ಹೊಸ ಬದಲಾವಣೆಯೊಂದಿಗೆ 2017ನೆ ಸಾಲಿನ ಎಸೆಸೆಲ್ಸಿ ಪರೀಕ್ಷೆ
ಬೆಳಗಾವಿ(ಸುವರ್ಣ ವಿಧಾನಸೌಧ), ನ.30: 2017ನೆ ಸಾಲಿನ ಮಾರ್ಚ್ ಅಥವಾ ಎಪ್ರಿಲ್‌ನಿಂದ ಎಸೆಸೆಲ್ಸಿಗೆ ಸಂಬಂಧಿಸಿದಂತೆ ಪ್ರಶ್ನೆ ಹಾಗೂ ಉತ್ತರ ಪತ್ರಿಕೆಯನ್ನು ಪ್ರತ್ಯೇಕವಾಗಿ ವಿದ್ಯಾರ್ಥಿಗಳಿಗೆ ನೀಡಿ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ಸೇಠ್ ತಿಳಿಸಿದ್ದಾರೆ.
ವಿಧಾನಪರಿಷತ್ತಿನ ಶೂನ್ಯವೇಳೆಯಲ್ಲಿ ಬಿಜೆಪಿ ಸದಸ್ಯೆ ತಾರಾ ಅನುರಾಧಾ ಪ್ರಸ್ತಾಪಿಸಿದ ವಿಷಯಕ್ಕೆ ಲಿಖಿತ ಉತ್ತರ ನೀಡಿರುವ ಅವರು, ಎಸೆಸೆಲ್ಸಿ ಪರೀಕ್ಷೆಗೆ ಸಂಬಂಧಿಸಿದಂತೆ 2006ರ ಎಪ್ರಿಲ್‌ನಿಂದ ಪ್ರಶ್ನೋತ್ತರ ಪತ್ರಿಕೆ ಜಾರಿಗೆ ಬಂದಿದ್ದು, 2016ರ ಸಾಲಿನ ಜೂನ್‌ವರೆಗೆ ಈ ಪದ್ಧತಿಯಲ್ಲಿ ಪರೀಕ್ಷೆಯನ್ನು ನಡೆಸಲಾಗಿದೆ. ಆದರೆ, 2017ನೆ ಸಾಲಿನಿಂದ ಪ್ರಶ್ನೆ ಹಾಗೂ ಉತ್ತರ ಪತ್ರಿಕೆಯನ್ನು ಪ್ರತ್ಯೇಕವಾಗಿ ನೀಡಿ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಪ್ರಶ್ನೆ ಪತ್ರಿಕೆಯ ಸುರಕ್ಷತೆ ಮತ್ತು ಮುದ್ರಣ, ಸಾಗಾಣೆ ಹಾಗೂ ಸಂಗ್ರಹಣಾ ವ್ಯವಸ್ಥೆಯ ಸಾಮರ್ಥ್ಯವನ್ನು ಉತ್ತಮಪಡಿಸಲು ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಗಳನ್ನು ಪ್ರತ್ಯೇಕಗೊಳಿಸಲಾಗುತ್ತಿದೆ ಎಂದು ತನ್ವೀರ್‌ಸೇಠ್ ಹೇಳಿದರು.
ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪರೀಕ್ಷೆ ಮುಗಿದ ನಂತರ ಪ್ರಶ್ನೆ ಪತ್ರಿಕೆಯನ್ನು ಮನೆಗೆ ತೆಗೆದುಕೊಂಡು ಹೋಗಿ ಉತ್ತರಗಳ ಬಗ್ಗೆ ಪರಿಶೀಲಿಸಿಕೊಳ್ಳಬಹುದಾಗಿದೆ ಹಾಗೂ ಪ್ರತೀ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಸಂಗ್ರಹಿಸಿಕೊಂಡು ಪ್ರಶ್ನೆಗಳ ಬ್ಯಾಂಕು ರೀತಿಯಲ್ಲಿ ಇಟ್ಟುಕೊಳ್ಳಲು ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದರು.
ಪ್ರಶ್ನೆಗಳಿಗೆ ಮಕ್ಕಳು ಹೆಚ್ಚು ಉತ್ತರ ಪತ್ರಿಕೆಯನ್ನು ಮತ್ತು ಸುದೀರ್ಘವಾಗಿ ಉತ್ತರ ಬರೆಯಲು ಅನುಕೂಲವಾಗುತ್ತದೆ. ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಈ ಪದ್ಧತಿಯನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.