ಕೇಂದ್ರದ ವಿರುದ್ಧ ಬೀದಿ ಬದಿ ವ್ಯಾಪಾರಸ್ಥರ ಆಕ್ರೋಶ
ಬಂದ್‌ಗೆ ಬೆಂಬಲ, ನೋಟು ರದ್ದತಿ ಹಿಂಪಡೆಯಲು ಒತ್ತಾಯ
ಶಿಕಾರಿಪುರ, ನ.27: 500 ಮತ್ತು 1,000 ಮುಖಬೆಲೆಯ ನೋಟು ನಿಷೇಧ ನೇರವಾಗಿ ಸಾಮಾನ್ಯ ಜನತೆ, ವರ್ತಕರು, ಬೀದಿ ಬದಿ ವ್ಯಾಪಾರಿಗಳಿಗೆ ಬಹು ದೊಡ್ಡ ನಷ್ಟ ಉಂಟುಮಾಡಿದ್ದು, ಈ ಕೂಡಲೇ ಕೇಂದ್ರದ ನೋಟು ರದ್ದು ವಾಪಸು ಪಡೆಯಬೇಕೆಂದು ರವಿವಾರ ಪಟ್ಟಣದ ಶ್ರೀ ವಿಜಯಲಕ್ಷ್ಮೀ ಹೋಟೆಲ್ ಸಭಾಂಗಣದಲ್ಲಿ ನಡೆದ ಬೀದಿ ಬದಿ ವ್ಯಾಪಾರಸ್ಥರ ಸಂಘದ ಸಭೆಯಲ್ಲಿ ಒಕ್ಕೊರಲಿನಿಂದ ಆಗ್ರಹಿಸಲಾಯಿತು.
ಸಂಘದ ಅಧ್ಯಕ್ಷ ಹಾಗೂ ಪುರಸಭಾ ಸದಸ್ಯ ಮಹೇಶ್ ಹುಲ್ಮಾರ್ ಅಧ್ಯಕ್ಷತೆಯಲ್ಲಿ ನಡೆದ 64ನೆ ಮಾಸಿಕ ಸಭೆಯಲ್ಲಿ ಪಾಲ್ಗೊಂಡಿದ್ದ ನೂರಾರು ಸದಸ್ಯರು 500 ಮತ್ತು 1,000 ರೂ. ಮುಖಬೆಲೆಯ ನೋಟು ರದ್ದುಗೊಳಿಸಿದ ಕೇಂದ್ರದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿದ್ದ ಪಾನಿಪೂರಿ ವ್ಯಾಪಾರಿ ಕೃಷ್ಣಪ್ಪ ಮಾತನಾಡಿ, ಕೇಂದ್ರ ಸರಕಾರ 500 ಮತ್ತು 1,000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ನಂತರದಲ್ಲಿ ವ್ಯಾಪಾರದಲ್ಲಿ ಗಣನೀಯ ಕುಸಿತವಾಗಿದೆ. ನಿತ್ಯ ಬಿಡಿಗಾಸು ಮಾತ್ರ ವ್ಯವಹರಿಸುವ ಬೀದಿ ಬದಿ ವ್ಯಾಪಾರಸ್ಥರು ಚಿಲ್ಲರೆಯ ದೊಡ್ಡ ಸಮಸ್ಯೆಯಿಂದಾಗಿ ವ್ಯಾಪಾರ ಅತ್ಯಂತ ಕಡಿಮೆಯಾಗಿದೆ. ಅಲ್ಲದೆ, ನಿತ್ಯ ಬೆಳಗ್ಗೆ ಬ್ಯಾಂಕ್, ಅಂಚೆ ಕಚೇರಿಗೆ ಅಲೆದಾಡುವುದು ಸಾಮಾನ್ಯವಾಗಿದೆ ಎಂದು ಅಳಲು ತೋಡಿಕೊಂಡ ಅವರು, ಇದರಿಂದ ಸಣ್ಣ ವ್ಯಾಪಾರಸ್ಥರಿಗೆ ಕೇಂದ್ರ ದೊಡ್ಡ ಪೆಟ್ಟು ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಹೇಶ ಹುಲ್ಮಾರ್, ಬೀದಿ ಬದಿ ವ್ಯಾಪಾರಸ್ಥರ ಸಂಘ ಆರಂಭವಾಗಿ 5 ವರ್ಷಗಳು ಕಳೆದಿದೆ. ಬೀದಿ ಬದಿಯ ವ್ಯಾಪಾರಿಗಳ ನಿತ್ಯ ಆರ್ಥಿಕ ವಹಿವಾಟಿಗೆ ಅನುಕೂಲ ಕಲ್ಪಿಸುವ ದಿಸೆಯಲ್ಲಿ 4,800 ರೂ. ಬಂಡವಾಳದಿಂದ ಆರಂಭವಾದ ಸಂಘ ಇದೀಗ 3.28 ಲಕ್ಷ ರೂ. ಬಂಡವಾಳ ಹೊಂದಿದೆ. ಅತಿ ಕಡಿಮೆ ಬಡ್ಡಿ ದರದಲ್ಲಿ ವ್ಯಾಪಾರಿಗಳ ಅನುಕೂಲಕ್ಕಾಗಿ ನೀಡಲಾಗುವ ಬಂಡವಾಳ ಈ ಬಾರಿ 500 ಹಾಗೂ 1,000 ರೂ. ಸಮಸ್ಯೆಯಿಂದಾಗಿ ಸಭೆಯನ್ನು ಮುಂದೂಡುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು. ಬೀದಿ ಬದಿ ವ್ಯಾಪಾರಿ ಗಳು ಚಿಲ್ಲರೆಯ ಸಮಸ್ಯೆ ಯಿಂದಾಗಿ ಗ್ರಾಹಕರನ್ನು ಕಳೆದುಕೊಳ್ಳುವಂತಾಗಿದೆ. ಕೇಂದ್ರದ ನಿರ್ಧಾರ ಕೇವಲ ಬಂಡವಾಳಶಾಹಿಗಳು, ರಾಜಕಾರಣಿಗಳು, ಕಾಳಧನಿಕರ ಪರವಾಗಿದೆ ಎಂದು ಆರೋಪಿಸಿದರು.
ಇದುವರೆಗೂ ಚಿಲ್ಲರೆ ಾಗೂ ನೋಟು ಬದಲಾವಣೆಗಾಗಿ ಕೇವಲ ಮಧ್ಯಮ, ಕೆಳ ವರ್ಗದವರು ಮಾತ್ರ ಸರತಿಯಲ್ಲಿ ಗೋಚರಿಸುತ್ತಿದ್ದರು. ಶ್ರೀಮಂತ ವರ್ಗ, ರಾಜಕಾರಣಿಗಳು, ಕಾಳಧನಿಕರು, ಕೋಟಿ ಕೋಟಿ ರೂ. ಕೊಳ್ಳೆ ಹೊಡೆದವರಿಗೆ ನೋಟು ಅಮಾನ್ಯದಿಂದ ಯಾವುದೇ ತೊಂದರೆಯಾಗಿಲ್ಲ ಎಂದು ಕಿಡಿಕಾರಿದರು.
ರಾಜ್ಯ ಸರಕಾರ ಸಣ್ಣ ವ್ಯಾಪಾರಿಗಳಿಗೆ ಶೂನ್ಯ ಬಡ್ಡಿ ದರದ ಸಾಲ ಮತ್ತಿತರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಪ್ರತಿಯೊಬ್ಬ ಸದಸ್ಯರೂ ತಮ್ಮ ಗುರುತಿನ ಪತ್ರ ಪಡೆದು ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಬೇಕೆಂದು ಸೂಚಿಸಿದರು.
ರದ್ದು ಮಾಡಲಾಗಿರುವ ನೋಟುಗಳ ವಾಪಸಾತಿಗೆ ಆಗ್ರಹಿಸಿ ಸೋಮವಾರದ ಬಂದ್ ಕರೆಗೆ ಬೀದಿ ಬದಿ ವ್ಯಾಪಾರಸ್ಥರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಲಿದ್ದಾರೆ.ಜನಸಾಮಾನ್ಯರ ಅಳಲಿಗೆ ಕೇಂದ್ರ ಸರಕಾರದ ಕಣ್ಣು ತೆರೆಸಬೇಕಾಗಿದೆ ಎಂದು ತಿಳಿಸಿದರು. ಸಭೆಯಲ್ಲಿದ್ದ ನೂರಾರು ಸದಸ್ಯರು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿ ಘೆಷಣೆ ಕೂಗಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಕರೀಂಸಾಬ್, ಕಿರಣ್, ಕಾರ್ಯದರ್ಶಿ ಕೃಷ್ಣಪ್ಪ, ಕಾಟನೂರು ರವಿ, ದುರ್ಗಮ್ಮ, ಶೋಭಾ, ಗೀತಾಬಾಯಿ, ವೀಣಾ, ಆಯೇಷಾಬಾನು, ವೀರಮ್ಮ, ಭಾಗ್ಯಮ್ಮ ಮತ್ತಿತರರು ಉಪಸ್ಥಿತರಿದ್ದರು.