ವೃದ್ಧರು ನಮಗೆ ಸಮಸ್ಯೆಯಾಗಿದ್ದು ಹೇಗೆ ?

Update: 2016-11-24 12:01 GMT

ಜಾಗತಿಕವಾಗಿರುವ ವೃದ್ಧರ ಸಮಸ್ಯೆ ಹೇಳಬೇಕಾದರೆ ಅಂಕಿ ಅಂಶಗಳ ಅಗತ್ಯವೇನಿಲ್ಲ. ವೃದ್ಧರಿಲ್ಲದ ಮನೆಗಳನ್ನು ನೋಡಿಯೇ ಊಹಿಸಿಕೊಳ್ಳಬಹುದು. ಕನಿಷ್ಟ ಪಕ್ಷ ಸೂರಿನ ಅವಶ್ಯಕತೆಯನ್ನೂ ಅವರಿಗೆ ಇಲ್ಲವಾಗಿಸಲಾಗುತ್ತಿದೆ. ಸೂಕ್ತವಾದ ಸನ್ಮಾನ ಗೌರವಾದರಗಳು ಇರಲಿ, ಅವರೊಂದಿಗೆ ಜೀವನ ನಡೆಸುವುದು ಕೂಡಾ ಇಂದು ಅವರ ಸಂತಾನಗಳಿಗೆ ಕಷ್ಟವಿಲ್ಲವಾಗಿದೆ. ವೃದ್ಧಾಪ್ಯ ವಾಸ್ತವಿಕತೆಯಲ್ಲವೇ? ಇಂದು ಯುವಕರಿರುವವರು ನಾಳೆ ಮುದಿ ಪ್ರಾಯ ತಲುಪವವರೇ ಅಲ್ಲವೇ? ಮತ್ತೇಕೆ ಇಂದಿನ ಹಿರಿಯರ ಬಗ್ಗೆ ಇಷ್ಟೊಂದು ನಿರ್ಲಕ್ಷ್ಯ? ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮಾತ್ರ ಕೇಳಿ ಬರುತ್ತಿದ್ದ ವೃದ್ಧಾಶ್ರಮಗಳು ಇಂದು ನಮ್ಮ ಮನೆ‌-ಮೊಹಲ್ಲಾಗಳಲ್ಲೂ ಸ್ಥಾಪಿತಗೊಂಡಿವೆ. ಕಾರಣ ವೃದ್ಧರು ಮನೆಗೆ ಶೋಭಿಸುವುದಿಲ್ಲ. ಅವರ ಕೆಲಸ ಕಾರ್ಯಗಳನ್ನು ಅವರ ಮಕ್ಕಳಿಂದ ಮಾಡಲು ಸಾಧ್ಯವಿಲ್ಲ. ಹೆತ್ತವರನ್ನು ಬೀದಿ ಪಾಲು ಮಾಡುವ ಮಕ್ಕಳು ಇಂದು ಸಮಾಜದಲ್ಲಿದ್ದಾರೆ‌. ಆಶ್ರಮಕ್ಕೆ ಅಟ್ಟಿ ಇಂತಿಷ್ಟು ಹಣ ಪಾವತಿಸಿ ಕೈ ತೊಳೆಯುವವರ ಸಂಖ್ಯೆ ಕಮ್ಮಿ ಇಲ್ಲ.

ಯಾಕೆ ಹೀಗೆ?

