ಸೋಲಾರ್ ಹಗರಣ: ಉಮ್ಮನ್ ಚಾಂಡಿಗೆ ಖುದ್ದು ಹಾಜರಿರಲು ಸೂಚನೆ

Update: 2016-11-22 11:03 GMT

ಬೆಂಗಳೂರು, ನವೆಂಬರ್ 22: ಸೋಲಾರ್ ಹಗರಣ ಪ್ರಕರಣದಲ್ಲಿ ಕೇರಳ ದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಖುದ್ದಾಗಿ ಕೋರ್ಟಿನಲ್ಲಿ ಹಾಜರಿರಬೇಕೆಂದು ಬೆಂಗಳೂರು ಅಡಿಶನಲ್ ಸಿಟಿ ಸಿವಿಲ್ ಕೋರ್ಟು ಅದೇಶಿಸಿದೆ. ಬೆಂಗಳೂರಿನ ಕೇರಳ ಮೂಲದ ಉದ್ಯಮಿ ಎಂ.ಕೆ. ಕುರುವಿಳ ಸಲ್ಲಿಸಿದ ದೂರಿನಲ್ಲಿ ತನಗೆ ವಿವರಣೆ ನೀಡಲು ಅನುಮತಿಸಬೇಕೆಂದು ವಿನಂತಿಸಿ ಉಮ್ಮನ್ ಚಾಂಡಿ ಸಲ್ಲಿಸಿದ ಅರ್ಜಿಯನ್ನು ಕೋರ್ಟು ಪರಿಗಣಿಸಿದೆ. ಸಾಕ್ಷ್ಯಗಳನ್ನು ಸಲ್ಲಿಸಲು ಡಿಸೆಂಬರ್ 13ಕ್ಕೆ ಅವರು ಕೋರ್ಟಿನಲ್ಲಿ ಸ್ವಯಂ ಹಾಜರಿರಬೇಕಿದೆ.

ಆದರೆ, ತನ್ನ ವಿರುದ್ಧದ ಆದೇಶಕ್ಕೆ ತಡೆ ನೀಡಬೇಕೆಂದು ಉಮ್ಮನ್ ಚಾಂಡಿ ಮಾಡಿಕೊಂಡಿದ್ದ ಮನವಿಯನ್ನು ಕೋರ್ಟು ಪುರಸ್ಕರಿಸಿಲ್ಲ. ತೀರ್ಪು ಜಾರಿಗೊಳಿಸಲು ಮೂರು ತಿಂಗಳ ಸಮಯ ಇರುವುದರಿಂದ ಜನವರಿ 24ರವರೆಗೂ ತಡೆ ಊರ್ಜಿತದಲ್ಲಿರುತ್ತದೆ ಎಂದು ನ್ಯಾಯಾಧೀಶ ಎನ್. ಆರ್ ಚನ್ನಕೇಶವ ಆದೇಶದಲ್ಲಿ ತಿಳಿಸಿದ್ದಾರೆ. 4,000 ಕೋಟಿ ರೂಪಾಯಿ ವೆಚ್ಚದ ಸೋಲಾರ್ ಪ್ಲಾಂಟ್ ಸ್ಥಾಪಿಸಲು ಸಹಾಯ ಮಾಡುವೆ ಎಂದು ಭರವಸೆ ನೀಡಿ ಉಮ್ಮನ್ ಚಾಂಡಿ ಮುಂತಾದವರು 1.35 ಕೋಟಿ ರೂಪಾಯಿ ವಂಚಿಸಿದ್ದಾರೆಂದು ಎಂ.ಕೆ. ಕುರುವಿಳ 2015 ಮಾರ್ಚ್ 23ರಂದು ಅಡ್ವೊಕೇಟ್ ಬಿ.ಎನ್. ಜಯದೇವ್‌ರ ಮೂಲಕ ಬೆಂಗಳೂರು ಅಡಿಶನಲ್ ಸಿಟಿ ಸಿವಿಲ್ ಕೋರ್ಟಿನಲ್ಲಿ ದೂರು ನೀಡಿದ್ದರು. ಉಮ್ಮನ್ ಚಾಂಡಿ ಸಹಿತ ಪ್ರಕರಣದ ಆರುಮಂದಿ ಆರೋಪಿಗಳು ಮೂರು ತಿಂಗಳಳೊಳಗೆ ಶೇ.12ರಷ್ಟು ಬಡ್ಡಿಯೂ ಸೇರಿ ಕುರುವಿಳಗೆ 1,60,85,700 ರೂಪಾಯಿ ಹಣ ನೀಡಬೇಕೆಂದು ಕೋರ್ಟು ತೀರ್ಪು ನೀಡಿತ್ತು. ಈ ತೀರ್ಪಿನ ಹಿನ್ನೆಲೆಯಲ್ಲಿ ಉಮ್ಮನ್ ಚಾಂಡಿ ತನ್ನ ವಾದವನ್ನು ಮಂಡಿಸಲು ಅವಕಾಶ ನೀಡಬೇಕೆಂದು ಅರ್ಜಿಸಲ್ಲಿಸಿದ್ದರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News