ಕಲಬುರ್ಗಿ ಹಂತಕರ ಶೀಘ್ರ ಪತ್ತೆಯಾಗಲಿ

Update: 2016-12-02 11:55 GMT

ರಾಜ್ಯದೊಳಗಿರುವ ಅಪನಂಬಿಕೆಯ ವಾತಾವರಣ ತೊಲಗಲಿ

ರಾಯಚೂರು, ಡಿ. 1: ಹಿರಿಯ ಸಾಹಿತಿ, ವಿಮರ್ಶಕ, ಸಂಶೋಧಕ ಎಂ. ಎಂ. ಕಲಬುರ್ಗಿಯವರನ್ನು ಕೊಂದ ಹಂತಕರನ್ನು ಶೀಘ್ರ ಪತ್ತೆ ಹಚ್ಚಿ, ನಿಧಾನದ್ರೋಹದ ಕಳಂಕದಿಂದ ಸರಕಾರ ಮುಕ್ತವಾಗಬೇಕು ಎಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕತೆಯನ್ನು ವಹಿಸಿ, ಹಿರಿಯ ಸಾಹಿತಿ ನಾಡೋಜ ಡಾ. ಬರಗೂರು ರಾಮಚಂದ್ರ ಪ್ಪ ಅವರು ಒತ್ತಾಯಿಸಿದ್ದಾರೆ.

ರಾಯಚೂರಿನ ಕೃಷಿ ವಿವಿ ಆವರಣದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ನುಡಿಹಬ್ಬವನ್ನುದ್ದೇಶಿಸಿ ಬರಗೂರು ಸಮ್ಮೇಳನಾಧ್ಯಕ್ಷ ಸ್ಥಾನದಿಂದ ಅವರು ಮಾತನಾಡುತ್ತಿದ್ದರು. ತನ್ನ ಭಾಷಣವನ್ನು ಕಲಬುರ್ಗಿಯಯವರ ದಾರುಣ ಕೊಲೆಯನ್ನು ಸ್ಮರಿಸಿಕೊಂಡು ಆರಂಭಿಸಿದ ಬರಗೂರು, ಭಿನ್ನಾಭಿಪ್ರಾಯಗಳನ್ನು ಬಲಿಪೀಠವಾಗಿಸಿದ ಆ ದಾರುಣದ ದಿನದ ನೆನಪು ನುಗ್ಗಿ ಬರುತ್ತಿರುವಾಗ ಎಂ. ಎಂ. ಕಲಬುರ್ಗಿಯವರ ಚೇತನಕ್ಕೆ ನನ್ನ ನಮನಗಳನ್ನು ಸಲ್ಲಿಸುತ್ತೇವೆ ಎಂದರು.

ತನ್ನ ಭಾಷಣದುದ್ದಕ್ಕೂ ಕನ್ನಡ ಏಕಿಕರಣದ ಕಡೆಗೆ ಬೆಳಕು ಚೆಲ್ಲಿದ ಬರಗೂರು ರಾಮಚಂದ್ರಪ್ಪ, ಭಾಷೆ ಮತ್ತು ಭೂಗೋಳವನ್ನು ಬೆಸೆದ ಏಕೀಕರಣವನ್ನು ಮಾನಸಿಕ ಏಕೀರಣದ ಸಂದರ್ಭದಲ್ಲಿ ವಿಫಲವಾಗುತ್ತಿರುವುದರ ಕುರಿತು ಆತಂಕ ವ್ಯಕ್ತಪಡಿಸಿದರು. ಏಕೀಕರಣದಿಂದ ಪ್ರತ್ಯೇಕೀಕರಣದ ಕಿರುದನಿಯತ್ತ ವಾಲುತ್ತಿರುವ ವರ್ತಮಾನದ ಈ ಸಂದರ್ಭದಲ್ಲಿ ಆತ್ಮಾವಲೋಕನ ಅತ್ಯಗತ್ಯ ಎಂದ ಅವರು, ಭಾಷಾಭಿಮಾನಕ್ಕೆ ಭೂತಕಾಲ ಮತ್ತು ವರ್ತಮಾನಗಳ ಉಚಿತಾನುಸಂಧಾನ ಮುಖ್ಯ. ಭೂತದಲ್ಲೇ ಹೂತು ಹೋಗುವುದು ಕೇವಲ ಕನವರಿಕೆಯಾಗುತ್ತದೆ. ವರ್ತಮಾನವೇ ಸರ್ವಸ್ವ ಎಂದುಕೊಂಡರೆ ಪರಂಪರೆಯ ಪ್ರಜ್ಞೆ ಪತನಗೊಳ್ಳುತ್ತದೆ. ಆದುದರಿಂದ ಒಂದರಿಂದ ಇನ್ನೊಂದನ್ನು ಅರಿಯುವ ಅರ್ಥಪೂರ್ಣತೆ ಮುಖ್ಯ ಎಂದು ಅವರು ಅಭಿಪ್ರಾಯಪಟ್ಟರು.