ಇದು ಸಂಕೀರ್ಣವಾದ ಪ್ರಶ್ನೆ. ಆಧುನಿಕ ಜೀವನ ಶೈಲಿ, ಯಾಂತ್ರೀಕೃತ ಬದುಕು ಮನುಷ್ಯನನ್ನು ಯಂತ್ರವನ್ನಾಗಿಸಿದೆ. ಅವನಲ್ಲಿ ಮಾನವೀಯತೆ,‌ ಪ್ರೀತಿ, ಸ್ನೇಹ, ಕರುಣೆ ಎಲ್ಲವನ್ನೂ ಆಲಿಸಿ, ಒತ್ತಡ, ಉದ್ರೇಕ, ಭಾವನಾರಹಿತ ಭಾವವನ್ನು ತುಂಬಿಸಿದೆ. ವೃದ್ಧಾಪ್ಯದಲ್ಲಿ ಮನುಷ್ಯನು ಸಹಜವಾಗಿ ಸಾಮರ್ಥ್ಯ ಶಕ್ತಿ ಹಾಗೂ ಮಾನಸಿಕ ಸ್ಥಿರತೆಯನ್ನು ಕಳೆದುಕೊಳ್ಳುತ್ತಾನೆ ಅಥವಾ ಕುಂಠಿತವಾಗಬಹುದು. ಇವುಗಳ ಜಟಿಲತೆಯಿಂದಾಗಿ ಸಹಜವಾಗಿ ಸಿಡಿಮಡಿ ಸ್ವಭಾವವನ್ನು ಮೈಗೂಡಿಸಿಕೊಳ್ಳುತ್ತಾರೆ. ಇದು ಯುವ ಪೀಳಿಗೆಗೆ ಅರಗಿಸಿಕೊಳ್ಳಲು ಸಾಧ್ಯವಿಲ್ಲವಾಗುತ್ತದೆ. ಅವರ  ವರ್ತನೆಗಳು ನಮಗೆ ಅಸಹನೀಯವಾದರೂ ಅವರ ಪ್ರಾಯ ಹಾಗೂ ಸಹಜ ದೌರ್ಬಲ್ಯಗಳನ್ನು ಗಮನಿಸಿ ಅವರೊಂದಿಗೆ ವ್ಯವಹರಿಸಬೇಕು. ಎಲ್ಲ ಮತ ಧರ್ಮಗಳೂ ಹಿರಿಯರನ್ನು, ಮಾತಾ ಪಿತರನ್ನು ಗೌರವಿಸಬೇಕೆಂದು ಕಲಿಸಿಕೊಡುತ್ತದೆ‌. ಇಸ್ಲಾಂ ಧರ್ಮವೂ ಹಿರಿಯರ ಬಗ್ಗೆ ಕೆಲವೊಂದು ಆದೇಶಗಳನ್ನು ನೀಡುತ್ತದೆ. ಹೆತ್ತವರನ್ನು ಕೈ ಬಿಡಬಾರದು, ಅವರಿಗೆ ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸಬೇಕು. ಅವರನ್ನು ಕೊನೆ ತನಕವೂ ಚೆನ್ನಾಗಿ ನೋಡಿಕೊಳ್ಳಬೇಕು. ನಿಮ್ಮನ್ನು ಅವರು ಚಿಕ್ಕಂದಿನಲ್ಲಿ ಸಾಕಿದ ಹಾಗೆ ನೀವೂ ಅವರನ್ನು ಅವರ ವೃದ್ದಾಪ್ಯದಲ್ಲಿ ನೋಡಿಕೊಳ್ಳಬೇಕೆಂದು ಇಸ್ಲಾಂ ಧರ್ಮವು ಕಲಿಸುತ್ತದೆ. ನಿನ್ನಲ್ಲಿರುವ ಪ್ರತಿಯೊಂದೂ ನಿನ್ನ ಮಾತಾಪಿತರದ್ದು. ಅದನ್ನು ಪೂರ್ತಿಯಾಗಿ ಖರ್ಚು ಮಾಡುವ ಹಕ್ಕು ಅವರಿಗಿದೆ. ಅದೂ ಅಲ್ಲದೆ ನಿನ್ನ ವಸ್ತುಗಳೇಕೆ‌  ಸ್ವತಃ ನೀನೇ ಅಡಿಯಿಂದ ಮುಡಿಯವರೆಗೆ ಅವರಿಗೆ ಸೇರಿದ್ದಾಗಿದೆ ಎಂದೂ ಪ್ರವಾದಿ (ಸ.ಅ.) ಕಲಿಸಿದ್ದಾರೆ‌.

ಅವಿಭಕ್ತ ಕುಟುಂಬಗಳಲ್ಲಿನ ಒಡಕು ಹಾಗೂ ಸಣ್ಣ ಕುಟುಂಬಗಳ ಪರಿಕಲ್ಪನೆ ಹಿರಿಯರ ಸಮಸ್ಯೆಗೆ ಮೂಲ ಕಾರಣ ಎಂದರೂ ತಪ್ಪಾಗಲಾರದು. ಸಮಸ್ಯೆಗಳೇನೇ ಇರಲಿ ಆದರೆ ತನ್ನ ಹೆತ್ತವರ ಇಂದಿನ ಸ್ಥಾನಕ್ಕೆ ನಾಳೆ ನಾನೂ ಬರಬಹುದು ಎಂಬ ಕಲ್ಪನೆ ಪ್ರತಿಯೋರ್ವರಲ್ಲಿ  ಇರಬೇಕು. ಆಗಷ್ಟೆ ಸಮಸ್ಯೆಗೆ ಪರಿಹಾರವು ದೊರಕಬಹುದೆಂದು ನಿರೀಕ್ಷೆ ಇರಿಸಬಹುದು. ದಿಕ್ಕುಪಾಲಾದ ವೃದ್ಧರೋರ್ವರನ್ನು ಕಂಡಾಗ ಇಷ್ಟೆಲ್ಲಾ ವಿಚಾರಗಳು ನೆನಪಲ್ಲಿ ಸುಳಿದಾಡಿದವು.

- ಅಹ್ಮದ್ ಅನ್ವರ್, ಮಂಗಳೂರು.

(ಅಹ್ಮದ್ ಅನ್ವರ್ ಅವರು  ಹಿರಿಯ ಫೋಟೋಜರ್ನಲಿಸ್ಟ್. ಕವಿ . ಪ್ರಸ್ತುತ ಅಸೌಖ್ಯದಿಂದ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದಾರೆ. ಬೀದಿಗೆ ಬಿದ್ದಿರುವ ವೃದ್ಧರೋರ್ವರನ್ನು ನೆನೆದು ಅನ್ವರ್ ಅವರ ಕಲ್ಪನೆಯ ಈ ಬರಹವನ್ನು ತಮ್ಮ ಮನೆಯವರ ಮೂಲಕ ಬರೆಸಿದ್ದಾರೆ.)
 

Writer - ಅಹ್ಮದ್ ಅನ್ವರ್, ಮಂಗಳೂರು.

contributor

Editor - ಅಹ್ಮದ್ ಅನ್ವರ್, ಮಂಗಳೂರು.

contributor

Similar News