ತುರ್ತುಪರಿಸ್ಥಿತಿಯಲ್ಲಿ ಶ್ರೀಸಾಮಾನ್ಯ

Update: 2016-11-18 18:28 GMT

ಎಪ್ಪತ್ತರ ದಶಕದಲ್ಲಿ ಆಗಿನ ಪ್ರಧಾನಿ ಇಂದಿರಾಗಾಂಧಿಯವರು ತುರ್ತು ಪರಿಸ್ಥಿತಿ ಹೇರಿದ ವಿಷಯವನ್ನು ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಆಗಾಗ್ಗೆ ಕಾಂಗ್ರೆಸನ್ನು ವ್ಯಂಗ್ಯ ಮಾಡುತ್ತಿರುತ್ತಾರೆ. ಆದರೆ ಎರಡು ವರ್ಷಗಳ ಹಿಂದೆ ತುರ್ತು ಪರಿಸ್ಥಿತಿಯ ಸಂದರ್ಭವನ್ನು ನೆನೆಯುವಾಗ ಬಿಜೆಪಿಯ ಮುಖಂಡರಾಗಿದ್ದ ಎಲ್.ಕೆ.ಅಡ್ವಾಣಿಯವರು ಒಂದು ಎಚ್ಚರಿಕೆಯನ್ನು ಕೊಟ್ಟಿದ್ದರು.

‘‘ಈ ದೇಶ ಮತ್ತೆ ತುರ್ತು ಪರಿಸ್ಥಿಯನ್ನು ಎದುರಿಸುವ ಸಂದರ್ಭ ಬರಬಹುದು’’ ಎನ್ನುವುದಾಗಿತ್ತು ಅದು. ಪ್ರಧಾನಿ ಮೋದಿಯವರು ಇಡುತ್ತಿರುವ ಸರ್ವಾಧಿಕಾರಿ ಹೆಜ್ಜೆಗಳನ್ನು ಗಮನಿಸಿ ಆ ಹಿರಿಯ ನಾಯಕರು ಈ ಆತಂಕವನ್ನು ವ್ಯಕ್ತಪಡಿಸಿದ್ದರು. ಮೋದಿಯ ಅಭಿಮಾನಿಗಳ ಅತೀವ ಭಕ್ತಿ, ನಂಬಿಕೆ ಹೇಗೆ ಒಬ್ಬ ನಾಯಕನನ್ನು ಪ್ರಜಾಸತ್ತೆಯ ವ್ಯಾಪ್ತಿಯಲ್ಲೇ ಸರ್ವಾಧಿಕಾರಿಯಾಗಿ ಪರಿವರ್ತನೆ ಮಾಡಬಹುದು ಎನ್ನುವುದನ್ನು ಅವರು ಇತಿಹಾಸದಿಂದ ಅರಿತುಕೊಂಡಿದ್ದರು. ಇಂದಿರಾ ಗಾಂಧಿಯವರ ಅಧಿಕೃತ ತುರ್ತು ಪರಿಸ್ಥಿತಿ ಮತ್ತು ನರೇಂದ್ರ ಮೋದಿಯವರ ಅನಧಿಕೃತ ಈ ಆರ್ಥಿಕ ತುರ್ತು ಪರಿಸ್ಥಿತಿಯ ಕುರಿತಂತೆ ಒಂದಿಷ್ಟು ತಾಳೆ ಹಾಕಲು ಇದು ಸುಸಂದರ್ಭ. ಇಂದಿರಾ ಗಾಂಧಿಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ತಳಮಟ್ಟದ ಜನಸಾಮಾನ್ಯರಿಗೆ ಕೆಲವು ಒಳಿತುಗಳಾಗಿರುವುದನ್ನು ಹಲವು ನಾಯಕರು, ಚಿಂತಕರು ಒಪ್ಪಿಕೊಳ್ಳುತ್ತಾರೆ. ಇಂದಿರಾ ಗಾಂಧಿ ತನ್ನ ಸರ್ವಾಧಿಕಾರಿ ಮನಸ್ಥಿತಿಯಿಂದಲೇ ಬ್ಯಾಂಕ್ ರಾಷ್ಟ್ರೀಕರಣವನ್ನು ಜಾರಿಗೊಳಿಸಿದ್ದರು. ಆದರೆ ಅದು ದೇಶದ ಜನಸಾಮಾನ್ಯರಿಗೆ ಪೂರಕವಾಗಿತ್ತು. ದೊಡ್ಡವರಿಗಷ್ಟೇ ಅದರಿಂದ ಆಘಾತವಾಗಿತ್ತು. ಆದುದರಿಂದಲೇ ಇಂದಿರಾ ಗಾಂಧಿ ವಿರುದ್ಧ ಸಂಚುಗಳು ತೀವ್ರಗೊಂಡವು. ಇಂದಿರಾ ಗಾಂಧಿ ತನ್ನ ಭೂಸುಧಾರಣೆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ತುರ್ತು ಪರಿಸ್ಥಿತಿ ನೀಡಿರುವ ಕೊಡುಗೆ ಸಣ್ಣದೇನೂ ಅಲ್ಲ. ‘ಉಳುವವನೇ ಹೊಲದೊಡೆಯ’ ಎನ್ನುವ ಘೋಷಣೆಯನ್ನು ಜಾರಿಗೆ ತಂದು, ಜಮೀನ್ದಾರರಿಂದ ಭೂಮಿಯನ್ನು ಕಿತ್ತುಕೊಂಡು ಶ್ರಮ ಪಡುವ ವ್ಯಕ್ತಿಗೆ ಹಂಚಿದ್ದು ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ. ತುರ್ತುಪರಿಸ್ಥಿತಿಯು ತೀರಾ ಜನಸಾಮಾನ್ಯರ ಮೇಲೆ ಯಾವ ಪರಿಣಾಮವನ್ನೂ ಬೀರಿರಲಿಲ್ಲ. ಸಂಜಯ್ ಗಾಂಧಿ ‘ಕುಟುಂಬ ಯೋಜನೆ’ಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಹೊರಟು ಕೆಲವು ಅವಾಂತರಗಳನ್ನೂ ಮಾಡಿ ಹಾಕಿದರು. ಆದರೆ ಜನಪರ ಕಾರ್ಯಗಳಾದವು ಎಂಬ ಕಾರಣಕ್ಕಾಗಿ ಸರ್ವಾಧಿಕಾರವನ್ನು ಒಪ್ಪುವುದು ಅತ್ಯಂತ ಅಪಾಯಕಾರಿ. ಪ್ರಜಾಸತ್ತೆಯ ದಮನದ ಆ ಕಾಲದಲ್ಲಿ ಅತ್ಯಂತ ತೊಂದರೆಗಳನ್ನು ಅನುಭವಿಸಿದ್ದು ವಿವಿಧ ರಾಜಕೀಯ ನಾಯಕರು, ಹೋರಾಟಗಾರರು, ಪತ್ರಕರ್ತರು ಮೊದಲಾದವರು.