ಭಾಷೆ ಮತ್ತು ಭೋಗೋಳದ ಸಂಬಂಧವಷ್ಟೇ ಕನ್ನಡಾಭಿಮಾನವಲ್ಲ. ಭೂಗೋಳ ಮಿತಿಯ ಚಿಂತನೆಯೊಂದೇ ಕರ್ನಾಟಕದ ಮನಸ್ಸನ್ನು ಒಂದುಗೂಡಿಸುವ ಅಂತಿಮ ಸಾಧನವಾಗುವುದಿಲ್ಲ. ಸಾಮಾಜಿಕ ಆರ್ಥಿಕ ಸಮಾನತೆಯ ಆಧಾರದಲ್ಲಿ ಅಭಿವೃದ್ಧಿಯ ಸಮತೋಲವನ್ನು ಸಾಧಿಸದಿದ್ದರೆ ಕರ್ನಾಟಕದ ಒಳಗೆ ಒಡಕು ಹುಟ್ಟುತ್ತದೆ. ಈ ಕಾರಣದಿಂದಲೇ ಅಲ್ಲಲ್ಲಿ ಪ್ರಾದೇಶಿಕ ಅಸಮತೋಲನದ ಅಸಮಾಧಾನ ಪ್ರಕಟಗೊಳ್ಳುತ್ತಿದೆ ಎಂದು ಅವರು ಎಚ್ಚರಿಸಿದರು.

ಕರ್ನಾಟಕದ ಸಮಸ್ತ ಭೂಗೋಳದೊಳಗೆ ಇರುವ ಜನರ ಸಾಂಸ್ಕೃತಿಕ ವೈಶಿಷ್ಟಗಳನ್ನು ಉಳಿಸಿ ಬೆಳೆಸಬೇಕಾದದ್ದು ಒಂದು ಹೊಣೆಗಾರಿಕೆಯಾದರೆ, ಏಕೀಕರಣದ ಫಲವಾಗಿ ಜೊತೆಗೂಡಿದ ಪ್ರದೇಶಗಳ ಪ್ರತಿಭಾವಂತರಿಗೆ ಪ್ರತೀಕಾತ್ಮಕ ಪ್ರಾತಿನಿಧ್ಯ ನೀಡುವ ಹೊಣೆಗಾರಿಕೆಯೂ ಆಡಳಿತಗಾರರ ಮೇಲಿದೆ. ಸಾಂಸ್ಕೃತಿಕ ಸಂಘಸಂಸ್ಥೆಗಳ ಜವಾಬ್ದಾರಿಯೂ ಆಗಿದೆ. ಅಷ್ಟೇ ಏಕೆ, ಸಾಮಾಜಿಕವಾಗಿ ತುಳಿತಕ್ಕೊಳಗಾದವರನ್ನು ಪರಕೀಯತೆಯಿಂದ ಪಾರು ಮಾಡಬೇಕಾಗಿದೆ. ಸಮಗ್ರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ದೃಷ್ಟಿಕೋನದ ದೂರಗಾಮಿ ಚಿಂತನೆ ಮತ್ತು ಬದ್ಧ ಕ್ರಿಯಾಶೀಲತೆಯಿಂದ ಮಾತ್ರ ಇದು ಸಾಧ್ಯ. ಇಲ್ಲದಿದ್ದರೆ, ಬೇಕೋ ಬೇಡವೋ ಪ್ರತ್ಯೇಕ ರಾಜ್ಯದ ಬೇಡಿಕೆ ಇಡುತ್ತಿರುವವರ ದನಿ ಮುಂದೊಂದು ದಿನ ಸಮೂಹ ಸನ್ನಿಯಾಗಬಹುದು ಎಂದು ಆತಂಕವ್ಯಕ್ತಪಡಿಸಿದರು.

