ಶಿವಮೊಗ್ಗ: ಒಂದು ಲಕ್ಷ ರೂ.ಲಂಚ ನೀಡದಿದ್ದರೆ ಕೆಲಸದಿಂದ ವಜಾ : ಗ್ರಾಪಂ ಸದಸ್ಯರಿಂದ ವಿಕಲಚೇತನ ನೀರುಗಂಟಿಗೆ ಬೆದರಿಕೆ
ಸಂತ್ರಸ್ತನಿಂದ ಸಿಇಒಗೆ ದೂರು
ಶಿವಮೊಗ್ಗ, 29: ಕೆಲಸದಲ್ಲಿ ಮುಂದುವರಿಯಬೇಕಾದರೆ ಒಂದು ಲಕ್ಷ ರೂ. ನೀಡಬೇಕು. ಇಲ್ಲದಿದ್ದರೆ ಕೆಲಸದಿಂದ ತೆಗೆದು ಹಾಕಲಾಗುವುದು ಎಂದು ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಒತ್ತಡ ಹಾಕುತ್ತಿದ್ದಾರೆ. ತಾವು ಮಧ್ಯಪ್ರವೇಶಿಸಿ ತಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿ ರಾಮನಗರ ಗ್ರಾ.ಪಂ. ವ್ಯಾಪ್ತಿಯ ಹಿಟ್ಟೂರು ಗ್ರಾಮದ ಎ.ಕೆ.ಹುಚ್ಚುರಾಯಪ್ಪ ಎಂಬವರು ಮಂಗಳವಾರ ನಗರದ ಜಿ.ಪಂ. ಕಚೇರಿಯಲ್ಲಿ ಸಿಇಒ ಡಾ. ಕೆ. ರಾಕೇಶ್‌ಕುಮಾರ್‌ರವರಿಗೆ ಮನವಿ ಪತ್ರ ಸಲ್ಲಿಸಿದರು.
ಆರೋಪವೇನು: ತಾವು 2000ನೆ ಇಸವಿಯಲ್ಲಿ ನೀರುಗಂಟಿಯಾಗಿ ಸೇವೆಗೆ ಸೇರ್ಪಡೆಯಾಗಿದ್ದೆ. ಕರ್ತವ್ಯ ನಿರ್ವಹಿಸುವ ಅವಧಿಯಲ್ಲಿ ವಿಷಕಾರಿ ಹಾವೊಂದು ಕಚ್ಚಿದ್ದ ಪರಿಣಾಮದಿಂದ ಕಾಲೊಂದನ್ನು ವೈದ್ಯರು ತುಂಡರಿಸಿದ್ದರು. ತದನಂತರ ರಸ್ತೆ ಅಪಘಾತದಲ್ಲಿ ಕೈಯೊಂದು ಮುರಿದು ಹೋಗಿತ್ತು. ತಮ್ಮ ಪರಿಸ್ಥಿತಿ ಗಮನಿಸಿದ ಗ್ರಾ.ಪಂ. ಆಡಳಿತ ತನ್ನ ಕೆಲಸವನ್ನು ಪುತ್ರನ ಮೂಲಕ ಮಾಡಿಸಲು ಅವಕಾಶ ಕಲ್ಪಿಸಿದ್ದರು. ತನ್ನ ಸೇವಾವಧಿ ಪೂರ್ಣಗೊಂಡ ನಂತರ ಪುತ್ರನನ್ನೇ ಕೆಲಸದಲ್ಲಿ ಮುಂದುವರಿಸುವ ಭರವಸೆ ನೀಡಿದ್ದರು. ಅದರಂತೆ ಕಳೆದ ಸುಮಾರು 13 ವರ್ಷಗಳಿಂದ ಪುತ್ರನೇ ನೀರುಗಂಟಿ ಕೆಲಸ ಮಾಡುತ್ತಿದ್ದಾನೆ ಎಂದು ಎ.ಕೆ.ಹುಚ್ಚರಾಯಪ್ಪತಿಳಿಸಿದ್ದಾರೆ.
