×
Ad

ಮುಸ್ಲಿಮರ ನೋವಿಗೆ ಸ್ಪಂದಿಸದ ಸರಕಾರ

Update: 2016-11-27 22:57 IST

ಮಡಿಕೇರಿ, ನ.27: ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಮುಸ್ಲಿಮರ ಮೇಲೆ ಆಗುತ್ತಿರುವ ಅನ್ಯಾಯಗಳನ್ನು ತಡೆಯಲು ಸರಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿರುವ ಕೊಡಗು ಮುಸ್ಲಿಂ ಸಮಾಜ, ಡಿಸೆಂಬರ್ 3ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
 ನಗರದ ಹೊಟೇಲ್‌ವೊಂದರ ಸಭಾಂಗಣದಲ್ಲಿ ನಡೆದ ಕೊಡಗು ಮುಸ್ಲಿಂ ಸಮಾಜದ ಮಹತ್ವದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಮಾಜದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ, ಸರಕಾರದ ನಿರ್ಲಕ್ಷ್ಯದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಮುಸ್ಲಿಮರ ಭಾವನೆಗೆ ಧಕ್ಕೆಯಾಗುತ್ತಿದ್ದರೂ ಸರಕಾರ ಯಾವುದೇ ರೀತಿಯಲ್ಲಿ ಸ್ಪಂದಿಸದೆ ಇರುವ ಕಾರಣ ಬೃಹತ್ ಪ್ರತಿಭಟನೆ ಆಯೋಜಿಸಿರುವುದಾಗಿ ತಿಳಿಸಿದರು.
ಡಿಸೆಂಬರ್ 3ರಂದು ನಗರದ ಗದ್ದುಗೆ ಬಳಿಯಿಂದ ಗಾಂಧಿ ಮೈದಾನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಬಳಿಕ ನಡೆಯುವ ಸಭೆಯಲ್ಲಿ ವಿವಿಧ ಹಕ್ಕೊತ್ತಾಯಗಳ ಮೂಲಕ ಸರಕಾರದ ಗಮನ ಸೆಳೆೆಯಲಾಗುವುದು ಎಂದು ಕೆ.ಎಂ. ಇಬ್ರಾಹಿಂ ತಿಳಿಸಿದರು. ಮುಸ್ಲಿಂ ಸಮಾಜದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಮಾತನಾಡಿ, ಸಾಮಾಜಿಕ, ಶೈಕ್ಷಣಿಕ ಹಾಗೂ ಉದ್ಯೋಗ ಕ್ಷೇತ್ರದ ಸಬಲೀಕರಣದ ಉದ್ದೇಶವನ್ನು ಸಮಾಜ ಹೊಂದಿದೆ ಎಂದರು. ಐಗೂರಿನ ಮಸೀದಿಯಲ್ಲಿ ಕುರ್‌ಆನ್ ಸುಟ್ಟುಹಾಕಿದ ಘಟನೆ ನಡೆದು 15 ದಿನಗಳು ಕಳೆೆದರೂ ಇಲ್ಲಿಯವರೆಗೆ ಆರೋಪಿಗಳನ್ನು ಬಂಧಿಸಿಲ್ಲ. ಜಿಲ್ಲೆಯ ವಿವಿಧೆಡೆ ಪ್ರತಿಭಟನೆಗಳು ಕೂಡ ನಡೆದಿವೆ ಎಂದರು.
ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಸೂಕ್ತ ಕ್ರಮಕ್ಕಾಗಿ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ, ಇಲ್ಲಿಯವರೆಗೆ ತಪ್ಪಿತಸ್ಥರ ಬಂಧನವಾಗಿಲ್ಲ. ಅಲ್ಪಸಂಖ್ಯಾತರ ಮತ ಪಡೆದು ಅಧಿಕಾರದಲ್ಲಿ ಇರುವವರು ಯಾವುದೇ ಸ್ಪಂದನೆ ನೀಡುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಹಾಗೂ ವಿಧಾನ ಪರಿಷತ್ ಸದಸ್ಯ ವೀಣಾ ಅಚ್ಚಯ್ಯ ಅವರು ಐಗೂರು ಘಟನೆಯ ಬಗ್ಗೆ ವಿಶೇಷ ಸಭೆ ಕರೆದು ಸೂಕ್ತ ಕ್ರಮಕ್ಕೆ ಮುಂದಾಗಿಲ್ಲ. ಜಿಲ್ಲೆಯ ಶಾಸಕರು ಮತ್ತು ಸಂಸದರು ಸಾಂತ್ವನ ಹೇಳದೆ ಮೌನ ವಹಿಸಿರುವುದನ್ನು ಗಮನಿಸಿದರೆ ಪವಿತ್ರ ಕುರ್‌ಆನ್ ಗ್ರಂಥವನ್ನು ಸುಟ್ಟ ಕ್ರಮವನ್ನು ಸಮರ್ಥಿಸಿಕೊಂಡಂತೆ ಕಂಡು ಬರುತ್ತಿದೆ ಎಂದು ಅಬ್ದುಲ್ ಮಜೀದ್ ಆರೋಪಿಸಿದರು.
ಬಿಜೆಪಿ ಮುಂದಿನ ಚುನಾವಣೆಗಳಲ್ಲಿ ಮುಸ್ಲಿಂ ಮತಗಳು ಬೇಡವೆಂದು ಬಹಿರಂಗವಾಗಿ ಘೋಷಿಸಲಿ ಎಂದು ಅವರು ಸವಾಲು ಹಾಕಿದ ಅವರು, ಪಶು ಸಂಗೋಪನಾ ಇಲಾಖೆಯ ಸಚಿವ ಎ. ಮಂಜು, ತಪ್ಪು ಮಾಡಿದವರನ್ನು ಬಂಧಿಸುವಂತೆ ಪೊಲೀಸ್ ಇಲಾಖೆಗೆ ಆದೇಶ ನೀಡದೆ ಕೇರಳದಿಂದ ಬಂದವರು ಈ ಕೃತ್ಯ ಮಾಡಿದ್ದಾರೆ ಎಂದು ಹೇಳಿಕೆಯನ್ನಷ್ಟೇ ನೀಡಿರುವುದು ಖಂಡನೀಯ ಎಂದು ಅಬ್ದುಲ್ ಮಜೀದ್ ಅಸಮಾಧಾನ ವ್ಯಕ್ತಪಡಿಸಿದರು.
 ಕಾರ್ಯದರ್ಶಿ ಅಮೀನ್‌ಮೊಹ್ಸಿನ್ ಮಾತನಾಡಿ, ಐಗೂರು ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿದರು. ಕೊಡ್ಲಿಪೇಟೆ, ಕುಶಾಲನಗರ, ಕಂಡಕೆರೆ ವ್ಯಾಪ್ತಿಗಳಲ್ಲಿ ಈ ಹಿಂದೆ ಮಸೀದಿಗಳ ವ್ಯಾಪ್ತಿಯಲ್ಲಿ ಅಹಿತಕರ ಘಟನೆಗಳು ನಡೆದು ದೂರು ದಾಖಲಾಗಿದ್ದರೂ ಇಲ್ಲಿಯವರೆಗೆ ಆರೋಪಿಗಳ ಬಂಧನವಾಗದಿರುವುದೇ ಈ ರೀತಿಯ ಪ್ರಕರಣಗಳು ಮರುಕಳಿಸಲು ಕಾರಣ ಎಂದು ಆರೋಪಿಸಿದರು.
 ಐಗೂರು ಪ್ರಕರಣವನ್ನು ಪೊಲೀಸರಿಂದ ಭೇದಿಸಲು ಸಾಧ್ಯವಾಗದಿದ್ದಲ್ಲಿ ಸಿಐಡಿ ತನಿಖೆೆಗೆ ಒಪ್ಪಿಸಬೇಕೆಂದು ಅಮೀನ್ ಮೊಹ್ಸಿನ್ ಒತ್ತಾಯಿಸಿದರು. ಮುಸ್ಲಿಂ ಸಮಾಜದ ಕಾರ್ಯಾಧ್ಯಕ್ಷ ಪಿ.ಎಂ.ಖಾಸಿಂ, ಖಜಾಂಚಿ ಉಸ್ಮಾನ್ ಹಾಜಿ, ಪ್ರಮುಖರಾದ ಮುಹಮ್ಮದ್ ಹನೀಫ್, ಹಕೀಂ, ಎ.ಬಿ. ಉಮ್ಮರ್, ಮನ್ಸೂರ್, ಶರೀಫ್, ಉಸ್ಮಾನ್, ಕೆ.ಎ.ಆದಂ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News