ಪಿಎಫ್ಐ, ಕೆಎಫ್ ಡಿಯನ್ನು ನಿಷೇಧಿಸಿ : ಆರ್. ಅಶೋಕ್

Update: 2016-11-30 10:21 GMT

ಬೆಳಗಾವಿ (ಸುವರ್ಣ ವಿಧಾನಸೌಧ), ನ.30: ರಾಜ್ಯದಲ್ಲಿ ಆರೆಸ್ಸೆಸ್ ಕಾರ್ಯಕರ್ತರ ಕಗ್ಗೊಲೆ ಪ್ರಕರಣಗಳಲ್ಲಿ ಪಾಲ್ಗೊಂಡಿರುವ ಆರೋಪಕ್ಕೆ ಸಿಲುಕಿರುವ ಕೆಎಫ್‌ಡಿ ಮತ್ತು ಪಿಎಫ್‌ಐ ಸಂಘಟನೆಗಳನ್ನು ನಿಷೇಧಿಸಬೇಕು. ಅಲ್ಲದೆ, ಆರೆಸ್ಸೆಸ್ ಕಾರ್ಯಕರ್ತರ ಕೊಲೆ ಪ್ರಕರಣಗಳ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಗೆ ವಹಿಸಬೇಕು ಎಂದು ವಿರೋಧ ಪಕ್ಷದ ಉಪ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ.
ಗುರುವಾರ ವಿಧಾನಸಭೆಯಲ್ಲಿ ನಿಯಮ 60ರಡಿಯಲ್ಲಿ ಪೂರ್ವಭಾವಿಯಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ವಿಷಯ ಪ್ರಸ್ತಾಪಿಸಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣದಿಂದ ಬೆಂಗಳೂರಿನ ಶಿವಾಜಿನಗರದ ರುದ್ರೇಶ್ ಹತ್ಯೆ ಪ್ರಕರಣದ ವರೆಗೆ ರಾಜ್ಯದಲ್ಲಿ ಒಟ್ಟು 14 ಮಂದಿ ಆರೆಸ್ಸೆಸ್ ಕಾರ್ಯಕರ್ತರ ಹತ್ಯೆ ನಡೆದಿದ್ದು, ಎಂಟು ಮಂದಿಯ ಮೇಲೆ ಗಂಭೀರ ಸ್ವರೂಪದ ಹಲ್ಲೆಗಳಾಗಿವೆ ಎಂದರು.
 ನಿಷೇಧಿತ ಸಿಮಿ ಸಂಘಟನೆಯ ಮತ್ತೊಂದು ರೂಪವೇ ಆಗಿರುವ ಕೆಎಫ್‌ಡಿ ಮತ್ತು ಪಿಎಫ್‌ಐ ಸಂಘಟನೆಗಳಿಗೆ ಕೊಲೆ ಮತ್ತು ಕೋಮುಗಲಭೆ ಸೃಷ್ಟಿಸುವ ಸಂಬಂಧ ವಿಶೇಷ ತರಬೇತಿ ನೀಡಲಾಗುತ್ತಿದೆ. ಆರೆಸ್ಸೆಸ್ ಕಾರ್ಯಕರ್ತರ ಹತ್ಯೆ ಪ್ರಕರಣ ಸಂಬಂಧ ಇದೀಗ ಬಂಧಿಸಿರುವ ಆರೋಪಿಗಳೇನೇನೂ ಅಲ್ಲ. ಅವರ ಹಿಂದೆ ಬಹುದೊಡ್ಡ ವ್ಯಕ್ತಿಗಳು ಮತ್ತು ಶಕ್ತಿಗಳಿದ್ದು, ಅವುಗಳನ್ನು ಪತ್ತೆ ಹಚ್ಚುವ ಕೆಲಸವನ್ನು ಸರಕಾರ ಮಾಡಬೇಕು. ಆಗ ಮಾತ್ರ ದೇಶದ್ರೋಹಿ ಕೃತ್ಯಗಳನ್ನು ಮಟ್ಟ ಹಾಕಲು ಸಾಧ್ಯ ಎಂದ ಅಶೋಕ್ ಆಗ್ರಹಿಸಿದರು.
 ಆರೆಸ್ಸೆಸ್ ಕಾರ್ಯಕರ್ತರ ಕೊಲೆ ಪ್ರಕರಣಗಳೆಲ್ಲವೂ ಒಂದೇ ರೀತಿಯಲ್ಲಿ ನಡೆದಿದ್ದು, ವಿಶೇಷ ತರಬೇತಿ ಇಲ್ಲದೆ ಇಂತಹ ಕೃತ್ಯಗಳನ್ನು ನಡೆಸಲು ಸಾಧ್ಯವಿಲ್ಲ. ನಿಷೇಧಿತ ಸಿಮಿ ಸಂಘಟನೆಯ ರೂಪದಲ್ಲೆ ಕೆಎಫ್‌ಡಿ ಮತ್ತು ಪಿಎಫ್‌ಐ ಸಂಘಟನೆಗಳ ಚಟುವಟಿಕೆಗಳಿವೆ ಎಂದು ಕೇರಳ ಸರಕಾರವೂ ಅಲ್ಲಿನ ಹೈಕೋರ್ಟ್‌ಗೆ ಪ್ರಮಾಣ ಪತ್ರವನ್ನು ಸಲ್ಲಿಸಿದೆ ಎಂದು ಉಲ್ಲೇಖಿಸಿದ ಅಶೋಕ್, ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸದಂತೆ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರ ಮೇಲೆ ಒತ್ತಡ ತರುತ್ತಿರುವವರು ಯಾರು ಎಂಬುದು ಬಹಿರಂಗ ಆಗಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News