ಪ್ರಸ್ತುತ ತಮಗೆ 60 ವರ್ಷ ಪೂರ್ಣಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ತಮ್ಮ ಪುತ್ರನನ್ನು ಅಧಿಕೃತವಾಗಿ ಕೆಲಸದಲ್ಲಿ ಮುಂದುವರಿಸುವಂತೆ ಮನವಿ ಮಾಡುತ್ತಿದ್ದರೂ ಗ್ರಾ.ಪಂ. ಆಡಳಿತ ಯಾವುದೇ ಕ್ರಮಕೈಗೊಂಡಿಲ್ಲ. ಇದೀಗ ಮುಂದಿನ ತಿಂಗಳು ತಮ್ಮನ್ನು ಕೆಲಸದಿಂದ ತೆಗೆದು ಹಾಕಿ, ಬೇರೊಬ್ಬರನ್ನು ನೇಮಿಸಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಗ್ರಾಮ ಪಂಚಾಯತ್‌ನ ಕೆಲ ಸಿಬ್ಬಂದಿ ಒಂದು ಲಕ್ಷ ರೂ. ನೀಡಿದರೆ ನಿಮ್ಮ ಪುತ್ರನನ್ನೇ ಕೆಲಸದಲ್ಲಿ ಮುಂದುವರಿಸುವುದಾಗಿ ಹೇಳುತ್ತಿದ್ದಾರೆ. ತಾವು ಕಡುಬಡವನಾಗಿದ್ದು ಅಷ್ಟೊಂದು ಹಣ ತಮ್ಮ ಬಳಿ ಇಲ್ಲವಾಗಿದೆ. ಮುಂದಿನ ತಿಂಗಳು ಪುತ್ರಿಯ ವಿವಾಹ ಇಟ್ಟುಕೊಂಡಿದ್ದೇನೆ. ಇದೀಗ ಪುತ್ರನಿಗೆ ಕೆಲಸ ನೀಡುವುದಿಲ್ಲ ಎಂಬ ಮಾತಿನಿಂದ ಇಡೀ ಕುಟುಂಬ ದಿಕ್ಕು ಕಾಣದೆ ಕಂಗಾಲಾಗುವಂತಾಗಿದೆ. ಅಧಿಕಾರಿಗಳು ತಮಗೆ ನ್ಯಾಯ ಕಲ್ಪಿಸಿಕೊಡಬೇಕು ಎಂದು ಎ.ಕೆ.ಹುಚ್ಚರಾಯಪ್ಪಅವರು ಸಿಇಒ ಡಾ. ಕೆ. ರಾಕೇಶ್‌ಕುಮಾರ್ ಅವರಿಗೆ ಮನವಿ ಮಾಡಿದ್ದಾರೆ. ಮನವಿ ಸ್ವೀಕರಿಸಿ ಮಾತನಡಿದ ಸಿಇಒ ಡಾ. ಕೆ. ರಾಕೇಶ್‌ಕುಮಾರ್, ಸಂಬಂಧಿಸಿದ ಗ್ರಾ.ಪಂ. ಅಧಿಕಾರಿಯಿಂದ ಸಮಗ್ರ ಮಾಹಿತಿ ಪಡೆದು ಕಾನೂನು ವ್ಯಾಪ್ತಿಯಲ್ಲಿ ನ್ಯಾಯ ಕಲ್ಪಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು. ದೃತಿಗೆಡುವ ಅಗತ್ಯ ಇಲ್ಲ ಎಂದು ಎ.ಕೆ.ಹುಚ್ಚರಾಯಪ್ಪರಿಗೆ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಬೋಜ್ಯ ನಾಯ್ಕಿ, ರೈತ ಮುಖಂಡ ಹಿಟ್ಟೂರು ರಾಜು, ಶಂಕರಪ್ಪಮೊದಲಾದವರಿದ್ದರು.