ಇಂದಿರಾ ಗಾಂಧಿ ತನ್ನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾದರು ಎನ್ನುವುದನ್ನು ಪಕ್ಕಕ್ಕಿಡೋಣ. ಆದರೆ ಗರೀಬಿ ಹಟಾವೋ, ಭೂಸುಧಾರಣೆ, ಬ್ಯಾಂಕ್ ರಾಷ್ಟ್ರೀಕರಣ ಇವೆಲ್ಲವೂ ಜನಸಾಮಾನ್ಯರಿಗಾಗಿ ಅವರು ಹಮ್ಮಿಕೊಂಡಿದ್ದ ಕಾರ್ಯಕ್ರಮಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಇದೀಗ ನರೇಂದ್ರ ಮೋದಿಯವರ ಅಘೋಷಿತ ಆರ್ಥಿಕ ತುರ್ತುಪರಿಸ್ಥಿತಿಯನ್ನು ತೆಗೆದುಕೊಳ್ಳೋಣ. ಮುಳುಗುತ್ತಿರುವ ಬ್ಯಾಂಕುಗಳನ್ನು ಎತ್ತಿ ನಿಲ್ಲಿಸಲು ಜನಸಾಮಾನ್ಯರು ದೈನಂದಿನ ಜೀವನದಲ್ಲಿ ಸಹಜವೆಂಬಂತೆ ಉಪಯೋಗಿಸುತ್ತಿದ್ದು ನೋಟುಗಳನ್ನು ಮೋದಿ ಏಕಾಏಕಿ ನಿಷೇಧಿಸಿದ್ದಾರೆ. ಮತ್ತು ಇದಕ್ಕೆ ‘ಕಪ್ಪು ಹಣದ ವಿರುದ್ಧ ದಾಳಿ’ ಎಂಬ ಹೆಸರನ್ನೂ ಕೊಟ್ಟಿದ್ದಾರೆ. ಜನರು ದೇಶಕ್ಕಾಗಿ ಕೆಲವು ತಿಂಗಳುಗಳ ಕಾಲ ತ್ಯಾಗ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಕಪ್ಪುಹಣವಿರುವುದು ಶ್ರೀಮಂತರ ಬಳಿ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಅದಾನಿ, ಅಂಬಾನಿಯಂತಹ ಉದ್ಯಮಪತಿಗಳು, ಸಿನೆಮಾ ತಾರೆಯರು, ಕ್ರಿಕೆಟ್ ತಾರೆಯರು, ರಾಜಕೀಯ ನಾಯಕರು ತಮ್ಮ ಹಣವನ್ನು ಸ್ವಿಸ್ ಬ್ಯಾಂಕಿನಲ್ಲಿ ಭದ್ರ ಪಡಿಸಿದ್ದಾರೆ. ಉಳಿದಂತೆ ಅವುಗಳನ್ನು ಕಪ್ಪು ಸಂಪತ್ತಾಗಿ ಪರಿವರ್ತನೆಗೊಳಿಸಿದ್ದಾರೆ. ಅವರ ಕಿಸೆಯಲ್ಲಿ ನೂರು ರುಪಾಯಿಯ ನೋಟುಗಳೂ ಇಲ್ಲ. ಅವರ ಅಂತಾರಾಷ್ಟ್ರೀಯ ವ್ಯವಹಾರಗಳೆಲ್ಲ ಡಾಲರ್‌ಗಳ ಮೂಲಕ ನಡೆಯುತ್ತದೆ. ನರೇಂದ್ರ ಮೋದಿ ನೋಟು ನಿಷೇಧವನ್ನು ಘೋಷಣೆ ಮಾಡಿದ ಬೆನ್ನಿಗೇ ಅದನ್ನು ಐಶ್ವರ್ಯ ರೈ, ಸಲ್ಮಾನ್‌ಖಾನ್ ಮೊದಲಾದ ಸಿನೆಮಾ ತಾರೆಯರೆಲ್ಲ ಸ್ವಾಗತಿಸಿದ್ದಾರೆ. ಆದರೆ ಇಂದು ಕಂಗಾಲಾಗಿ ಬೀದಿಗೆ ಬಿದ್ದಿರುವುದು ಸಣ್ಣಮಟ್ಟದ ಸ್ಥಳೀಯ ಉದ್ಯಮಿಗಳು, ಕೃಷಿ ಉದ್ಯಮಿಗಳು ಮೊದಲಾದವರು. ಅಷ್ಟೇ ಅಲ್ಲ, ದಿನಕ್ಕೆ 500 ರೂ. ದುಡಿಯುವ ಕೂಲಿಕಾರ್ಮಿಕರೂ ಸಂಕಟದಲ್ಲಿದ್ದಾರೆ. ಇಂದಿರಾ ಗಾಂಧಿಯ ತುರ್ತುಪರಿಸ್ಥಿತಿಯಲ್ಲಿ ಜನಸಾಮಾನ್ಯರಿಗೆ ಒಳಿತಾದರೆ, ನರೇಂದ್ರ ಮೋದಿಯ ತುರ್ತುಪರಿಸ್ಥಿತಿಯಲ್ಲಿ ಬ್ಯಾಂಕುಗಳಿಗೆ ಒಳಿತಾಗಿದೆ. ಮಲ್ಯ ಸೇರಿದಂತೆ 63 ಬೃಹತ್ ಉದ್ಯಮಿಗಳ 7000 ಕೋಟಿಗೂ ಅಧಿಕ ಹಣವನ್ನು ಬ್ಯಾಂಕುಗಳು ಕೈ ಬಿಟ್ಟಿವೆ. ಇನ್ನಷ್ಟು ಬೃಹತ್ ಉದ್ಯಮಿಗಳು ಬ್ಯಾಂಕ್‌ಗಳನ್ನು ಮುಳುಗಿಸಲು ಕಾದು ಕುಳಿತಿದ್ದಾರೆ.

ಹೀಗೆ ಇಡೀ ಬ್ಯಾಂಕ್ ವ್ಯವಸ್ಥೆ ಮುಳುಗುವ ಸ್ಥಿತಿಯಲ್ಲಿದ್ದಾಗ, ಕಪ್ಪು ಹಣದ ಹೆಸರಲ್ಲಿ ಜನಸಾಮಾನ್ಯರ ಜೇಬಿಗೆ ನರೇಂದ್ರ ಮೋದಿಯವರು ಕೈ ಹಾಕಿದ್ದಾರೆ. ಜನಸಾಮಾನ್ಯರು ತಮ್ಮ ಎಲ್ಲ ದುಡ್ಡನ್ನು ತಂದು ಬ್ಯಾಂಕಿಗೆ ಒಪ್ಪಿಸಬೇಕು. ಆದರೆ ಅದನ್ನು ತಕ್ಷಣ ವಾಪಸು ತೆಗೆಯಬಾರದು. ಇಂತಹದೊಂದು ವ್ಯವಸ್ಥಿತ ತಂತ್ರವನ್ನು, ಯೋಜನೆಯನ್ನು ರೂಪಿಸಿಯೇ ‘ನೋಟು ನಿಷೇಧ’ ಘೋಷಿಸಲಾಗಿದೆ. ಮೋದಿಯ ನೋಟು ನಿಷೇಧದಿಂದ ಅಂಬಾನಿ, ಅದಾನಿಗಳ ಕೂದಲೂ ಕೊಂಕಿಲ್ಲ. ಹಾಗೆಯೇ ಬಿಜೆಪಿ ಮತ್ತು ಆರೆಸ್ಸೆಸ್ ಸಂಘಟನೆಗಳು, ಅವರ ಮಿತ್ರರು ಈ ನಿಷೇಧವನ್ನು ಮೊದಲೇ ತಿಳಿದುಕೊಂಡಿದ್ದಾರೆ ಮತ್ತು ತಮ್ಮ ಹಣಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದಾರೆ ಎಂಬ ಆರೋಪಗಳೂ ಇವೆ. ಮೋದಿಯ ಈ ನಿಷೇಧದಿಂದ ಸಣ್ಣ ಪುಟ್ಟ ಗುಡಿಕೈಗಾರಿಕೆಗಳು, ಉದ್ಯಮಗಳು ಸಂಪೂರ್ಣ ನೆಲಕಚ್ಚಿ ಕೂತಿವೆ. ಎಲ್ಲರೂ ಕಾರ್ಡ್‌ಗಳನ್ನು ಬಳಸಿ ಎನ್ನುವ ಮೋದಿಯ ಘೋಷಣೆ, ಬೀದಿಯಲ್ಲಿ ತರಕಾರಿ, ಮೀನು ಮಾರುವ ಹೆಂಗಸರ ಹೊಟ್ಟೆಗೆ ಒದ್ದಂತಿದೆ. ಸಣ್ಣ ಪುಟ್ಟ ಹೊಟೇಲುಗಳನ್ನು, ಅಳಿದುಳಿದ ದಿನಸಿ ಅಂಗಡಿಗಳನ್ನೆಲ್ಲ ಶಾಶ್ವತ ಮುಚ್ಚಿಸಿ, ಜನರು ಮಾಲ್‌ಗಳಿಗೆ, ಕಾಫಿ ಶಾಪ್‌ಗಳಿಗೆ ಹೋಗಲು ರೂಪಿಸಿದ ಯೋಜನೆ ಇದು. ಇಂದು ಮೇಲ್ಮಧ್ಯಮ ವರ್ಗದವರು ಬೇರೆ ಬೇರೆ ಉದ್ಯಮಗಳಿಗೆ ಹೂಡಲು ತಂದಿಟ್ಟ ಹಣವನ್ನೆಲ್ಲ ಅನಿವಾರ್ಯವಾಗಿ ಬ್ಯಾಂಕುಗಳಿಗೆ ಒಪ್ಪಿಸಬೇಕಾಗಿರುವುದರಿಂದ ಅರ್ಥವ್ಯವಸ್ಥೆ ಸಂಪೂರ್ಣ ಎಕ್ಕುಟ್ಟಿ ಹೋಗುತ್ತಿದೆ. ಸರಿ. ಜನಸಾಮಾನ್ಯರು ಬಚ್ಚಿಟ್ಟ ಹಣವೆಲ್ಲ ಬ್ಯಾಂಕ್‌ಗಳ ತಿಜೋರಿಗೆ ಬಂದು ಬಿತ್ತು ಎಂದಿಟ್ಟುಕೊಳ್ಳೋಣ. ಇನ್ನೊಂದು ತಿಂಗಳಲ್ಲಿ ಬಂದು ಬಿದ್ದ ಹಣದ ಪ್ರಮಾಣವನ್ನು ಸರಕಾರ ಘೋಷಿಸಬಹುದು.

ಆದರೆ ಇದರಿಂದ ಶ್ರೀಸಾಮಾನ್ಯನಿಗೆ ಯಾವ ಲಾಭವಾಯಿತು? ಬ್ಯಾಂಕುಗಳು ಉದ್ಧಾರವಾದರೆ ಅದರಿಂದ ಶ್ರೀಸಾಮಾನ್ಯನಿಗೆ ಲಾಭವೇನು? ಬ್ಯಾಂಕುಗಳು ಸಾವಿರಾರು ಕೋಟಿ ಲೆಕ್ಕದಲ್ಲಿ ಸಾಲವನ್ನು ಕೊಡುವುದು ಕಾರ್ಪೊರೇಟ್ ದಣಿಗಳಿಗೆ ಮಾತ್ರ. ಅವರು ಹಣ ಪಡೆದು ಮತ್ತೆ ಮುಳುಗಿಸುತ್ತಾರೆ. ಮತ್ತೆ ಅದಕ್ಕೆ ಜನಸಾಮಾನ್ಯರು ದಂಡ ತೆರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಇಂದಿರಾ ಗಾಂಧಿ ಘೋಷಿಸಿದ್ದ ಅಧಿಕೃತ ತುರ್ತುಪರಿಸ್ಥಿತಿಗಿಂತಲೂ, ನರೇಂದ್ರ ಮೋದಿ ಘೋಷಿಸಿರುವ ಅನಧಿಕೃತ ತುರ್ತುಪರಿಸ್ಥಿತಿಯೇ ಅತ್ಯಂತ ಆಘಾತಕಾರಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News