಕಿಸಿ ಸರ್ಕಾರ ಹಾಗೂ ಗ್ರಾಮ ಪಂಚಾಯತಿ ಮತ್ತು ಮುನಿಸಿಪಾಲಿಟಿಗಳ ಮೇಲೆ ಒತ್ತಡ ತಂದು ಎಲ್ಲಾ ಬಡ, ವಸತಿ ರಹಿತರಿಗೆ ಸಮರ್ಪಕವಾದ ಮನೆ, ನಿವೇಶನ ಹಾಗೂ ಹಕ್ಕುಪತ್ರ ಸಿಗುವವರೆಗೂ ನಿರಂತರವಾದ ಹೋರಾಟ ನಡೆಸುವುದಾಗಿ ತಿಳಿಸಿದರು. ಜೈಲ್ ಭರೋ ಚಳುವಳಿಯಲ್ಲಿ ಬಂಧಿತರಾದ ಸಂಘಟನೆಯ ಮುಖಂಡರಾದ ಸಿಐಟಿಯುವ ಸಂಘಟನೆಯ ಜಿಲ್ಲಾಧ್ಯಕ್ಷ ಧರ್ಮೇಶ್, ಉಪಾಧ್ಯಕ್ಷ ಸತ್ಯನಾರಾಯಣ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಲ್. ರಾಘವೇಂದ್ರ, ಜಿಲ್ಲಾ ಕಾರ್ಯದರ್ಶಿ ಕೆ.ಎಸ್. ಮಂಜುನಾಥ್, ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷರಾದ ಎಚ್.ಆರ್. ನವೀನ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತಕುಮಾರ್, ಅರವಿಂದ, ಎಸ್.ಫ್.ಐ. ಸಂಘಟನೆಯ ಫೃಥ್ವಿ ಇತರರು ಇದ್ದರು.