×
Ad

ಎತ್ತಿನಹೊಳೆ ಹೋರಾಟಗಾರರನ್ನು ಆಹ್ವಾನಿಸಿ ವಿಶೇಷ ಸಭೆ: ಸಚಿವ ಎಂ.ಬಿ. ಪಾಟೀಲ್

Update: 2016-11-23 23:46 IST

ಬೆಳಗಾವಿ, ನ.23: ಕೋಲಾರ, ಚಿಕ್ಕಬಳ್ಳಾಪೂರ, ರಾಮನಗರ, ಬೆಂಗಳೂರು ಗ್ರಾಮಾಂತರ ಪ್ರದೇಶಕ್ಕೆ ಕುಡಿಯುವ ನೀರನ್ನು ಪೂರೈಸಲು ಯೋಜಿಸಲಾಗಿರುವ ಎತ್ತಿನ ಹೊಳೆ ಯೋಜನೆ ಕುರಿತಂತೆ ಹೋರಾಟಗಾರರ ತಪ್ಪು ಕಲ್ಪನೆಯನ್ನು ಹೋಗಲಾಡಿಸಲು ಅಧಿವೇಶನದ ನಂತರ ವಿಶೇಷ ಸಭೆ ಕರೆದು ಮನವರಿಕೆ ಮಾಡಿಕೊಡಲಾಗುವುದೆಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.

ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿಯವರ ಪ್ರಶ್ನೆಗೆ ವಿಧಾನ ಪರಿಷತ್‍ನಲ್ಲಿ ಉತ್ತರ ನೀಡಿದ ಸಚಿವರು, ಎತ್ತಿನ ಹೊಳೆ ಯೋಜನೆ ಸಮಗ್ರ ಕುಡಿಯುವ ನೀರಿನ ಯೋಜನೆಯಾಗಿದ್ದು, ಈ ಯೋಜನೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಯಾವುದೇ ನಷ್ಠವಾಗುವುದಿಲ್ಲ. ಮಳೆಗಾಲದಲ್ಲಿ ಹರಿದು ಹೋಗುವ ವ್ಯರ್ಥ ನೀರನ್ನು ಬಳಸಿ ಅತ್ಯಂತ ಭೀಕರವಾದಂತಹ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುವ ಕೋಲಾರ, ಚಿಕ್ಕಬಳ್ಳಾಪೂರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ನೀರನ್ನು ಬಳಸಿಕೊಳ್ಳಲಾಗುತ್ತಿದೆ. ಈ ಯೋಜನೆಗೆ ಪರಿಷ್ಕೃತ ಮೊತ್ತ 12.912.36 ಕೋಟಿ ರೂ.ಗಳಾಗಿರುತ್ತದೆ. ಈ ಯೋಜನೆಯಿಂದ ಕೋಲಾರ, ಚಿಕ್ಕಬಳ್ಳಾಪೂರ, ತುಮಕೂರು, ಹಾಸನ, ಚಿಕ್ಕಮಗಳೂರು ಭಾಗದ 7 ಜಿಲ್ಲೆಯ 6557 ಗ್ರಾಮದ 68.35 ಲಕ್ಷ ಜನರಿಗೆ ಕುಡಿಯುವ ನೀರನ್ನು ಒದಗಿಸಲಾಗಿದೆ. ಈ ಯೋಜನೆಯನ್ನು 5 ಪ್ಯಾಕೇಜ್‍ಗಳಾಗಿ ವಿಂಗಡಿಸಿ ಕಾಮಗಾರಿ ನಿರ್ವಹಣೆಗೆ ಗುತ್ತಿಗೆ ಸಂಸ್ಥೆಗಳಿಗೆ ವಹಿಸಲಾಗಿದೆ. ಅಕ್ಟೋಬರ್ 2016 ಅಂತ್ಯದವರೆಗೆ 1825.43 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ ಎಂದು ವಿವರಿಸಿದರು.

ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಗೆ ಮಳೆಗಾಲದಲ್ಲಿ ಪ್ರವಾಹದಿಂದ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಮಾತ್ರ ಬಳಸಲಾಗುತ್ತದೆ. ಜೂನ್ ನಿಂದ ನವೆಂಬರ್ ಒಳಗಿನ ಮಳೆಗಾಲದ ಅವಧಿಯಲ್ಲಿ 24.01 ಟಿಎಂಸಿ ನೀರನ್ನು ಈ ಯೋಜನೆಗೆ ಬಳಸಲಾಗುವುದು. ಈ ನೀರಿನ ಬಳಕೆಯಿಂದ ಕೆಳಭಾಗದ ಜನರಿಗೆ ಯಾವುದೇ ತೊಂದರೆ, ನಷ್ಠವಾಗದಂತೆ ನೀರನ್ನು ಎತ್ತಿ ಪೂರ್ವಭಾಗದ ಬರಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಪೂರೈಸಲು ಯೋಜಿಸಲಾಗಿದೆ ಎಂದು ವಿವರಿಸಿದರು. 

ಎತ್ತಿನ ಹೊಳೆ ಯೋಜನೆಯಿಂದ ಕರಾವಳಿ ಭಾಗದ ಜನರು ಆತಂಕ ಪಡುವ ಅಗತ್ಯವಿಲ್ಲ. ಈ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಅಕ್ಟೋಬರ್ 2014 ರಂದು ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಸಂಸದರು, ಶಾಸಕರನ್ನು ಸಭೆಗೆ ಆಹ್ವಾನಿಸಿ ಯೋಜನೆಯ ಸಾಧಕ-ಬಾಧಕಗಳನ್ನು ಮನವರಿಕೆ ಮಾಡಿ ಕೊಡಲಾಗಿದೆ. ಪುನ: ಅಕ್ಟೋಬರ್ 2015 ರಂದು ಮಂಗಳೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವಿಧಾನ ಸಭಾ ಸದಸ್ಯರು, ನಿಗಮದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಯೋಜನೆಯ ಬಗ್ಗೆ ಸೂಕ್ತ ಮಾಹಿತಿ ನೀಡಲಾಗಿದೆ. ಎತ್ತಿನ ಹೊಳೆ ಯೋಜನೆಯನ್ನು ವಿರೋಧಿಸಿ ಹೋರಾಟ ನಡೆಸುತ್ತಿರುವ ಸಂಘಸಂಸ್ಥೆಗಳನ್ನು ಆಹ್ವಾನಿಸಿ ಅಧಿವೇಶನದ ನಂತರ 15 ದಿನಗಳೊಳಗಾಗಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಯೋಜನೆ ಕುರಿತಂತೆ ಮಾಹಿತಿ ನೀಡಲಾಗುವುದೆಂದು ಸಚಿವರು ತಿಳಿಸಿದರು. 

ಚರ್ಚೆಯಲ್ಲಿ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಚೌಡಿ ರಡ್ಡಿ, ಅರುಣ ಶಹಾಪೂರ, ಐವಾನ್ ಡಿಸೋಜಾ, ಉಗ್ರಪ್ಪ, ಹೆಚ್.ಎಂ. ರೇವಣ್ಣ ಹಾಗೂ ಇತರ ಸದಸ್ಯರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News