 ಇದೇ ಸಂದರ್ಭದಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಇಡುವವರನ್ನು ಪ್ರಶ್ನಿಸಿದ ಅವರು, ತಮ್ಮ ಸಮಸ್ಯೆಗಳಿಗೆ ಪ್ರತ್ಯೇಕತೆಯೊಂದೇ ಪರಿಹಾರವೇ ಎಂದು ಕೇಳಿಕೊಳ್ಳಬೇಕಾಗಿದೆ ಎಂದರು. ಪ್ರತ್ಯೇಕ ರಾಜ್ಯವೆನ್ನುವುದು ಭೂಗೋಳ ವಿಭಜನೆ ಮತ್ತು ಅಧಿಕಾರ ಹಂಚಿಕೆಗೆ ನೆರವಾಗಬಹುದು. ಆದರೆ ಒಂದು ರಾಜ್ಯದ ಅಭಿವೃದ್ಧಿಗೆ ಅವಷ್ಟೇ ಸಾಕಾಗುವುದಿಲ್ಲ. ನಿರ್ದಿಷ್ಟ ಭೂಗೋಳದೊಳಗೆ ಇರುವ ಸಾಮಾಜಿಕ ಪ್ರತ್ಯೇಕತೆ ಮತ್ತು ಸಾಂಸ್ಕೃತಿಕ ಪ್ರತ್ಯೇಕತೆಯು ಪ್ರತ್ಯೇಕ ರಾಜ್ಯ ರಚನೆಯಿಂದ ಪರಿಹಾರವಾಗುವುದಿಲ್ಲ. ಜಾತಿ, ವರ್ಣ, ಲಿಂಗತ್ವ ಅಸಮಾನತೆಗಳನ್ನು ಆಧರಿಸಿದ ಸಾಮಾಜಿಕ ಪ್ರತ್ಯೇಕತೆಗೆ ಸಾಮಾಜಿಕ ನ್ಯಾಯದ ರಾಜ್ಯಬೇಕು. ಪ್ರತ್ಯೇಕ ರಾಜ್ಯವಲ್ಲ ಎಂದು ಅವರು ಅಭಿಪ್ರಾಯಟ್ಟರು.

ಭಾವನಾತ್ಮಕವಾಗಿ ಮಾತ್ರವಲ್ಲ ಕ್ರಿಯಾತ್ಮಕವಾಗಿ ಕೆಲಸ ಮಾಡುವುದರಿಂದ, ಕರ್ನಾಟಕದ ಯಾವುದೇ ಪ್ರದೇಶಕ್ಕೆ ಅನ್ಯಾಯವಾದರೂ ಒಂದಾಗಿ ಪ್ರತಿಭಟಿಸುವುದರಿಂದ ಪ್ರತ್ಯೇಕತೆಯ ಧ್ವನಿಯನ್ನು ಅಳಿಸಬಹುದು. ರಾಜ್ಯದೊಳಗಿರುವ ಅಪನಂಬಿಕೆಯ ವಾತಾವರಣ ಹೋಗಬೇಕು. ಈ ನಿಟ್ಟಿನಲ್ಲಿ ಆಳುವ ಸರಕಾರಗಳ ಜವಾಬ್ದಾರಿ ದೊಡ್ಡದಾಗಬೇಕು ಎಂದು ಅವರು ಕರೆ ನೀಡಿದರು.

ಬರಗೂರು ಭಾಷಣದ ಮುಖ್ಯಾಂಶಗಳು

►ಶಿಕ್ಷಣ ಇಲಾಖೆಯಲ್ಲಿನ ಕನ್ನಡ ವಿರೋಧಿ ಅಧಿಕಾರಿಗಳನ್ನು ಕಿತ್ತೆಸೆಯಿರಿ.

►ಒಳನಾಡು, ಹೊರನಾಡು, ಗಡಿನಾಡು ಕನ್ನಡಿಗರಿಗೆ ಉದ್ಯೋಗದ ಭರವಸೆ ನೀಡಿ.

►ಕನ್ನಡ ಶಾಲೆಗಳಿಗೆ ಒಳ್ಳೆಯ ಇಂಗ್ಲೀಷ್ ಶಿಕ್ಷಕರನ್ನು ಕೊಡಿ.

►ಅಂಗನವಾಡಿ ಗಳಲ್ಲಿನ ಅಸಮಾನತೆ ಹೋಗಲಾಡಿಸಿ. ಅಂಗನವಾಡಿ ಗಳನ್ನು ಪೂರ್ವಪ್ರಾಥಮಿಕ ಶಾಲೆಗಳೆಂದು ಬದಲಾಯಿಸಿ.

