ಹಿಲರಿಯನ್ನು ಬಂಧಿಸುವುದಿಲ್ಲ: ಟ್ರಂಪ್

Update: 2016-11-23 18:44 GMT
‘ದ ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯ ನ್ಯೂಯಾರ್ಕ್‌ನಲ್ಲಿರುವ ಕಾರ್ಯಾಲಯದಲ್ಲಿ ಮಂಗಳವಾರ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪತ್ರಿಕೆಯ ಸಂಪಾದಕರು ಮತ್ತು ವರದಿಗಾರರನ್ನು ಭೇಟಿಯಾದರು.

ವಾಶಿಂಗ್ಟನ್, ನ. 23: ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ಖಾಸಗಿ ಇಮೇಲ್ ಸರ್ವರ್ ಬಳಸಿದ ಪ್ರಕರಣಕ್ಕೆ ಸಂಬಂಧಿಸಿ, ಹಿಲರಿ ಕ್ಲಿಂಟನ್ ವಿರುದ್ಧ ಮೊಕದ್ದಮೆ ದಾಖಲಿಸುವ ತನ್ನ ಬೆದರಿಕೆಯಿಂದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಿಂದೆ ಸರಿದಿದ್ದಾರೆ. ಹೀಗೆ ಮಾಡುವುದು ದೇಶದ ಪಾಲಿಗೆ ‘ಅತ್ಯಂತ ವಿಭಜನಕಾರಿ’ಯಾಗಿರುತ್ತದೆ ಎಂದು ಅವರು ಹೇಳಿದ್ದಾರೆ. ಅಧ್ಯಕ್ಷೀಯ ಚುನಾವಣೆ ಪ್ರಚಾರದ ಅವಧಿಯಲ್ಲಿ, ತಾನು ಅಧ್ಯಕ್ಷನಾಗಿ ಆಯ್ಕೆಯಾದರೆ ತನ್ನ ಡೆಮಾಕ್ರಟಿಕ್ ಎದುರಾಳಿ ಹಿಲರಿ ಕ್ಲಿಂಟನ್‌ರನ್ನು ಬಂಧಿಸುವುದಾಗಿ ಟ್ರಂಪ್ ಸತತವಾಗಿ ಪ್ರಚಾರ ಮಾಡಿದ್ದರು. ‘ಲಾಕ್ ಹರ್ ಅಪ್’ (ಅವರನ್ನು ಜೈಲಿಗೆ ತಳ್ಳಿ) ಎಂಬ ಅವರ ಘೋಷಣೆ ಭಾರೀ ಪ್ರಸಿದ್ಧವಾಗಿತ್ತು. ಆದರೆ, ‘ನ್ಯೂಯಾರ್ಕ್ ಟೈಮ್ಸ್’ನ ಸಂಪಾದಕೀಯ ಬಳಗದೊಂದಿಗೆ ನಡೆದ ಸಭೆಯಲ್ಲಿ, ತನ್ನ ಈ ಘೋಷಣೆಯಿಂದ ಹಿಂದೆ ಸರಿಯುವ ಇಂಗಿತವನ್ನು ಟ್ರಂಪ್ ವ್ಯಕ್ತಪಡಿಸಿದ್ದಾರೆ.
‘‘ಕ್ಲಿಂಟನ್ ದಂಪತಿಗೆ ಹಾನಿ ಮಾಡಲು ನಾನು ಬಯಸುವುದಿಲ್ಲ, ನಿಜವಾಗಿಯೂ ನನಗೆ ಇಷ್ಟವಿಲ್ಲ’’ ಎಂದು ಟ್ರಂಪ್ ಹೇಳಿರುವುದಾಗಿ ಪತ್ರಿಕೆಯ ಸಂಪಾದಕೀಯ ಮಂಡಳಿಯ ಸದಸ್ಯರು ಹೇಳಿದ್ದಾರೆ. ಖಾಸಗಿ ಇಮೇಲ್ ಸರ್ವರ್ ಬಳಸಿದ ವಿಷಯದಲ್ಲಿ ಎಫ್‌ಬಿಐ ನಡೆಸಿದ ತನಿಖೆಯ ಬಳಿಕ, ಡೆಮಾಕ್ರಟಿಕ್ ಅಭ್ಯರ್ಥಿಯ ವಿರುದ್ಧ ಯಾವುದೇ ಆರೋಪ ಹೊರಿಸಲಾಗುವುದಿಲ್ಲ ಎಂಬುದಾಗಿ ಕಾನೂನು ಇಲಾಖೆ ಹೇಳಿತ್ತು.

ರಿಪಬ್ಲಿಕನ್ ಅನುಯಾಯಿಗಳ ಆಕ್ರೋಶ
ವಾಶಿಂಗ್ಟನ್, ನ. 23: ಅಧ್ಯಕ್ಷೀಯ ಚುನಾವಣೆಯಲ್ಲಿ ತನ್ನ ಡೆಮಾಕ್ರಟಿಕ್ ಎದುರಾಳಿಯಾಗಿದ್ದ ಹಿಲರಿ ಕ್ಲಿಂಟನ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ತನ್ನ ಚುನಾವಣಾ ಭರವಸೆಯಿಂದ ಹಿಂದೆ ಸರಿಯುವ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಇಂಗಿತಕ್ಕೆ ರಿಪಬ್ಲಿಕನ್ ಪಕ್ಷದ ಕಟ್ಟಾ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಮಾತು ಮುರಿದ ಟ್ರಂಪ್: ಕ್ಲಿಂಟನ್ ಇಮೇಲ್ ಆರೋಪಗಳಿಗೆ ಸಂಬಂಧಿಸಿ ಮೊಕದ್ದಮೆ ಹೂಡಲು ಟ್ರಂಪ್ ಬಯಸುವುದಿಲ್ಲ’ ಎಂಬ ಶಿರೋನಾಮೆಯಲ್ಲಿ ‘ಬ್ರೈಟ್‌ಬಾರ್ಟ್ ನ್ಯೂಸ್’ ಮಂಗಳವಾರ ವರದಿಯೊಂದನ್ನು ಪ್ರಕಟಿಸಿದೆ. ಈ ಪತ್ರಿಕಾ ಸಂಸ್ಥೆಯ ಮಾಲಕತ್ವವನ್ನು ಒಮ್ಮೆ ಟ್ರಂಪ್‌ರ ಮುಖ್ಯ ವ್ಯೆಹಗಾರ ಸ್ಟೀವ್ ಬ್ಯಾನನ್ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News