‘ಸಂವಿಧಾನದ ಪ್ರತಿಫಲ ಕಟ್ಟಕಡೆಯ ವ್ಯಕ್ತಿಗೂ ತಲುಪಲಿ’

Update: 2016-11-26 17:18 GMT

ಮಡಿಕೇರಿ ನ.26: ಭೂಮಿ ಮತ್ತು ಸಂಪನ್ಮೂಲವಿದ್ದರೂ ಬುಡುಕಟ್ಟು ಜನರಿಗೆ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ ಎನ್ನುವ ಪರಿಕಲ್ಪನೆಯೇ ಇಲ್ಲದಾಗಿದೆ ಎಂದು ವಿಷಾದಿಸಿರುವ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು, ತಾವು ಇತ್ತೀ ಚೆಗೆ ನಾಗರಹೊಳೆ ಹಾಡಿಗಳಿಗೆ ಭೇಟಿ ನೀಡಿದ ಸಂದರ್ಭ ಈ ಚಿತ್ರಣ ಕಂಡು ಬಂತು ಎಂದು ಅಧಿಕಾರಿಗಳ ಗಮನ ಸೆಳೆದಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ ವತಿಯಿಂದ ಏರ್ಪಡಿಸಲಾಗಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಪ್ರತಿಫಲ ಕಟ್ಟ ಕಡೆಯ ವ್ಯಕ್ತಿಗೂ ತಲುಪಬೇಕು ಎಂದರು.


ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳೇ ಕಳೆದಿದ್ದರೂ ಬುಡಕಟ್ಟು ಜನರಿಗೆ ಸಂವಿಧಾನದ ಸೌಲಭ್ಯಗಳು ದೊರೆತಿಲ್ಲ ಮತ್ತು ಆಶಯಗಳು ಈಡೇರಿಲ್ಲ. ಸಂವಿಧಾನದ ಪ್ರತಿಫಲ ಕಟ್ಟಕಡೆಯ ಜನರಿಗೂ ತಲುಪಬೇಕು. ಎಲ್ಲರ ಜೀವನ ಮಟ್ಟ ಉತ್ತಮವಾಗಬೇಕು. ಆದರೆ ಆಡಳಿತ ವ್ಯವಸ್ಥೆಯಲ್ಲಿ ಉಳ್ಳವರು, ದೊಡ್ಡವರು, ಅಧಿಕಾರ ಇರುವವರಿಗೆ ಎಲ್ಲಾ ಕೆಲಸಗಳನ್ನು ಮಾಡಿಕೊಡುತ್ತೇವೆ. ಇಲ್ಲದವರಿಗೆ ಸೌಲಭ್ಯಗಳೇ ತಲುಪುವುದಿಲ್ಲ. ಆದ್ದರಿಂದ ಅಧಿಕಾರಿಗಳು ಸಂವಿಧಾನದ ಆಶಯಗಳನ್ನು ಅರ್ಥಮಾಡಿಕೊಂಡು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಬಡವರಿಗೆ, ಮುಖ್ಯವಾಹಿನಿಯಿಂದ ದೂರವಿರುವವರಿಗೆ ಸರಕಾರದ ಸೌಲಭ್ಯಗಳನ್ನು ತಲುಪಿಸಲು ಪ್ರಯತ್ನಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಸಲಹೆ ನೀಡಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ವಕೀಲರಾದ ಕೆ.ಆರ್.ವಿದ್ಯಾಧರ ಭಾರತದಲ್ಲಿನ ಪ್ರತಿಯೊಬ್ಬರಿಗೂ ಸಂವಿಧಾನವೇ ಶ್ರೇಷ್ಠ ಧರ್ಮ ಗ್ರಂಥವಾಗಿದೆ ಎಂದರು.

ಸಾಮಾಜಿಕ ಸಮಾನತೆ, ಭ್ರಾತೃತ್ವ, ಸಮಾಜವಾದಿ ನೆಲೆಗಟ್ಟಿನ ಮೇಲೆ ಸಂವಿಧಾನ ನಿಂತಿದೆ, ಅದನ್ನು ಅರಿತು ಸಂವಿಧಾನ ಬದ್ಧವಾಗಿ ಪ್ರತಿಯೊಬ್ಬರೂ ತಮ್ಮ ಹಕ್ಕು ಪಡೆಯಲು ಮುಂದಾಗಬೇಕು, ಜೊತೆಗೆ ತಮ್ಮ ಕರ್ತವ್ಯಗಳನ್ನು ಪಾಲಿಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಂವಿಧಾನಕ್ಕೆ ನಮ್ಮನ್ನು ನಾವೇ ಸಮರ್ಪಿಸಿಕೊಂಡಿದ್ದೇವೆ ಎಂದು ಪ್ರಮಾಣ ವಚನ ಸ್ವೀಕರಿಸಲಾಯಿತು. ಪ್ರಮಾಣ ವಚನವನ್ನು ಕೆ.ವಿ.ಸುರೇಶ್ ಬೋಧಿಸಿದರು. ಉಪ ವಿಭಾಗಾಧಿಕಾರಿ ಡಾ.ನಂಜುಂಡೇಗೌಡ, ಜಿ.ಪಂ. ಉಪಕಾರ್ಯದರ್ಶಿ ವಿಶ್ವನಾಥ್ ಪೂಜಾರಿ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News