►ರೈತರ ಮೇಲಿನ ಆರ್ಥಿಕ ಸರ್ಜಿಕಲ್ ದಾಳಿ ತಡೆಯಿರಿ.

►ರಾಜ್ಯದಲ್ಲಿನ ವಿವಿಗಳು ತನ್ನದೇ ಆದ ವೈಶಿಷ್ಟ್ಯತೆ ಹೊಂದಿವೆ. ಹಂಪಿ ಕನ್ನಡ ವಿ.ವಿ.ಗೆ ತನ್ನದೇ ಆದ ವಿಶೇಷತೆ ಹೊಂದಿದೆ. ಹಾಗೆ ಕೃಷಿ ವಿವಿ, ಸಂಗೀತ ವಿವಿ ,ತೋಟಗಾರಿಕೆ ವಿವಿ. ಇವುಗಳ ವೈವಿಧ್ಯತೆಗೆ ಧಕ್ಕೆ ಬಾರದಂತೆ ಏಕರೂಪ ಮಸೂದೆ ರೂಪಿಸಿ.

►ಸ್ವಾಯತ್ತತೆಯ ಕೇಂದ್ರೀಕರಣ ನಡೆದಿದೆ. ರಾಜ್ಯಗಳ ಹಕ್ಕಿಗೆ ಧಕ್ಕೆ ಬರುತ್ತಿದೆ. ಸ್ವಾಯತ್ತತೆಗೆ ಧಕ್ಕೆ ಬಾರದಂತೆ ನಡೆದುಕೊಳ್ಳಿ.

►ಸ್ವಾಯತ್ತತೆ ಹೆಸರಲ್ಲಿ ಶಿಕ್ಷಣದ ವ್ಯಾಪಾರೀಕರಣವಾಗದಿರಲಿ.

►ಜಾಗತೀಕರಣದ ಜೊತೆ ಜಾತೀಕರಣ ಅಪಾಯವೂ ಜೋರಾಗಿದೆ. ಇದನ್ನು ತಡೆಯಬೇಕಿದೆ.

►ಆಹಾರ ಸಂಸ್ಕೃತಿ ಹೆಸರಿನ ದಾಳಿಗಳಿಗೆ ವಚನ ಸಾಹಿತ್ಯದಲ್ಲಿ ಉತ್ತರವಿದೆ. ವಚನಕಾರ್ತಿ ಕಾಳವ್ವೆ ವಚನ ಉದಾಹರಿಸಿದರು.

►ಜನರ ಬಳಿಗೆ ಸರ್ಕಾರವನ್ನು ಹತ್ತಿರ ಮಾಡಲು ನಾಲ್ಕು ಸಚಿವಾಲಯ ರೂಪಿಸಿ.

►ಬಲಪಂಥೀಯ, ಎಡಪಂಥೀಯ ಎಂಬ ವಾದಗಳ ಬಿಟ್ಟು ಜನಪಂಥೀಯ ನಾಯಕತ್ವ ಬೇಕು. ಪಕ್ಷದೊಳಗಿದ್ದು ಪಕ್ಷ ಮೀರುವ, ರಾಜಕೀಯ ದೊಳಗಿದ್ದು ರಾಜಕಾರಣ ಮೀರುವ, ಧರ್ಮದೊಳಗಿದ್ದು ಧರ್ಮ ಮೀರುವ ,ಜನರಿಗಾಗಿ ಮಿಡಿಯುವ ನಾಯಕತ್ವ ಬೇಕು.

►ಕರ್ನಾಟಕ ಏಕೀಕರಣವಾಗಿದೆ. ಸಾಮಾಜಿಕವಾಗಿ, ಆರ್ಥಿಕವಾಗಿ, ಅಭಿವೃದ್ಧಿಯ ಏಕೀಕರಣವಾಗಿಲ್ಲ.

►ಸಮಗ್ರ ಅಭಿವೃದ್ಧಿಯ ಏಕೀಕರಣವಾದರೆ ಮತ್ತೆ ಭಿನ್ನವಾಗುವ ಬೇರಾಗುವ ಕೂಗು ಕೇಳಲಾರದು.

►ಕನ್ನಡದ ಸಂವೇದನೆ ,ನಾಲಿಗೆ ನೆಲದ ನುಡಿಯಾಗಬೇಕು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News