ನಾಟಿವೈದ್ಯೆ ಗಂಗಾಭವಾನಮ್ಮ ನಿಧನ
ಸಾಗರ, ನ.29: ತಾಲೂಕಿನ ಮಾವಿನಸರ ಗ್ರಾಮದ ನಿವಾಸಿ ನಾಟಿವೈದ್ಯೆ ಗಂಗಾಭವಾನಮ್ಮ (75) ಸೋಮವಾರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಮೃತರು ಪತಿ, ಮೂವರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಗಂಗಾಭವಾನಮ್ಮ ಅವರು ಕಳೆದ ಮೂರು ದಶಕಗಳಿಂದ ನಾಟಿವೈದ್ಯರಾಗಿ ಈ ಭಾಗದಲ್ಲಿ ಪ್ರಖ್ಯಾತಿ ಹೊಂದಿದ್ದರು. ಮಹಿಳೆಯರ ಅನೇಕ ಕಾಯಿಲೆಗಳಿಗೆ ಔಷಧ ಕೊಡುವ ಜೊತೆಗೆ ರಕ್ತಹೀನತೆ, ಮಧುಮೇಹ, ರಕ್ತದೊತ್ತಡ ಸೇರಿದಂತೆ ಬಹುತೇಕ ಕಾಯಿಲೆಗಳಿಗೆ ಔಷಧ ನೀಡುತ್ತಿದ್ದರು.
ಇವರ ಬಳಿ ಔಷಧ ಪಡೆಯಲು ರಾಜ್ಯದ ವಿವಿಧ ಭಾಗಗಳಿಂದ ರೋಗಿಗಳು ಬರುತ್ತಿದ್ದರು. ಗಂಗಾಭವಾನಮ್ಮ ಅವರು ತಾನು ಕಲಿತ ನಾಟಿ ವೈದ್ಯ ಪದ್ಧತಿಯನ್ನು ಇತರರಿಗೂ ಕಲಿಸಿಕೊಡುವ ಮೂಲಕ ಅದನ್ನು ಮುಂದಿನ ಪೀಳಿಗೆಗೆ ಸಾಗಿಸುವ ಸಾರ್ಥಕ ಕೆಲಸವನ್ನು ಮಾಡಿದ್ದರು.
ಇವರ ಸಾಧನೆಯನ್ನು ಗುರುತಿಸಿ, ವೃಕ್ಷಲಕ್ಷ ಆಂದೋಲನ ಸೇರಿದಂತೆ ಅನೇಕ ಸಂಸ್ಥೆಗಳು ಸನ್ಮಾನಿಸಿವೆ. ಸಂತಾಪ: ಗಂಗಾಭವಾನಮ್ಮ ಅವರ ನಿಧನಕ್ಕೆ ವೃಕ್ಷಲಕ್ಷ ಆಂದೋಲನದ ಸಂಚಾಲಕ ಬಿ.ಎಚ್.ರಾಘವೇಂದ್ರ, ಪರಿಸರ ತಜ್ಞ ಆನೆಗುಳಿ ಸುಬ್ರಾವ್, ವರದಾಮೂಲ ಶ್ರೀಕೃಪಾ ಯುವಕ ಮಂಡಳಿ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್ ಇನ್ನಿತರರು ಸಂತಾಪ ಸೂಚಿಸಿದ್ದಾರೆ.
ಆಟೊ ಚಾಲಕ ಆತ್ಮಹತ್ಯೆ ಮಡಿಕೇರಿ ನ.29: ಆಟೊ ಚಾಲಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಕೊಹಿನೂರ್ ರಸ್ತೆ ಬಡಾವಣೆಯಲ್ಲಿ ನಡೆದಿದೆ.
ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಲವ(42) ಎಂಬಾತ ಸಾವಿಗೆ ಶರಣಾಗಿದ್ದಾರೆ. ಮೃತ ಚಾಲಕ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಶಾಲಾ ಕ್ರೀಡೋತ್ಸವದಲ್ಲಿ ಪಾಲ್ಗೊಂಡ ಮಕ್ಕಳು ಮನೆಗೆ ಹಿಂದಿರುಗಿದ ಸಂದರ್ಭ ಘಟನೆ ಬೆಳಕಿಗೆ ಬಂದಿದೆ. ನಗರ ಠಾಣಾ ಪೊಲೀಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.