×
Ad

ಆಸ್ಪತ್ರೆಗಳಲ್ಲಿ ಬಡರೋಗಿಗಳಿಗೆ ಔಷಧ ನೀಡಲು ನಿರಾಕರಿಸಿದರೆ ಕ್ರಮ: ಸಚಿವ ಕಾಗೋಡು

Update: 2016-11-19 23:41 IST


ಸಾಗರ, ನ.19: ಬಡರೋಗಿಗಳಿಗೆ ಅಗತ್ಯ ಔಷಧಗಳನ್ನು ಪೂರೈಕೆ ಮಾಡುವುದು ಆಸ್ಪತ್ರೆಯ ಮುಖ್ಯ ಕೆಲಸ ಎನ್ನುವುದನ್ನು ವೈದ್ಯರು ಮರೆಯಬಾರದು ಎಂದು ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು. ಇಲ್ಲಿನ ಉಪವಿಭಾಗೀಯ ಆಸ್ಪತ್ರೆಯಲ್ಲಿ ಶನಿವಾರ ಆರೋಗ್ಯ ರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಸ್ಪತ್ರೆಯಲ್ಲಿ ಅಗತ್ಯ ಔಷಧಗಳಿದ್ದರೂ ಕೆಲವು ವೈದ್ಯರು ಹೊರಗೆ ಚೀಟಿ ಬರೆದು ಕೊಡುತ್ತಿದ್ದಾರೆ ಎನ್ನುವುದು ನನ್ನ ಗಮನಕ್ಕೆ ಬಂದಿದೆ. ಇದು ಮೊದಲು ನಿಲ್ಲಬೇಕು. ಒಂದೊಮ್ಮೆ ಬಡ ರೋಗಿಗಳಿಗೆ ಬೇಕಾದ ಔಷಧ ನಮ್ಮ ಆಸ್ಪತ್ರೆಯಲ್ಲಿ ಇಲ್ಲದೆ ಹೋದಲ್ಲಿ, ಯೂಸರ್ಸ್‌ ಚಾರ್ಜ್‌ನಲ್ಲಿ ತರಿಸಿಕೊಡಿ ಎಂದು ಸೂಚನೆ ನೀಡಿದರು. ಈಚೆಗೆ ಹಾವು ಕಡಿತಕ್ಕೆ ಒಳಗಾದ ಬಾಲಕನ ಚಿಕಿತ್ಸೆ ಸಂದರ್ಭದಲ್ಲಿ ಗ್ರಾಮಸ್ಥರು ಬಂದು ಗಲಾಟೆ ಮಾಡಿರುವುದು ನನ್ನ ಗಮನಕ್ಕೆ ಬಂದಿದೆ. ಗ್ರಾಮಸ್ಥರು ಆಸ್ಪತ್ರೆಯಲ್ಲಿ ಔಷಧವಿದ್ದರೂ ಅದನ್ನು ಹೊರಗಿನಿಂದ ತರುವಂತೆ ಕರ್ತವ್ಯದಲ್ಲಿದ್ದ ವೈದ್ಯರು ಚೀಟಿ ನೀಡಿದ್ದಾರೆ ಎನ್ನುವ ದೂರು ಇದೆ. ಈ ಬಗ್ಗೆ ಇಲಾಖೆ ಮಟ್ಟದ ತನಿಖೆ ನಡೆಸಿ, ತಪ್ಪಿತಸ್ಥರು ಯಾರು ಎನ್ನುವುದನ್ನು ಪತ್ತೆ ಹಚ್ಚಲಾಗುತ್ತದೆ ಎಂದು ಹೇಳಿದರು. ವೈದ್ಯರು ಶಕ್ತಿಮೀರಿ ರೋಗಿಗಳನ್ನು ಬದುಕಿಸುವ ಪ್ರಯತ್ನ ಮಾಡುತ್ತಾರೆ. ವೈದ್ಯರು ದೇವರಲ್ಲ. ಕೆಲವೊಮ್ಮೆ ಸಣ್ಣಪುಟ್ಟ ಲೋಪಗಳು ನಡೆಯುತ್ತವೆೆ. ಇದನ್ನೆ ಕಾರಣವಾಗಿ ಇರಿಸಿಕೊಂಡು ವೈದ್ಯಸಿಬ್ಬಂದಿ ಮೇಲೆ ಹಲ್ಲೆ ಮಾಡುವುದು, ಆಸ್ಪತ್ರೆಯ ವಸ್ತುಗಳನ್ನು ನಾಶ ಮಾಡುವಂತಹ ಕೃತ್ಯಗಳು ನಡೆಯಬಾರದು. ಇಂತಹವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ನಮ್ಮಲ್ಲಿ ಒಂದು ಕಲ್ಪನೆ ಇದೆ. ಹಾವು ಕಚ್ಚಿದಾಗ ನಾಟಿ ಔಷಧಿ ಕೊಡಿಸುತ್ತಾರೆ. ಅಲ್ಲಿ ರೋಗಿ ಗುಣವಾಗದೆ ಇದ್ದರೆ ಆಮೇಲೆ ಆಸ್ಪತ್ರೆಗೆ ಕರೆದುಕೊಂಡು ಬರುತ್ತಾರೆ. ವಿಷ ದೇಹವ್ಯಾಪಿಸಿದಾಗ ರೋಗಿಯನ್ನು ಬದುಕಿಸುವುದು ಕಷ್ಟವಾಗುತ್ತದೆ. ಹಾವು ಕಚ್ಚಿದ ಸಂದರ್ಭದಲ್ಲಿ ನೀಡುವ ಚುಚ್ಚುಮದ್ದು ಆಸ್ಪತ್ರೆಯಲ್ಲಿ ಸಂಗ್ರಹವಿದೆ. ಪೋಷಕರು ಪ್ರಥಮ ಚಿಕಿತ್ಸೆಯನ್ನು ಆಸ್ಪತ್ರೆಯಲ್ಲಿಯೇ ಕೊಡಿಸಿ ಎಂದು ಸಚಿವರ ಮನವಿ ಮಾಡಿದರು. ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ನಗರಸಭೆ ಅಧ್ಯಕ್ಷೆ ಉಷಾ ಎನ್., ಜಿಪಂ ಸದಸ್ಯೆ ಅನಿತಾಕುಮಾರಿ, ತಾಪಂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ ಬರದವಳ್ಳಿ, ಸಿವಿಲ್ ಸರ್ಜನ್ ಡಾ. ಪ್ರಕಾಶ್ ಬೋಸ್ಲೆ, ತಾಲೂಕು ಆರೋಗ್ಯಾಧಿಕಾರಿ ಡಾ. ಕೆ.ಪಿ.ಅಚ್ಚುತ್, ಆರೋಗ್ಯ ರಕ್ಷಾ ಸಮಿತಿಯ ಜಯರಾಮ್, ಸರ್ಕಲ್ ಇನ್‌ಸ್ಪೆಕ್ಟರ್‌ಮಾದಪ್ಪ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಟಿ.ಪಿ.ರಮೇಶ್, ಪೌರಾಯುಕ್ತ ಚಂದ್ರಶೇಖರ್ ಬಿ.ಎನ್., ಡಾ. ಜಯಲಕ್ಷ್ಮೀ ಡಾ. ಪ್ರತಿಮಾ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News