ಅಕ್ರಮ ಮರಳು ಅಡ್ಡೆಗಳ ಮೇಲೆ ದಿಢೀರ್ ದಾಳಿ
ಸಿದ್ದಾಪುರ, ಡಿ.1: ಸಿದ್ದಾಪುರ ಠಾಣಾ ವ್ಯಾಪ್ತಿಯಲ್ಲಿ ಹಗಲು ರಾತ್ರಿ ಎಗ್ಗಿಲ್ಲದೆ ನಡೆಯುತ್ತಿದ್ದ ಅಕ್ರಮ ಮರಳು ಅಡ್ಡೆಗಳ ಮೇಲೆ ಕಂದಾಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಭಾರೀ ಪ್ರಮಾಣದ ಮರಳು ತೆಪ್ಪಗಳನ್ನು ವಶಪಡಿಸಿಕೊಂಡಿದ್ದಾರೆ ಸಿದ್ದಾಪುರ ಸಮೀಪದ ಕೊಂಡಂಗೇರಿ ಹಾಗೂ ಕೂಡುಗದ್ದೆ, ಗುಹ್ಯ ಭಾಗದ ಕಾವೇರಿ ನದಿಯಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಮರಳು ದಂಧೆಕೋರರು ಪರಾರಿಯಾಗಿದ್ದಾರೆ.
ನದಿ ದಡದ ಮನೆಯೊಂದರಲ್ಲಿ ಶೇಖರಿಸಿಡಲಾಗಿದ್ದ ಅಪಾರ ವೌಲ್ಯದ ಮರಳನ್ನು ವಶಪಡಿಸಿಕೊಂಡಿದ್ದಾರೆ ಕಾವೇರಿ ನದಿ ತೀರದ ಗ್ರಾಮಗಳಾದ ಕೊಂಡಂಗೇರಿ, ಅರೇಕಾಡು, ಕರಡಿಗೋಡು, ಬೆಟ್ಟದ ಕಾಡು, ಹೊಳೆಕರೆ, ನಲ್ವತ್ತೇಕರೆ, ಬರಡಿ, ಸೇರಿದಂತೆ ಹಲವಡೆ ಅಕ್ರಮ ಮರಳು ದಂಧೆ ನಡೆಯುತ್ತಿರುವ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದಾರೆ.
ಈ ವೇಳೆ ಕಂದಾಯ ಪರಿವೀಕ್ಷಕ ಶ್ರೀನಿವಾಸ ಮಾತನಾಡಿ, ಕಾವೇರಿ ನದಿಯಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದು ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ದಾಳಿ ನಡೆಸಿ ಮರಳು ಹಾಗು ತೆಪ್ಪಗಳನ್ನು ವಶಪಡಿಸಿಕೊಂಡಿದ್ದೇವೆ. ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ಇಲಾಖೆ ಮುಂದಾಗಿದೆ ಎಂದು ಹೇಳಿದರು
ದಾಳಿ ವೇಳೆಯಲ್ಲಿ ಠಾಣಾಧಿಕಾರಿ ಸಂತೋಷ್ ಕಸೈಪ್, ಎಎಸೈ ಕುಶಾಲಪ್ಪ, ವಸಂತ್ ಕುಮಾರ್, ಮುಖ್ಯ ಪೇದೆ ಶ್ರೀನಿವಾಸ, ಹಾಗೂ ಕಂದಾಯ ಇಲಾಖೆಯ ವಿಜಯ್, ಮಂಜುನಾಥ್, ಕೃಷ್ಣ ಮಂಜು ಉಪಸ್ಥಿತರಿದ್ದರು.