×
Ad

ರೈತರ ಸಾಲಮನ್ನಾ ಅಸಾಧ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2016-11-24 22:31 IST

ಬೆಳಗಾವಿ (ಸುವರ್ಣ ವಿಧಾನಸೌಧ), ನ.24: ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರು ಸಾಲದ ಮೊತ್ತದ ಪೈಕಿ ಶೇ.50ರಷ್ಟನ್ನು ಕೇಂದ್ರ ಸರಕಾರ ಭರಿಸಿದರೆ ಮಾತ್ರ ಇನ್ನುಳಿದ ಶೇ.50ರಷ್ಟು ಮೊತ್ತದ ಸಾಲವನ್ನು ಮನ್ನಾ ಮಾಡಲು ರಾಜ್ಯ ಸರಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.

ಗುರುವಾರ ವಿಧಾನಸಭೆಯಲ್ಲಿ ನಡೆದ ಬರ ಪರಿಸ್ಥಿತಿ ಮೇಲಿನ ಚರ್ಚೆಯ ಬಳಿಕ ವಿಪಕ್ಷಗಳ ಸದಸ್ಯರ ಆಕ್ಷೇಪಕ್ಕೆ ಉತ್ತರ ನೀಡಿದ ಅವರು, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರ ಸಾಲದ ಶೇ.50ರಷ್ಟನ್ನು ಕೇಂದ್ರ ಸರಕಾರ ಭರಿಸಿದರೆ, ಉಳಿದರ್ಧ ಭರಿಸಲು ರಾಜ್ಯ ಸಿದ್ಧವಿದೆ ಎಂದು ಕಳೆದ ವರ್ಷ ನೀಡಿದ ಹೇಳಿಕೆಗೆ ರಾಜ್ಯ ಸರಕಾರ ಈಗಲೂ ಬದ್ಧವಿದೆ ಎಂದು ಘೋಷಿಸಿದರು.

ಆದರೆ, ಕೇಂದ್ರ ಸರಕಾರ ರೈತ ವಿರೋಧಿಯಾಗಿದ್ದು, ರೈತರು ಮತ್ತು ಬಡವರ ಬಗ್ಗೆ ಯಾವುದೇ ಕಾಳಜಿಯಿಲ್ಲ. ಹಿಂದಿನ ಯುಪಿಎ ಸರಕಾರ ರೈತರ 72 ಸಾವಿರ ಕೋಟಿ ರೂ.ಸಾಲವನ್ನು ಮನ್ನಾ ಮಾಡಿತ್ತು. ಆದರೆ ಈಗಿನ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಒಂದು ನಯಾಪೈಸೆ ನೆರವು ನೀಡುತ್ತಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಇಳಿಕೆಯಿಂದ ಸುಮಾರು 2 ಲಕ್ಷ ಕೋಟಿ ರೂ. ಉಳಿತಾಯವಾಗಿದ್ದರೂ, ರೈತರಿಗೆ ನೆರವು ನೀಡಲು ಹಿಂದೇಟು ಹಾಕುತ್ತಿದೆ ಎಂದು ಸಿದ್ದರಾಮಯ್ಯ ತೀವ್ರ ತರಾಟೆಗೆ ತೆಗೆದುಕೊಂಡರು.

ನಮ್ಮದು ರೈತ ಪರವಾದ ಸರಕಾರ. ಎಷ್ಟೇ ಕಷ್ಟ ಬಂದರೂ ರೈತರನ್ನು ನಾವು ಕೈಬಿಡುವುದಿಲ್ಲ. ರೈತರು ಆತಂಕಪಡುವ ಅಗತ್ಯವಿಲ್ಲ. ಬರ ಪರಿಹಾರ ಕಾಮಗಾರಿಗಳನ್ನು ಯುದ್ದೋಪಾಧಿಯಲ್ಲಿ ಕೈಗೊಂಡಿದ್ದೇವೆ. ಕುಡಿಯುವ ನೀರಿಗಾಗಿ ಪ್ರತಿ ತಾಲೂಕಿಗೆ 60 ಲಕ್ಷ ರೂ. ಬಿಡುಗಡೆ ಮಾಡಿದ್ದೇವೆ. ಹೆಚ್ಚಿನ ನೆರವು ಕೋರಿ ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಲು ನಾವು ಸಿದ್ಧರಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಸಹಕಾರ ಬ್ಯಾಂಕುಗಳ ಮೂಲಕ 10 ಸಾವಿರ ಕೋಟಿ ರೂ.ಸಾಲ ವಿತರಣೆ ಮಾಡಿದ್ದು, ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ 35 ಸಾವಿರ ಕೋಟಿ ರೂ.ಸಾಲ ನೀಡಲಾಗಿದೆ. ಶೇ.80ರಷ್ಟು ರೈತರ ಹಿತದೃಷ್ಟಿಯಿಂದ ಕೇಂದ್ರ ಸರಕಾರ ರೈತರ ಸಾಲ ಮನ್ನಾಕ್ಕೆ ನೆರವು ನೀಡಬೇಕು. ಆದರೆ, ಈ ಬಗ್ಗೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಐದು ನೂರು ರೂ.ಮತ್ತು ಸಾವಿರ ರೂ.ನೋಟು ಚಲಾವಣೆ ರದ್ದುಪಡಿಸಿರುವುದರಿಂದ ಕೇಂದ್ರಕ್ಕೆ ಹೆಚ್ಚಿನ ಮೊತ್ತದ ಹಣ ಬಂದಿದೆ. ಆದರೆ, ರಾಜ್ಯ ಸರಕಾರಕ್ಕೆ 4ಸಾವಿರ ಕೋಟಿ ರೂ.ಗಳಷ್ಟು ಆದಾಯ ಖೋತಾ ಆಗುತ್ತದೆ. ಆದುದರಿಂದ ಕೇಂದ್ರ ಸರಕಾರ ಬರ ಪರಿಹಾರಕ್ಕೆ ಹೆಚ್ಚಿನಪ್ರಮಾಣದ ನೆರವು ನೀಡಬೇಕೆಂದು ಮನವಿ ಮಾಡಿದರು.

ವಾಗ್ಯುದ್ದ-ಗದ್ದಲ: ಆರಂಭಕ್ಕೆ ರಾಜ್ಯ ಸರಕಾರದ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ವಿ ಪಕ್ಷ ನಾಯಕ ಜಗದೀಶ ಶೆಟ್ಟರ್, ರೈತರ ಸಾಲ ಮನ್ನಾ ಮಾಡುವ ಕುರಿತು ಸರಕಾರ ಯಾವುದೇ ಸ್ಪಷ್ಟನೆ ನೀಡಿಲ್ಲ. ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಸರಕಾರಕ್ಕೆ ರೈತರ ಬಗ್ಗೆ ನಿಜವಾದ ಕಾಳಜಿ ಇಲ್ಲ ಎಂದು ದೂರಿದರು.

ಸಭಾತ್ಯಾಗ: ಹೀಗಾಗಿ ಆಡಳಿತ ಮತ್ತು ವಿಪಕ್ಷ ಸದಸ್ಯರ ಮಧ್ಯೆ ಕೆಲ ಕಾಲ ಪರಸ್ಪರ ಆರೋಪ-ಪ್ರತ್ಯಾರೋಪ ನಡೆಯಿತು. ಸರಕಾರದ ಉತ್ತರವನ್ನು ವಿರೋಧಿಸಿ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News