ಶಿವಮೊಗ್ಗದಲ್ಲಿ ಬೆಂಗಳೂರಿನ ಕುಖ್ಯಾತ ಕಳ್ಳನ ಸೆರೆ
ಶಿವಮೊಗ್ಗ, ನ. 29: ಬೆಂಗಳೂರು, ಶಿವಮೊಗ್ಗ, ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆ ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿದ್ದ ಬೆಂಗಳೂರು ಮೂಲದ ಅಂತರ್‌ಜಿಲ್ಲಾ ಕಳವು ಆರೋಪಿಯೋರ್ವನನ್ನು ಬಂಧಿಸುವಲ್ಲಿ ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಂಗಳೂರು ದೇವನಹಳ್ಳಿ ಏರ್‌ಪೋರ್ಟ್ ರಸ್ತೆಯ ಶಾಂತಿನಗರದ ನಿವಾಸಿ ಸೈಯದ್ ನವಾಬ್ ಯಾನೆ ರಾಜಿ(36) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಈತ ಕಾರು ಚಾಲನೆಯ ಕೆಲಸ ಮಾಡುತ್ತಿದ್ದ. ಬಂಧಿತ ಆರೋಪಿಯು ವಿವಿಧೆಡೆ ಕಳವು ಮಾಡಿದ್ದ 7.8 ಲಕ್ಷ ರೂ. ವೌಲ್ಯದ 292 ಗ್ರಾಂ ತೂಕದ ಬಂಗಾರ ಹಾಗೂ 60 ಗ್ರಾಂ ತೂಕದ ಬೆಳ್ಳಿಯ ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇಸ್ ವಿವರ: ಶಿವಮೊಗ್ಗ ನಗರ ಹಾಗೂ ಸುತ್ತಮುತ್ತಲು ನಡೆದಿದ್ದ ಕಳ್ಳತನ ಕೃತ್ಯಗಳ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆಯವರು, ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಬಸವರಾಜಪ್ಪ ನೇತೃತ್ವದಲ್ಲಿ ಸಬ್ ಇನ್‌ಸ್ಪೆಕ್ಟರ್ ಉಮೇಶ್‌ಕುಮಾರ್, ಪುಷ್ಪಾರವನ್ನೊಳಗೊಂಡಂತೆ ವಿಶೇಷ ಪೊಲೀಸ್ ತಂಡ ರಚನೆ ಮಾಡಿದ್ದರು.
ಈ ತಂಡವು ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ನಗರದ ಗೋಪಾಳದ ಬಸ್‌ನಿಲ್ದಾಣದ ಬಳಿ ಶಂಕಾಸ್ಪದವಾಗಿ ತಿರುಗಾಡುತ್ತಿದ್ದ ಆರೋಪಿಯನ್ನು ಅನುಮಾನದ ಮೇರೆಗೆ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿತ್ತು. ಈ ವೇಳೆ ಆರೋಪಿಯು ನಗರ ಸೇರಿದಂತೆ ವಿವಿಧೆಡೆ ಕಳವು ಕೃತ್ಯದಲ್ಲಿ ಭಾಗಿಯಾಗಿದ್ದ ವಿವರ ಬಾಯ್ಬಿಟ್ಟಿದ್ದ. ಶಿವಮೊಗ್ಗ ನಗರದ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 7 ಕನ್ನ ಕಳವು, ದೊಡ್ಡಪೇಟೆ ಠಾಣಾ ವ್ಯಾಪ್ತಿಯಲ್ಲಿ 1, ಬೆಂಗಳೂರಿನ ಯಶವಂತಪುರ ಠಾಣಾ ವ್ಯಾಪ್ತಿಯಲ್ಲಿ 1, ಮೈಸೂರಿನ ನರಸಿಂಹರಾಜಪುರ ಠಾಣಾ ವ್ಯಾಪ್ತಿಯಲ್ಲಿ 1 ಸೇರಿದಂತೆ ಒಟ್ಟು 10 ಕಳವು ಕೃತ್ಯಗಳಲ್ಲಿ ಆರೋಪಿ ಭಾಗಿಯಾಗಿದ್ದ ವಿಷಯ ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿತ್ತು. ಆರೋಪಿ ನೀಡಿದ ಮಾಹಿತಿಯ ಮೇರೆಗೆ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.
ಅಂತರ್‌ಜಿಲ್ಲಾ ಕಳವು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ವಿಶೇಷ ಪೊಲೀಸ್ ತಂಡಕ್ಕೆ ಎಸ್ಪಿ ಅಭಿನವ್ ಖರೆಯವರು ಪತ್ರಿಕಾ ಪ್ರಕಟನೆೆಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.