ನೀರಿಗಾಗಿ ಮೂರನೆ ದಿನಕ್ಕೆ ಕಾಲಿಟ್ಟ ರೈತರ ಅಹೋರಾತ್ರಿ ಧರಣಿ
ರೈತರ ಪ್ರತಿಭಟನೆಗೆ ಕೈಜೋಡಿಸಿದ ಸಾ.ರಾ. ಮಹೇಶ್ ಇಂದು ವಿಧಾನ ಮಂಡಲ ಅಧಿವೇಶನದಲ್ಲಿ ಚರ್ಚೆ
ಕುಶಾಲನಗರ, ಡಿ.1: ಹಾರಂಗಿ ಅಚ್ಚುಕಟ್ಟು ಪ್ರದೇಶದ ರೈತರು ತಮ್ಮ ಜಮೀನುಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಪಟ್ಟಣದ ನೀರಾವರಿ ಇಲಾಖೆ ಕಚೇರಿ ಮುಂದೆ ನಡೆಸುತ್ತಿರುವ ಧರಣಿ ಮೂರನೆ ದಿನಕ್ಕೆ ಕಾಲಿಟ್ಟಿದೆ.
ರೈತರ ಪ್ರತಿಭಟನೆಗೆ ಕೈಜೋಡಿಸಿರುವ ಸಂಸದ ಸಾ.ರಾ. ಮಹೇಶ್ ಅವರು ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭಾ ಕಲಾಪದಲ್ಲಿ ನಿಯಮ 73ರ ಆಡಿಯಲ್ಲಿ ಸರಕಾರದ ಗಮನ ಸೆಳೆಯಲು ಮುಂದಾಗಿದ್ದಾರೆ ತಿಳಿದು ಬಂದಿದೆ. ಈ ವಿಚಾರವಾಗಿ ಡಿ.2ರಂದು ವಿಧಾನ ಮಂಡಲ ಅಧಿವೇಶನದಲ್ಲಿ ಚರ್ಚೆಗೆ ತೆಗೆದುಕೊಳ್ಳಲಾಗುವುದು ಎಂದು ಮಾಹಿತಿ ತಿಳಿದು ಬಂದಿದೆ.
ಧರಣಿ ನಿತರರನ್ನು ಭೇಟಿಯಾಗಿ ಮಾತನಾಡಿದ ಹಾರಂಗಿ ನೀರಾವರಿ ಅಧೀಕ್ಷಕ ಅಭಿಯಂತರ ಚಂದ್ರಕುಮಾರ್, ಹಾರಂಗಿ ಜಲಾಶಯದಲ್ಲಿ ಈಗಾಗಲೇ 1.42 ಟಿ.ಎಂ.ಸಿ ನೀರು ಸಂಗ್ರಹವಾಗಿದೆ. ರೈತರಿಗೆ ಅನುಕೂಲವಾಗುವಂತೆ 5 ದಿನಗಳ ಮಟ್ಟಿಗೆ ಕಾಲುವೆಗಳಿಗೆ ನೀರು ಹರಿಸಿದ್ದರಿಂದ 0.40 ರಷ್ಟು ಖಾಲಿಯಾಗಿದೆ. 1.02 ಟಿ.ಎಂ.ಸಿ ನೀರು ಉಳಿಯುವುದರಿಂದ ಕುಡಿಯುವ ನೀರಿಗೆ ಯಾವ ತೊಂದರೆಯೂ ಅಗುವುದಿಲ್ಲ ಎಂದು ಸರಕಾರಕ್ಕೆ ಮಾಹಿತಿ ರವಾನೆ ಮಾಡಲಾಗಿದೆ ಎಂದರು.
ಈ ಸಂದರ್ಭ ಮಾತನಾಡಿದ ರೈತ ಲಕ್ಷ್ಮೀ ನಾರಾಯಣ, ಮೂರು ದಿನಗಳಿಂದ ರೈತರು ನೀರಿಗಾಗಿ ಧರಣಿ ನಡೆಸುತ್ತಿದ್ದೇವೆ. ಆದರೆ, ಯಾವುದೇ ಜನ ಪ್ರತಿನಿಧಿಗಳು ಇಲ್ಲಿಗೆ ಭೇಟಿ ನೀಡಿಲ್ಲ. ನಮಗೆ ನೀರು ಕೊಡಿ ಇಲ್ಲ ವಿಷ ಕೊಡಿ. ನಾವು ನೀರು ಬಿಡುವವರೆಗೆ ಇಲ್ಲಿಂದ ಹೋಗುವುದಿಲ್ಲ ಎಂದು ಪಟ್ಟು ಹಿಡಿದರು.
ರೈತ ಮುಖಂಡ ಚಂದ್ರಶೇಖರ್ ಮಾತನಾಡಿ, ರಾಜ್ಯ ಸರಕಾರ ಬರಗಾಲದ ಹೆಸರಿನಲ್ಲಿ ರೈತರ ಅನ್ನ ಕಿತ್ತುಕೊಳ್ಳುತ್ತಿದೆ. ಕೇವಲ ಹತ್ತು ದಿನಗಳವರೆಗೆ ನೀರು ಬಿಟ್ಟರೆ ಈ ಭಾಗದ ಜನರು ಬದುಕುತ್ತಾರೆ. ಇಲ್ಲವೆಂದಾದರೆ ಸಾಯುತ್ತಾರೆ. ಸರಕಾರದ ಯಾವುದೇ ಪರಿಹಾರ ನಮಗೆ ಬೇಡ ಎಂದು ಗುಡುಗಿದ ಅವರು, ನಮಗೆ ನೀರು ಕೊಡಿ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಕೃಷ್ಣೇಗೌಡ, ಕೆ.ನಾಗರಾಜ್, ಕುಮಾರ್, ಸಣ್ಣಕೇಶವ, ಸುಂದರೇಶ್ ಗೌಡ, ದೇವೇಂದ್ರಪ್ಪ, ಯೋಗೇಶ್ ಗೌಡ, ಬಿ.ಎನ್.ಸೋಮಪ್ಪ, ಪರಮೇಶ್, ಬಿ.ಶಿವಣ್ಣ ಸೇರಿದಂತೆ 100ಕ್ಕೂ ಅಧಿಕ ಮಂದಿ ರೈತರು ಧರಣಿಯಲ್ಲಿ ಭಾಗವಹಿಸಿದ್ದರು.
ಅಲ್ಲದೆ, ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಕೆ.ಕೃಷ್ಣ ಅವರು ರೈತರನ್ನು ಭೇಟಿ ಮಾಡಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಧರಣಿಯ ಪ್ರದೇಶದಲ್ಲಿ ಪೊಲಿಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.
ಕೆ.ಎಸ್.ಆರ್.ಪಿ ತುಕಡಿಯೊಂದಿಗೆ, ಸಿಐ ಕ್ಯಾತೇಗೌಡ ಮತ್ತು ಎಸೈ ಜಗದೀಶ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತು.