ಅಮಿತ್ ಶಾ ಕೊಲೆಗಡುಕ: ಸಿದ್ದರಾಮಯ್ಯ ಕಟು ಟೀಕೆ
ಬೆಂಗಳೂರು, ನ.28: ನಮ್ಮ ಸರಕಾರ ಕುರಿತು ಮಾತನಾಡಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ಯಾವುದೇ ನೈತಿಕತೆ ಇಲ್ಲ. ಅವರೊಬ್ಬ ಕೊಲೆಗಡುಕ. ಮೋದಿ ಪ್ರಧಾನಿಯಾಗಿರದಿದ್ದರೆ ಶಾ ಜೈಲಿನಲ್ಲಿ ಇರಬೇಕಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಕಿದ್ದಾರೆ.
ಸೋಮವಾರ ನಗರದ ಅರಮನೆ ಮೈದಾನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರವಿವಾರ ನಗರದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಏಕತಾ ಸಮಾವೇಶದಲ್ಲಿ ಸಿದ್ದರಾಮಯ್ಯ ಸರಕಾರ ಅತ್ಯಂತ ಭ್ರಷ್ಟ ಸರಕಾರವೆಂದು ಟೀಕಿಸಿದ್ದ ಅಮಿತ್ ಶಾ ವಿರುದ್ಧ ಹರಿಹಾಯ್ದರು. ಅಮಿತ್ ಶಾ ಒಬ್ಬ ಕೊಲೆ ಪಾತಕ. ನಮ್ಮ ಸರಕಾರವನ್ನು ಟೀಕಿಸುವ ಯಾವುದೇ ನೈತಿಕ ಹಕ್ಕು ಅವರಿಗಿಲ್ಲ ಎಂದು ಗುಡುಗಿದರು.
ಅತ್ಯಂತ ಕೆಟ್ಟ ಸರಕಾರ ನಡೆಸಿದ್ದ ಯಡ್ಡಿಯೂರಪ್ಪನವರನ್ನು ಪಕ್ಕದಲ್ಲೇ ಕೂರಿಸಿಕೊಂಡು ನಮ್ಮ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎನ್ನಲು ಅವರಿಗೆೆ ಹಕ್ಕಿಲ್ಲ. ಇವರ ಬಗ್ಗೆ ಎನು ಹೇಳಬೇಕು ನನಗೆ ಗೊತ್ತಾಗುತ್ತಿಲ್ಲ. ಅವರಿಂದ ನಾವು ಪಾಠ ಕಲಿಯಬೇಕಾಗಿಲ್ಲ ಎಂದು ತಿರುಗೇಟು ನೀಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸದ ಅವರು, ಮಹಾದಾಯಿ, ಕಾವೇರಿ ವಿಚಾರದಲ್ಲಿ ಬಾರಿ ಅನ್ಯಾಯವಾಗಿದೆ ಎಂದು ಹೋದಲೆಲ್ಲಾ ಹೇಳುವ ಯಡಿಯೂರಪ್ಪ ಅವರು, ಮುಖ್ಯಮಂತ್ರಿಯಾಗಿದ್ದಾಗ ಈ ವಿವಾದ ಬಗೆಹರಿಸಲಿಲ್ಲವೇಕೆ ಎಂದು ಪ್ರಶ್ನಿಸಿದರು.
ನೋಟು ರದ್ಧತಿ ವಿಚಾರದಲ್ಲಿ ಪ್ರಧಾನಿ ನರೇಂದ್ರಮೋದಿ ಪೂರ್ವ ಸಿದ್ಧತೆ ನಡೆಸದೆ ಆತುರದ ನಿರ್ಧಾರ ಕೈಗೊಂಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸೋಲು ನಿಶ್ಚಿತ. ರಾಜ್ಯ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ‘ಆಕ್ರೋಶ್ ದಿವಸ್’ಕ್ಕೆ ಪ್ರತಿಯಾಗಿ ಯುವ ಬ್ರಿಗೇಡ್ ಸಂತಸ ದಿವಸ್ ಆಚರಿಸಿ, ಸಿಹಿ ಹಂಚುತ್ತಿರುವ ಬಗ್ಗೆ ಗೇಲಿ ಮಾಡಿದ ಸಿದ್ದರಾಮಯ್ಯ, ಜನರು ಬ್ಯಾಂಕು, ಎಟಿಎಂಗಳ ಮುಂದೆ ಕ್ಯೂನಲ್ಲಿ ನಿಂತು ಕಷ್ಟಪಟ್ಟು ನೋಟು ಪಡೆಯುತ್ತಿರುವುದನ್ನು ಕಂಡು ಸಿಹಿ ಹಂಚುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಬಂದ್‌ಗೆ ಕರೆ ನೀಡಿಯೇ ಇಲ್ಲ, ಅವ್ಯವಸ್ಥೆಯ ವಿರುದ್ಧ ಪ್ರತಿಭಟನೆ ಮಾಡಲಾಗುತ್ತಿದೆ. ಆದರೂ ಬಿಜೆಪಿ ಮುಖಂಡರು ಅನಗತ್ಯವಾಗಿ ಸಂಭ್ರಮ ಆಚರಿಸಿ ಸಿಹಿ ಹಂಚುತ್ತಿದ್ದಾರೆ. ಕಾಂಗ್ರೆಸ್ ಕಪ್ಪುಹಣವನ್ನು ಬೆಂಬಲಿಸುತ್ತಿಲ್ಲ, ಕಾಳಧನಿಕರನ್ನು ಮತ್ತು ಖೋಟಾನೋಟುಗಳನ್ನು ಮಟ್ಟ ಹಾಕಬೇಕು ಎಂಬುದು ಕೂಡ ಕಾಂಗ್ರೆಸ್‌ನ ಉದ್ದೇಶ ಎಂದು ಹೇಳಿದರು.